Advertisement

ಬಿಡಿಎ ನಿವೇಶನಗಳ ಸಕ್ರಮಕ್ಕೂ ಲಾಬಿ ಶುರು

05:34 AM May 20, 2020 | Lakshmi GovindaRaj |

ಬೆಂಗಳೂರು: ಬಿಡಿಎ ವ್ಯಾಪ್ತಿಯ ಅಕ್ರಮ-ಸಕ್ರಮಕ್ಕೆ ರಾಜಕಾರಣಿಗಳ ಲಾಬಿ ಶುರುವಾಗಿದ್ದು, ಇದು ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಅಕ್ರಮ-ಸಕ್ರಮಕ್ಕಾಗಿ  ಕಾಯ್ದೆಗೆ ತಿದ್ದುಪಡಿ ತಂದು  ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇದೇ ಸಂದರ್ಭ ಬಳಸಿಕೊಂಡು ತಮ್ಮ ನಿವೇಶನಗಳನ್ನೂ ಸಕ್ರಮಗೊಳಿಸಿಕೊಳ್ಳಲು ಸ್ಥಳೀಯ ರಾಜಕೀಯ ನಾಯಕರಿಂದ ಇನ್ನಿಲ್ಲದ ಕಸರತ್ತು ನಡೆದಿದ್ದು, ಈ  ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.

Advertisement

ಬಿಡಿಎ ಬಡಾವಣೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಜಮೀನುಗಳಲ್ಲಿನ ಒತ್ತುವರಿ ಪ್ರಕರಣಗಳಲ್ಲಿ ಪಕ್ಷಾತೀತವಾಗಿ ನಗರದ ಶಾಸಕರು, ಪಾಲಿಕೆ ಸದಸ್ಯರಿಗೆ ಸೇರಿವೆ. ಆ ಪೈಕಿ ದೊಡ್ಡ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳೇ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ 50×80 ವಿಸ್ತೀರ್ಣದ ಕಟ್ಟಡಗಳಿಗಷ್ಟೇ ಸಕ್ರಮ ಸೀಮಿತಗೊಳಿಸಬಾರದು. ಅದಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೂ ವಿಸ್ತರಿಸಬೇಕು.

ದಂಡದ ರೂಪದಲ್ಲಿ ನಿಗದಿಪಡಿಸಿರುವ ಮಾರ್ಗಸೂಚಿ ದರದ ಶೇ. 40 ಮೊತ್ತ ಕಡಿಮೆ ಮಾಡಬೇಕು ಎಂಬ ಒತ್ತಡವೂ ಇದೆ. ತಮ್ಮ ನಿವೇಶನ, ಕಟ್ಟಡಗಳ ಬೇಡಿಕೆ ಇಡುವುದರ ಜತೆಗೆ ಸಾರ್ವಜನಿಕರ ಹಿತದೃಷ್ಟಿ ಎಂದು 20×30 ಹಾಗೂ  30×40 ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ವಿಧಿಸಲು ನಿರ್ಧರಿಸಿರುವ ದಂಡ ರೂಪದ ಶುಲ್ಕವನ್ನೂ ಕಡಿಮೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಪ್ರಸ್ತುತ ಬಿಡಿಎ ವ್ಯಾಪ್ತಿಯಲ್ಲಿ 20×30 ಹಾಗೂ  30×40 ನಿವೇಶನಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ವಾಸದ ಮನೆಗಳಿಗೆ ಮಾರ್ಗಸೂಚಿ ದರದ ಶೇ.10 ಹಾಗೂ ಶೇ.20 ರಷ್ಟು ದಂಡದ ರೂಪದಲ್ಲಿ ಪಡೆದು ಸಕ್ರಮಗೊಳಿಸುವುದು. 40×60 ಹಾಗೂ 50×80 ವಿಸ್ತೀರ್ಣದಲ್ಲಿ  ನಿರ್ಮಿಸಿರುವ ಕಟ್ಟಡಗಳನ್ನು ಶೇ. 40ರಷ್ಟು ಮಾರ್ಗಸೂಚಿ ದರ ಪಡೆದು ಸಕ್ರಮಗೊಳಿಸುವುದು.

ಖಾಲಿ ನಿವೇಶನನ ಹಾಗೂ 50×80 ವಿಸ್ತೀರ್ಣಕ್ಕಿಂತ ಮೇಲ್ಪಟ್ಟ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳ ಸಕ್ರಮ ಮಾಡಬಾರದು ಎಂದು  ನಿರ್ಧರಿಸಲಾಗಿದೆ. ಬಿಡಿಎ ವ್ಯಾಪ್ತಿಯಲ್ಲಿ 75 ಸಾವಿರ ನಿವೇಶನಗಳು ಈ ರೀತಿ ಅಕ್ರಮ ಎಂದು ಗುರುತಿಸಲಾಗಿದ್ದು, ಒಟ್ಟಾರೆ ಆರು ಸಾವಿರ ಎಕರೆ ಪ್ರದೇಶ ಎಂದು ಅಂದಾಜು ಮಾಡಲಾಗಿದೆ. ಈ ಅಕ್ರಮ ಸಕ್ರಮದಿಂದ 25 ಸಾವಿರ ಕೋಟಿ  ರೂ. ಆದಾಯ ರಾಜ್ಯ ಸರ್ಕಾರ ನಿರೀಕ್ಷಿಸಿದೆ.

Advertisement

ಬಿಬಿಎಂಪಿ ಅಕ್ರಮಕ್ಕೂ ಜೀವ: ಈ ಮಧ್ಯೆ ಬಿಡಿಎ ವ್ಯಾಪ್ತಿ  ಯಲ್ಲಿನ ಅಕ್ರಮ-ಸಕ್ರಮಕ್ಕೆ ಸರ್ಕಾರ ಮುಂದಾಗುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯ ಅಕ್ರಮ-ಸಕ್ರಮಕ್ಕೂ ಜೀವ ಬಂದಿದ್ದು, ಪಾಲಿಕೆಯು ಆರ್ಥಿಕ ಸಂಕಷ್ಟದಲ್ಲಿದ್ದು ಅಕ್ರಮ- ಸಕ್ರಮ ಜಾರಿ ಮಾಡಿದರೆ 5ರಿಂದ 10 ಸಾವಿರ ಕೋಟಿ ರೂ. ವರಮಾನ ಸಂಗ್ರಹವಾಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಆರು ಲಕ್ಷ ಕಂದಾಯ ನಿವೇಶನ, ಕಟ್ಟಡಗಳು, ಬೈಲಾ ಉಲ್ಲಂಘನೆ ಕಟ್ಟಡಗಳು ಅಕ್ರಮ-ಸಕ್ರಮ ವ್ಯಾಪ್ತಿಗೆ  ಬರಲಿದ್ದು,

ಈ ಹಿಂದೆ ಸಂಪುಟ ಉಪ ಸಮಿತಿ ರಚನೆಯಾಗಿ ದಂಡ ಶುಲ್ಕ ಸಹ ನಿಗದಿಗೊಳಿಸಿತ್ತು. ಆದರೆ, ಪ್ರಕರಣ ನ್ಯಾಯಾಲಯ ಮೆಟ್ಟಿಲು ಹತ್ತಿದ ಕಾರಣ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯಾಲಯದಲ್ಲಿನ  ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಪರಿಶೀಲಿಸುವಂತೆ ನಗರಾಭಿವೃದಿಟಛಿ ಹಾಗೂ ಕಾನೂನು ಇಲಾಖೆಗೆ  ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟದಲ್ಲಿ ಎಪಿಎಂಸಿ, ಬಿಡಿಎ ಹಾಗೂ ನಗರ ಯೋಜನೆ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ತರಲು ತೀರ್ಮಾನಿಸಲಾಗಿತ್ತು. ಎಪಿಎಂಸಿ ಕಾಯ್ದೆ ರಾಜ್ಯಪಾಲರಿಗೆ ಕಳುಹಿಸಿ ಅಂಗೀಕಾರ ಪಡೆಯಲಾಗಿದೆ. ಬಿಡಿಎ ಸೇರಿ ಉಳಿದ ಎರಡು  ಸುಗ್ರೀವಾಜ್ಞೆ ಇನ್ನೂ ಕಳುಹಿಸಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ.
-ಜೆ.ಸಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next