Advertisement

ಇಂದಿನಿಂದ ಶಂಕರನ ಆಟ ಶುರು

09:39 AM Nov 09, 2019 | mahesh |

ಜಬರ್‌ದಸ್ತ್ ಶಂಕರ – ಹಲವು ದಿನಗಳಿಂದ ಕರಾವಳಿಯಲ್ಲಿ ಕೇಳಿಬರುತ್ತಿರುವ ಹೆಸರಿದು. ಆ ಹೆಸರಿನೊಳಗೇನಿದೆ ಎಂದು ನೋಡುವ ಸಮಯ ಈಗ ಬಂದಿದೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರುವುದು “ಜಬರ್‌ದಸ್ತ್ ಶಂಕರ’ ಸಿನಿಮಾ ಬಗ್ಗೆ. ಈಗಾಗಲೇ ಹಾಡು, ಟ್ರೇಲರ್‌ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ “ಜಬರ್‌ದಸ್ತ್ ಶಂಕರ’ ಚಿತ್ರ ಇಂದು (ನ.08) ತೆರೆಕಾಣುತ್ತಿದೆ. ದೇವದಾಸ್‌ ಕಾಪಿಕಾಡ್‌ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್‌ ಕಾಪಿಕಾಡ್‌ ನಾಯಕರಾಗಿದ್ದಾರೆ. ಈಗಾಗಲೇ ಹಲವು ತುಳು ಸಿನಿಮಾಗಳ ಮೂಲಕ ತುಳು ಚಿತ್ರರಂಗದಲ್ಲಿ ಗಟ್ಟಿ ನೆಲೆಕಂಡುಕೊಂಡಿರುವ ಅರ್ಜುನ್‌, ಈಗ “ಜಬರ್‌ದಸ್ತ್ ಶಂಕರ’ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇಟ್ಟಿದ್ದಾರೆ.

Advertisement

ತುಳು ಚಿತ್ರರಂಗದಲ್ಲಿ ಇತ್ತೀಚೆಗೆ ಬಂದ ಬಹುತೇಕ ಸಿನಿಮಾಗಳು ಕೇವಲ ಕಾಮಿಡಿ ಸುತ್ತವೇ ಸುತ್ತುವ ಮೂಲಕ ಪ್ರೇಕ್ಷಕರಿಗೆ ಏಕತಾನತೆ ಕಾಡಿದ್ದು ಸುಳ್ಳಲ್ಲ. ನೋಡಿದ ಕಾಮಿಡಿಯನ್ನೇ ಹೊಸ ರೀತಿಯಲ್ಲಿ ಎಷ್ಟು ದಿನ ನೋಡಲು ಸಾಧ್ಯ ಎಂಬ ಮಾತು ಕೂಡಾ ಕೇಳಿ ಬಂದಿತ್ತು. ಆದರೆ, “ಜಬರ್‌ದಸ್ತ್ ಶಂಕರ’ ಚಿತ್ರ ಆ ಅಪವಾದದಿಂದ ಮುಕ್ತವಾಗಿದೆ. ಇದು ಕೇವಲ ಕಾಮಿಡಿಗೆ ಸೀಮಿತವಾಗದೇ, ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಅಂಶಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ದೇವದಾಸ್‌ ಕಾಪಿಕಾಡ್‌, “ಇದು ಕೇವಲ ತುಳು ಸಿನಿಮಾ ಎಂಬ ತಲೆಯಲ್ಲಿಟ್ಟುಕೊಂಡು ಮಾಡಿಲ್ಲ. ದೊಡ್ಡ ಮಟ್ಟದಲ್ಲೇ ಚಿತ್ರೀಕರಣ ಮಾಡಲಾಗಿದೆ. ಮುಖ್ಯವಾಗಿ ಚಿತ್ರದಲ್ಲಿ ಐದು ಫೈಟ್‌ಗಳಿವೆ. ಜೊತೆಗೆ ಕಾಮಿಡಿ, ಸೆಂಟಿಮೆಂಟ್‌ ಇದೆ. ಸತ್ಯ-ಧರ್ಮ ಕುರಿತಾದ ವಿಷಯವೂ ಇದೆ. ಮೊದಲರ್ಧ ತುಂಬಾ ಜಾಲಿಯಾಗಿ ಸಾಗುವ ಸಿನಿಮಾ, ದ್ವಿತೀಯಾರ್ಧದಲ್ಲಿ ಹೊಸ ಟ್ವಿಸ್ಟ್‌ ತೆರೆದುಕೊಳ್ಳುತ್ತದೆ. ತುಳು ಸಿನಿಮಾಗಳು ಕಾಮಿಡಿಗೆ ಸೀಮಿತವಾಗುತ್ತವೆ ಎಂಬ ಅಪವಾದದಿಂದ ಈ ಸಿನಿಮಾ ಮುಕ್ತವಾಗಿದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ. ನಾಯಕ ಅರ್ಜುನ್‌ ಕಾಪಿಕಾಡ್‌ ಕೇವಲ ನಟನೆಗಷ್ಟೇ ಅಂಟಿಕೊಳ್ಳದೇ, ಸಿನಿಮಾದ ಇತರ ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಿನಿಮಾ ಪ್ರೀತಿ ಮೆರೆಯುತ್ತಿದ್ದಾರೆ ಎಂದು ಮಗನ ಬಗ್ಗೆ ಖುಷಿಯಿಂದ ಹೇಳುತ್ತಾರೆ ದೇವದಾಸ್‌. ಮನರಂಜನೆಯನ್ನು ಬಯಸಿ, ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ “ಜಬರ್‌ದಸ್ತ್ ಶಂಕರ’ ಯಾವ ಕಾರಣಕ್ಕೂ ಮೋಸ ಮಾಡೋದಿಲ್ಲ ಎಂಬ ಭರವಸೆಯನ್ನು ನೀಡಲು ದೇವದಾಸ್‌ ಮರೆಯುವುದಿಲ್ಲ. ಜಲನಿಧಿ ಫಿಲಂಸ್‌ ಲಾಂಛನ ದಲ್ಲಿ ತಯಾರಾದ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ.

ಚಿತ್ರ ಕೇವಲ ಕರಾವಳಿಯಲ್ಲಷ್ಟೇ ಅಲ್ಲದೇ, ಮುಂಬೈ, ದುಬೈ, ಬೆಂಗಳೂರು, ಮೈಸೂರು, ಗೋವಾ, ಹುಬ್ಬಳ್ಳಿ, ಶಿವಮೊಗ್ಗ, ತೀರ್ಥಹಳ್ಳಿ , ಮಡಿಕೇರಿ ಮತ್ತು ದೆಹಲಿಯಲ್ಲಿ ತೆರೆಕಾಣಲಿದೆ. ತಾರಾಗಣದಲ್ಲಿ ಅರ್ಜುನ್‌ ಕಾಪಿಕಾಡ್‌, ನೀತಾ ಅಶೋಕ್‌, ರಾಶಿ ಬಿ. ಸಾಯಿ ಕೃಷ್ಣ, ಸತೀಶ್‌ ಬಂದಲೆ, ಗೋಪಿನಾಥ ಭಟ್‌ ನಟಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತವಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next