Advertisement

ಪಿಯು ಕಾಲೇಜುಗಳಲ್ಲಿ ಸೇವಾದಳ ಘಟಕ ಆರಂಭಿಸಿ

10:12 AM Jul 29, 2019 | Suhan S |

ಕೋಲಾರ: ಪಿಯು ಕಾಲೇಜುಗಳಲ್ಲಿ ಭಾರತ ಸೇವಾದಳ ಘಟಕಗಳನ್ನು ರಚಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮ ಬೆಳೆಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ವೆಂಕಟಸ್ವಾಮಿ ಹೇಳಿದರು.

Advertisement

ನಗರದ ಜೂನಿಯರ್‌ ಕಾಲೇಜಿನಲ್ಲಿ ಭಾರತ ಸೇವಾದಳ ಜಿಲ್ಲಾ ಘಟಕದಿಂದ ದ್ವಿತೀಯ ಪಿಯು ಕಾಲೇಜು ಉಪನ್ಯಾಸಕರಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶ ನಮಗೇನು ನೀಡಿತು ಎಂಬುದನ್ನು ಯೋಚಿಸದೇ ದೇಶಕ್ಕೆ ನಮ್ಮ ಕೊಡುಗೆಯೇನು ಎಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕೆಂದು ಹೇಳಿದರು.

ಉತ್ತಮ ಕಾರ್ಯ ನಿರ್ವಹಣೆ: ಭಾರತ ಸೇವಾದಳದ ಕಾರ್ಯ ಚಟುವಟಿಕೆಗಳನ್ನು ದ್ವಿತೀಯ ಪಿಯುಸಿ ಕಾಲೇಜುಗಳಿಗೂ ವಿಸ್ತರಿಸುವಂತೆ ಸರ್ಕಾರದ ಆದೇಶವಿದ್ದು, ಪ್ರತಿಯೊಂದು ಕಾಲೇಜಿನಲ್ಲಿಯೂ ಘಟಕ ತೆರೆಯಬೇಕು. ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಸಂಯಮ, ಭ್ರಾತೃತ್ವ, ಸಮಾನತೆ, ಸಹಬಾಳ್ವೆ ಕಲಿಸಬೇಕಾಗಿದೆ. ಇದು ಪೋಷಕರು ಮತ್ತು ಶಿಕ್ಷಕರ ಕರ್ತವ್ಯವಾಗಿದೆ. ಭಾರತ ಸೇವಾದಳವು ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟ ಕಾಲದಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ಹೇಳಿದರು.

ಕಾರ್ಯೋನ್ಮುಖರಾಗಿ: ಯಾರಿಂದಲೋ ಮೆಚ್ಚುಗೆ ಸಿಗುತ್ತದೆ, ಮನ್ನಣೆ ಸಿಗುತ್ತದೆಯೆಂಬ ಭಾವನೆಯಲ್ಲಿ ಕರ್ತವ್ಯ ನಿರ್ವಹಿಸದೆ ದೇಶ ಸೇವೆಯ ಆತ್ಮತೃಪ್ತಿಗಾಗಿ ಪ್ರತಿಯೊಬ್ಬರೂ ಸಮಾಜ ಸೇವಾ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.

ಸರ್ಕಾರದ ಮೂಲಕ ಅನುಷ್ಠಾನ: ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್‌ ಮಾತನಾಡಿ, ಹಿಂದೂಸ್ತಾನ್‌ ಸೇವಾದಳವನ್ನು ಸ್ಥಾಪಿಸಿದ ನಾ.ಸು.ಹರ್ಡೀಕರ್‌ ಸ್ವಾತಂತ್ರ್ಯ ನಂತರ ಭಾರತ ಸೇವಾದಳ ಹೆಸರಿನಲ್ಲಿ ಜಾತ್ಯತೀತ, ಪಕ್ಷಾತೀತ ಸಂಘಟನೆಯನ್ನು ರೂಪಿಸಿ ಶಿಕ್ಷಣ ಇಲಾಖೆಯ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಲು ಕಾರ್ಯಚಟುವಟಿಕೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಹೇಳಿದರು.

Advertisement

ಭಾರತ ಸೇವಾದಳ ಜಿಲ್ಲಾ ಸಂಘಟಿಕ ದಾನೇಶ್‌ ಮತ್ತು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮಂಜುನಾಥ್‌, ದ್ವಿತೀಯ ಪಿಯುಸಿ ಉಪನ್ಯಾಸಕರಿಗೆ ರಾಷ್ಟ್ರಧ್ವಜ ಸಂಹಿತೆ ಕುರಿತು ಉಪನ್ಯಾಸ ಹಾಗೂ ರಾಷ್ಟ್ರಧ್ವಜದ ಅರೋಹಣ, ಅವರೋಹಣ ಸಂದರ್ಭದಲ್ಲಿ ಪಾಲಿಸಬೇಕಾದ ಪದ್ಧತಿಗಳ ಕುರಿತಂತೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next