Advertisement

ಗುರುಮಿಟ್ಕಲ್‌ ತಾಲೂಕಿನಿಂದ ಸಿಎಂ ಗ್ರಾಮವಾಸ್ತವ್ಯ ಶುರು

11:06 PM Jun 03, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಗ್ರಾಮ ವಾಸ್ತವ್ಯವನ್ನು ಜೂ.21 ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್‌ ತಾಲೂಕಿನಿಂದ ಆರಂಭಿಸಲಿದ್ದಾರೆ. ಈ ಹಿಂದೆ ತಮಗೆ ಜನಪ್ರಿಯತೆ ತಂದುಕೊಟ್ಟ ಗ್ರಾಮವಾಸ್ತವ್ಯ ಕಾರ್ಯಕ್ರಮ ಮತ್ತೆ ಆರಂಭಿಸಲು ತೀರ್ಮಾನಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹೈದರಾಬಾದ್‌ ಕರ್ನಾಟಕ ಭಾಗದಿಂದ ಪ್ರಾರಂಭಿಸಲು ತೀರ್ಮಾನಿಸಿದ್ದಾರೆ.

Advertisement

ಜೂನ್‌ 21 ಹಾಗೂ 22 ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್‌, ಜೂ.22 ರಂದು ಕಲಬುರಗಿ ಜಿಲ್ಲೆಯ ಅಫ‌jಲಪುರ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ನಡೆಸಲಿದ್ದಾರೆ. ಅದೇ ರೀತಿ ಜುಲೈ 5 ಹಾಗೂ 6 ರಂದು ಬೀದರ್‌ ಜಿಲ್ಲೆಯ ಬಸವ ಕಲ್ಯಾಣ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕುಗಳಲ್ಲಿ ಗ್ರಾಮವಾಸ್ತವ್ಯ ನಡೆಸಲಿದ್ದಾರೆ.

ಮುಖ್ಯಮಂತ್ರಿಯವರು ಸೋಮವಾರ ಗ್ರಾಮವಾಸ್ತವ್ಯ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿ ಗ್ರಾಮವಾಸ್ತವ್ಯದ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಅಭಿಪ್ರಾಯ ಪಡೆದು ದಿನಾಂಕ ಅಂತಿಮಗೊಳಿಸಿದರು. ಗ್ರಾಮ ವಾಸ್ತವ್ಯದ ಜತೆಗೆ ಜನತಾದರ್ಶನವೂ ನಡೆಯಲಿದೆ ಎಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಗ್ರಾಮವಾಸ್ತವ್ಯ ಆರಂಭಿಸುತ್ತಿರುವ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಸರ್ಕಾರದ ಆಡಳಿತ ಚುರುಕುಗೊಳಿಸಲು ಮತ್ತು ಸರ್ಕಾರದ ಯೋಜನೆಗಳ ಕುರಿತು ಜನಾಭಿಪ್ರಾಯ ಪಡೆಯಲು ಇದು ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಹ್ಮಣ್ಯ, ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next