ಮಹಾನಗರ : ಗ್ರಾಮೀಣ ಬದುಕಿನ ಇತಿಹಾಸವನ್ನು ನೆನಪಿ ಸುವ ಹಿನ್ನೆಲೆಯಲ್ಲಿ ಹಾಗೂ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಸೊಗಡು ಬಿಂಬಿಸುವ ಆಶಯದೊಂದಿಗೆ ಗುರುಪುರ ಗೋಳಿದಡಿಗುತ್ತಿನಲ್ಲಿ ‘ಗುತ್ತುದ ವರ್ಸೊದ ಪರ್ಬೊದ ಅಂಗವಾಗಿ ‘ಪರ್ಬೊದ ಸಿರಿ’ ಕಾರ್ಯಕ್ರಮ ಶುಕ್ರವಾರದಿಂದ ಗುರುಪುರ ಗೋಳಿದಡಿಗುತ್ತುವಿನ ಶ್ರೀ ವೈದ್ಯನಾಥೇಶ್ವರ ಪ್ರಾಂಗಣದಲ್ಲಿ ಆರಂಭವಾಯಿತು. ಜ.20ರ ರಾತ್ರಿಯವರೆಗೆ ಕಾರ್ಯಕ್ರಮ ನಡೆಯಲಿದೆ.
ಗೋಳಿದಡಿಗುತ್ತುವಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಮುಖಂಡತ್ವದಲ್ಲಿ ವಿವಿಧ
ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ 9ರಿಂದ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್.ನಿತ್ಯಾನಂದರ ಮಾರ್ಗದರ್ಶನದಲ್ಲಿ ಗೋಳಿದಡಿ ಗುತ್ತುವಿನಲ್ಲಿ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ಪ್ರೀತ್ಯರ್ಥವಾಗಿ ಶ್ರೀ ಚಂಡಿಕಾ ಹೋಮವು ಆರಂಭವಾಗಿ ಮಧ್ಯಾಹ್ನ 12ಕ್ಕೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ಜತೆಗೆ ಬೆಳಗ್ಗೆ 8.45ರಿಂದ ಶ್ರೀ ಮಹಾಗಣಪತಿ ದೇವರಿಗೆ ಶ್ರೀ ಮೂಡುಗಣಪತಿ ಸೇವೆ ಜರಗಿತು. ಆ ಬಳಿಕ ಪಾರಂಪರಿಕ ಶೈಲಿಯಲ್ಲಿ ‘ಪರ್ಬೊದ ಸಿರಿ’ ಉದ್ಘಾಟನೆಗೊಂಡಿತು.
ಪಾರಂಪರಿಕ ಬಡಗಿ ಲಕ್ಷ್ಮಣ ಆಚಾರ್ಯ ಗುರುಪುರ, ಮೂರ್ತೆದಾರ ತಿಮ್ಮಪ್ಪ ಪೂಜಾರಿ ಕಾಜಿಲ, ಕೃಷಿಕ ಗಂಗಾಧರ ಸಫಲಿಗ ಹುರುಪುರ,ಹುಸೈನಬ್ಬ ತಾರಿಕರಿಯ ಅಡ್ಡೂರು, ಅಕ್ಕಿ ಮುಡಿ ಕಟ್ಟುವ ಮೌರೀಸ್ ಡಿ’ಸೋಜಾ ಕೊಪ್ಪಳ ಗುರುಪುರ, ಪಾಡ್ದನಗಾರ್ತಿ ಹಾಗೂ ಪ್ರಸೂತಿಕಾರ್ತಿ ಕಾವೇರಿ ಪೂಜಾರ್ತಿ, ಬಡಕೆರೆ ಶ್ರೀ ಕೋಡªಬ್ಬು ದೈವಸ್ಥಾನದ
ಮುಖಾರಿ ರಾಮ ಗುರಿಕಾರ ಗುರುಪುರ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮೀಣ ಕುಲ ಕಸುಬುದಾರ ಹಿರಿಯರು ಉದ್ಘಾಟನೆ ನೆರವೇರಿಸಿದರು. ಗುರುಪುರ ಹಾಗೂ ಸುತ್ತಮುತ್ತಲಿನ 10
ಗ್ರಾಮಗಳ ಗ್ರಾಮೀಣ ಪುರುಷರಿಗೆ, ಮಹಿಳೆಯರಿಗೆ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ, ವಿವಿಧ ರೀತಿಯ ಸರಕುಗಳ ಮಳಿಗೆಗಳ ಪ್ರದರ್ಶನ ಹಾಗೂ ಮಾರಾಟ ಆಯೋಜಿಸಲಾಗಿತ್ತು. ಮನೋರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತುಳುನಾಡಿನ ಗತಕಾಲದ ಜೀವನ ಶೈಲಿ ನಮ್ಮ ಸುಂದರ ಹಾಗೂ ನೈಜ ಬದುಕಿಗೆ ಸಾಕ್ಷಿಯಾಗಿದ್ದರೆ, ಅದು ಇಂದು ಮಾಯವಾಗಿ ಜನ ಪರಕೀಯ ಜೀವನ ಶೈಲಿಯೇ ಶ್ರೇಷ್ಠ ಎನ್ನುವ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆ. ನಮ್ಮೂರ ಜಾತ್ರೆ, ಉತ್ಸವಗಳು ನಿಧಾನವಾಗಿ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತುಳುನಾಡಿನ ಗತ ಕಾಲದ ಜೀವನ ಶೈಲಿಯನ್ನು ನೆನಪಿಸುವ ವಿನೂತನ ಕಾರ್ಯಕ್ರಮವಾಗಿ ಇದನ್ನು ಮಾಡಲಾಗಿದೆ. ಗ್ರಾಮ ಜೀವನವನ್ನು ಬಿಂಬಿಸಿ ಪುನರುತ್ಥಾನಗೊಳಿಸುವ ಧ್ಯೇಯದೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿದೆ. ಶನಿವಾರ ಕೂಡ ಕಾರ್ಯಕ್ರಮ ನಡೆಯಲಿದೆ ಎಂದು ಗೋಳಿದಡಿಗುತ್ತುವಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದರು.