ಶಿರಸಿ: ಕೋವಿಡ್ 19 ಲಾಕ್‌ಡೌನ್ ಕಾರಣದಿಂದ ಕಳೆದೊಂದು ತಿಂಗಳಿಂದ ಸ್ತಬ್ಧವಾಗಿದ್ದ ಅಡಕೆ ಮಾರುಕಟ್ಟೆ ಕಳೆದ ವಾರದಿಂದ ನಿಧಾನವಾಗಿ ತೆರೆದುಕೊಂಡು ದರ ಏರಿಕೆ ಕಾಣುತ್ತಿದೆ. ರೈತರ ಮೊಗದಲ್ಲಿ ನೋವು ಕಳೆದು ನಗು ಅರಳಿಸುವಂತಾಗಿದೆ.
ಸೋಮವಾರದ ಮಾರುಕಟ್ಟೆಯಲ್ಲಿ ರಾಶಿ ಚಾಲಿ ಅಡಕೆ ಕ್ವಿಂಟಾಲ್ 38 ಸಾವಿರ ರೂ., ಹೊಸ ಚಾಲಿ ಅಡಕೆ 25ರಿಂದ 29 ಸಾವಿರ ರೂ. ಕ್ವಿಂ. ದರ ಆಗಿದೆ. 27,700 ರೂ. ಸರಾಸರಿ ಬೆಲೆಯಾಗಿದೆ. ಕೋವಿಡ್ 19 ಲಾಕ್‌ಡೌನ್ ನಡುವೆಯೇ ಬೆಳೆಗಾರರ ಹಿತಕ್ಕಾಗಿ ಅಡಕೆ ನೇರ ಖರೀದಿಯನ್ನು ಸ್ವತಃ ಟಿಎಸ್‌ಎಸ್ ಶಿರಸಿಯಲ್ಲಿ ಕಳೆದ ಸೋಮವಾರವೇ ಆರಂಭಿಸಿತ್ತು. ರೈತರಿಗೆ ಅನುಕೂಲ ಆಗುವುದಾದರೆ ಮನೆ ಬಾಗಿಲಿಗೂ ಬಂದು ಖರೀದಿಸಲು ಪ್ರಕಟಿಸಿತು. ಆರಂಭದಲ್ಲೇ ನಿಂತಿದ್ದ ದರದಲ್ಲಿ ಖರೀದಿ ಆರಂಭಿಸಿದರು. ಅದರ ಪರಿಣಾಮ ಮಾರುಕಟ್ಟೆ ಸ್ಥಿರತೆಯತ್ತ ಸಾಗುವಂತೆ ಆಗಿತ್ತು. ಕಳೆದ ನಾಲ್ಕು ದಿನಗಳಿಂದ ಶಿರಸಿ ಎಪಿಎಂಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಅಧ್ಯಕ್ಷತೆಯಲ್ಲಿ ವರ್ತಕರ ಸಭೆ ನಡೆಸಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಬೆಳಗಿನ ಭಾಗದಲ್ಲಿ ಮಾತ್ರ ಸಹಕಾರಿ ಸಂಘಗಳಲ್ಲಿ ಟೆಂಡರ್ ನಡೆಸಲಾಗುತ್ತಿದ್ದು, ಖರೀದಿ, ವಹಿವಾಟುಗಳು ಚುರುಕಾಗಿದೆ.
ಸಾಮಾಜಿಕ ಅಂತರ ಇಟ್ಟುಕೊಂಡೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಾರಿಯ ಬಗ್ಗೊಣ ಪಂಚಾಂಗದಲ್ಲೂ ಕೆಂಪಗಿನ ವಸ್ತುವಿಗೆ ಬೆಲೆ ಏರಿಕೆ ಆಗಲಿದೆ ಎಂದು ಹೇಳಲಾಗಿದೆ. ಅದರಂತೆ ಕೆಂಪಡಕೆಗೆ ಕೂಡ ದರ ಏರಿಕೆ ಆಗುತ್ತದಾ ಎಂಬ ಪ್ರಶ್ನೆ ಇದೆ. ಆದರೆ, ಹಲವು ರಾಜ್ಯಗಳಲ್ಲಿ ಪಾನ್ ಮಸಾಲ ನಿರ್ಬಂಧ ಇದೆ. ಉಗಳುವಿಕೆಯಿಂದ ಕೋವಿಡ್ 19 ವೈರಸ್ ಹರಡುವ ಆತಂಕ ಮೂಡಿಸಿದ್ದ ಪರಿಣಾಮ ಈ ಆದೇಶ ಬಿದ್ದಿತ್ತು. ಆದರೆ, ಗುಟ್ಕಾ ಕಂಪನಿಗಳು ಬಾಗಿಲು ತೆರೆದರೆ ಮೊದಲು ಬೇಕಿರುವುದೇ ಅಡಕೆ ಆಗಿರುವುದರಿಂದ ವಹಿವಾಟು ಸಂಗ್ರಹಣೆ ತಂತ್ರ ಕೂಡ ನಡೆದಿದೆ. ಆದರೆ, ಈಗ ಟ್ರಾನ್ಸ್‌ಪೊàರ್ಟ್ ವಾಹನಗಳಲ್ಲಿ, ಗೋದಾಮಿನಲ್ಲಿ ಎಷ್ಟು ಅಡಕೆ ಇದೆ ಎಂಬುದೂ ಗೊತ್ತಾಗುತ್ತಿಲ್ಲ.
ಕಳೆದ ಅಡಕೆ ಹಂಗಾಮಿನಲ್ಲಿ ಅತಿಯಾದ ಮಳೆಗೆ ಬೆಳೆ ಅರ್ಧದಷ್ಟೂ ಇಲ್ಲ. ಈ ಕಾರಣದಿಂದ ಸಹಜವಾಗಿಯೇ ಈ ಬಾರಿ ದರ ಏರಿಕೆ ನಿರೀಕ್ಷೆ ಇತ್ತು. ಇದೇ ಕಾರಣಕ್ಕೆ ಐದುವರೆ ಸಾವಿರ ರೂ. ಹಸಿ ಅಡಿಕೆ ಕ್ವಿಂ. ದರ ತಲುಪಿತ್ತು.
ಕೋವಿಡ್ ಕಾರಣದಿಂದ ಇಳಿಕೆ ಆಗಿತ್ತಾದರೂ ಅಡಕೆಗೆ ಮಾನ ಬಂದರೆ ಬೆಳೆಗಾರರು ಉಳಿಯುತ್ತಾರೆ. ಬೆಳೆಗಾರ ಉಳಿದರೆ ಅರ್ಥ ವ್ಯವಸ್ಥೆ ಕೂಡ ಉಳಿಯುತ್ತದೆ.
-ಶ್ರೀಕಾಂತ ಹೆಗಡೆ ರೈತ