ಬನಹಟ್ಟಿ: ತಾಲೂಕಿನಾದ್ಯಂತ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭೂಮಿ ಹದಗೊಳಿಸುವ ಜತೆಗೆ ಕೃಷಿ ಪರಿಕರಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ರೈತರ ನಂಬಿಗಸ್ತ ಮಳೆ ರೋಹಿಣಿ ಮೇ 25ರಿಂದ ಪ್ರವೇಶಿಸಲಿದ್ದು, ರೋಹಿಣಿ ಮಳೆ ಕೈ ಹಿಡಿದರೆ ಬದುಕು ಬಂಗಾರವಾಗುತ್ತದೆ ಎಂಬ ಪ್ರತೀತಿಯಿದೆ. ಪ್ರತಿ ಬಾರಿಯೂ ಮಳೆಗಾಗಿ ಕಾಯುವ ರೈತರು ಬಿತ್ತನೆ ಬೀಜವನ್ನಿಟ್ಟುಕೊಂಡು ಆಕಾಶದತ್ತ ಮುಖ ಮಾಡಿರುವುದು ಸರ್ವೇ ಸಾಮಾನ್ಯ. ಈ ಬಾರಿ ಪೂರ್ವಭಾವಿಯಾಗಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಬೇಕಾದ ಕುಂಟೆ, ಕೂರಿಗೆ, ನೊಗ ಸಿದ್ಧಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ಬಡಿಗೇರ ಹಾಗೂ ಕಮ್ಮಾರರ ಬಳಿ ತಮ್ಮ ಪರಿಕರಗಳ ದುರಸ್ತಿ ಮಾಡಿಸಿಕೊಂಡು ಬಿತ್ತನೆಗೆ ಸಿದ್ಧಗೊಳ್ಳುತ್ತಿದ್ದಾರೆ. ಕೆಲವು ಭಾಗ ಕೃಷ್ಣಾ ನದಿಯ ನೀರನ್ನು ಅವಲಂಬಿಸಿದರೆ, ಕೆಲವು ಭಾಗ ಮಳೆ ಹಾಗೂ ಘಟಪ್ರಭಾ ಎಡದಂಡೆ ಕಾಲುವೆಯನ್ನು ಅವಲಂಬಿಸಿದ್ದಾರೆ.
ಕೋವಿಡ್-19 ನಿಂದಾಗಿ ಸಂಕಷ್ಟ ಅನುಭವಿಸಿದರೂ ಮುಂಬರುವ ಮಳೆಯನ್ನು ನಂಬಿ ಈ ಭಾಗದ ರೈತರು ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆ ಆರಂಭಿಸಿದ್ದಾರೆ. ಈ ಭಾಗದಲ್ಲಿ ಮುಂಗಾರು ನಿರೀಕ್ಷೆಯನ್ನಿಟ್ಟುಕೊಂಡು ಮುಂಗಾರು ಬೆಳೆಗಳಾದ ದ್ವಿದಳ ಧಾನ್ಯಗಳಾದ ಸೋಯಾಬೀನ್, ಬೆಳೆ, ಉದ್ದು, ಹೆಸರು
ಮಡಿಕೆಕಾಳು ಸೇರಿದಂತೆ ವಿವಿಧ ಬೆಳೆಗಳ ಜತೆ ವಾಣಿಜ್ಯ ಬೆಳೆಗಳಾದ ಕಬ್ಬು ಹಾಗೂ ಅರಿಷಿಣ ಬಿತ್ತನೆ ಮಾಡಲು ರೈತರು ಚಟುವಟಿಕೆಗಳನ್ನು ಆರಂಭಿಸಿದ್ದಾರೆ.
ಕೂಲಿ ಕಾರ್ಮಿಕರ ಕೊರತೆ: ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಂಡುಬಂದಿದೆ. ಕೃಷಿ ವೃತ್ತಿಯನ್ನು ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದ್ದರಿಂದ ರೈತರು ಬಹುತೇಕ ಕೃಷಿ ಯಂತ್ರಗಳತ್ತ ಮುಖ ಮಾಡಿದ್ದಾರೆ. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಕೂಲಿ ಕಾರ್ಮಿಕರ ಕೊರತೆಯ ನಡುವೆಯೂ ಉತ್ತಮ ಬೆಳೆ ತೆಗೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ ಇತ್ತೀಚಿಗೆ ಯಾಂತ್ರಿಕ ಕೃಷಿ ಪದ್ದತಿಯನ್ನು ಪ್ರತಿ ಗ್ರಾಮದಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ.
ಸಲಕರಣೆ ಬಾಡಿಗೆ: ಭೂಮಿ ಉಳಿಮೆಗೆ ಟ್ರ್ಯಾಕ್ಟರ್ ಹಾಗೂ ಎತ್ತುಗಳಿಗೆ ಭಾರಿ ಬೇಡಿಕೆ ಬಂದಿದೆ. ಟ್ರ್ಯಾಕ್ಟರ್ ಉಳುಮೆ ಮಾಡಲು ಎಕರೆಗೆ 2100ರೂ. ಹಾಗೂ ಎತ್ತುಗಳ ಉಳಿಮೆಗೆ ಒಂದು ದಿನಕ್ಕೆ 1500 ರೂ. ಬೇಡಿಕೆ ಇದೆ. ಒಂದು ಎಕರೆ ನೆಲ ಸಿದ್ಧಗೊಳಿಸಲು ಸುಮಾರು 5000-6000 ರೂ ವರೆಗೆ ಖರ್ಚಾಗುತ್ತದೆ.
ರೈತರು ಸದ್ಯ ರೈತರು ರೋಹಿಣಿ ಮಳೆ ನಿರೀಕ್ಷೆಯಲ್ಲಿದ್ದು, ಉತ್ತಮ ಮಳೆಯದರೆ ರೈತನ ಬದುಕು ಬಂಗಾರವಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಬಿತ್ತನೆ ಮಾಡಿದರೂ ಬರುವ ರೋಗಗಳು ಕಡಿಮೆ, ಬೆಳೆ ಸಮೃದ್ಧಿಯಾಗಿ ಬರುತ್ತದೆ. ಧರೆಪ್ಪ ಕಿತ್ತೂರ ಸಾವಯವ ಕೃಷಿಕರು ತೇರದಾಳ