ಅಂಕೋಲಾ: ಸೀಬರ್ಡ್ ನೌಕಾನೆಲೆ ಮೂರನೇ ಹಂತದ ವಿಸ್ತರಣೆಗೆ ಕೇಂದ್ರ ರಕ್ಷಣಾ ಇಲಾಖೆ ಆದೇಶದನ್ವಯ 3453 ಎಕರೆ ಪ್ರದೇಶವನ್ನು ಭೂಸ್ವಾಧೀನನೀಲನಕ್ಷೆ ಪ್ರಕ್ರಿಯೆಗೆ ಸರ್ವೇ ನಡೆಸಿ ವರದಿ ನೀಡುವಂತೆ ವಿಶೇಷ ನೌಕಾನೆಲೆ ಭೂಸ್ವಾಧೀನ ಇಲಾಖೆ ತಾಲೂಕಾಡಳಿತಕ್ಕೆ ಸೂಚನೆ ನೀಡುತ್ತಿದ್ದಂತೆ ಸ್ಥಳೀಯರು ಆತಂಕಗೊಂಡಿದ್ದಾರೆ.
ಈಗಾಗಲೇ ತಾಲೂಕಿನ ಬಹಳಷ್ಟು ಸಮುದ್ರ ತೀರಗಳು ನೌಕಾನೆಲೆ ಸುಪರ್ದಿಗೆಸೇರಿವೆ. ಇದರ ಜೊತೆಗೆ ಏಷ್ಯಾದ ಅತಿ ದೊಡ್ಡ ಸೀಬರ್ಡ್ ನೌಕಾನೆಲೆ ಮೂರನೇ ಹಂತದ ವಿಸ್ತರಣೆಗಾಗಿ ಮತ್ತೆ ಸಮುದ್ರ ತೀರ ಸರ್ವೇ ನಡೆಸಲು ಆದೇಶಿಸಿದೆ. ನೌಕಾನೆಲೆ 3ನೇ ಹಂತದ ವಿಸ್ತರಣೆಗೆ ಗಂಗಾವಳಿ ನದಿ ತೀರಕ್ಕೆ ಹೊಂದಿಕೊಂಡಿರುವ ಬಿಳಿಹೊಂಯ್ಗಿ, ಬಾಸಗೋಡ, ಮಂಜಗುಣಿ, ಸಿಂಗನಮಕ್ಕಿ, ವಾಡಿಬೊಗ್ರಿ ಹಾಗೂ ಹೊನ್ನೆಬೈಲ ಗ್ರಾಮದ ಪ್ರದೇಶದಲ್ಲಿರುವ ಮರ ಗಿಡಗಳೂ ಹೋಗಲಿವೆ. ಇವುಗಳ ಅಂದಾಜು ಮೌಲ್ಯದ ಕುರಿತು ಸರ್ವೇ ನಡೆಸುವಂತೆ ವಿಶೇಷ ಭೂಸ್ವಾಧೀನ ನೌಕಾನೆಲೆ ಕಾರ್ಯಾಲಯದಿಂದ ಅಧಿಕೃತ ಆದೇಶ ಹೊರಡಿಸಿದೆ.
ಗಿಡ ಮರಗಳ ಸರ್ವೇ ಕಾರ್ಯವು ತಾಲೂಕಾಡಳಿತ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಹಾಗೂ ಭೂ ದಾಖಲೆಗಳ ಕಚೇರಿಗಳು ಜಂಟಿಯಾಗಿ ನಡೆಸಲಿದೆ. ಗಂಗಾವಳಿ ನದಿಯಲ್ಲಿ ಹೇರಳವಾಗಿ ದೊರೆಯುವ ಸಂಪತ್ತಿನಿಂದಲೆ ಈ ಭಾಗದ ಜನ ಅನಾದಿಕಾಲದಿಂದಲು ಬದುಕು ಕಟ್ಟಿಕೊಂಡಿದ್ದರು. ಅವರಿಗೆ ಈ ಯೋಜನೆ ಜಾರಿಗಾಗಿ ನಡೆಸು ಸರ್ವೇ ಕಾರ್ಯದಮಾಹಿತಿ ತಿಳಿಯುತ್ತಲೇ ಮುಂದಿನ ಜೀವನ ಹೇಗೆ ಎನ್ನುವ ಆತಂಕ ಶುರುವಾಗಿದೆ.
ಈಗಾಗಲೇ ನೌಕಾನೆಲೆ ಮತ್ತು ನಾಗರಿಕ ವಿಮಾನ ನಿಲ್ದಾಣದ ಹೆಸರಿನಲ್ಲಿ ಸಸ್ಯ ಸಂಪದ್ಭರಿತ ಗ್ರಾಮ ಅಲಗೇರಿಯನ್ನು ಕಬಳಿಸಿದೆ. ಈಗ ಇಲ್ಲಿಯೂ ಅನೇಕಹೋರಾಟದ ನಡುವೆಯೂ ಜನವಸತಿ ಪ್ರದೇಶವನ್ನು ಬಿಟ್ಟು ಕೃಷಿ ಜಮೀನು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಇದರಜೊತೆಯಲ್ಲಿಯೇ ನೌಕಾನೆಲೆ ಮೂರನೇ ಹಂತದ ವಿಸ್ತರಣೆ ಸರ್ವೇ ಕಾರ್ಯಕ್ಕೆ ಆದೇಶಿಸಿರುವುದು ಜನರ ನಿದ್ದೆಗೆಡಿಸಿದೆ.
ಹಲವು ಯೋಜನೆಗಳಿಗೆ ಅಂಕೋಲಾ ತಾಲೂಕು ಹರಿದು ಹೋಗಿದೆ. ಮತ್ತೆ ಈಗ ನೌಕಾನೆಲೆ ಮೂರನೇ ಹಂತ ಎಂದು ಜಮೀನು ಕಬಳಿಸಿದರೆ ಉಗ್ರ ಹೋರಾಟಕ್ಕೆ ಮುಂದಾಗಿ ನಮ್ಮ ಭೂಮಿ ಉಳಿಸಿಕೊಳ್ಳುತ್ತೇವೆ.
– ಮಾದೇವ ಗೌಡ, ಬೆಳಂಬಾರ ಗ್ರಾ.ಪಂ ಮಾಜಿ ಅಧ್ಯಕ್ಷ