ಸೋಮವಾರ ಕನ್ನಡ ಚಿತ್ರರಂಗದ ಮೂವರು ಕಲಾವಿದರ ಹುಟ್ಟುಹಬ್ಬ. ಡಾ.ವಿಷ್ಣುವರ್ಧನ್ ಅವರ 67ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗ ಆಚರಿಸಿದೆ. ಡಾ.ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬ ವರ್ಗ ತಮ್ಮ ಮನೆಯಲ್ಲೇ ವಿಷ್ಣು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿತು.
ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಗೆ ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು. ಇನ್ನು ಇದೇ ವೇಳೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ನಟಿಸಿರುವ “ರಾಜಾಸಿಂಹ’ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಯಿತು.
ನಟ ಉಪೇಂದ್ರ ಕೂಡಾ ಸೋಮವಾರ ತಮ್ಮ 49ನೇ ಹುಟ್ಟುಹಬ್ಬವನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಬೆಳಗ್ಗೆಯಿಂದಲೇ ಅಭಿಮಾನಿಗಳು ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ಮನೆಮುಂದೆ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ನಟನಿಗೆ ಶುಭ ಕೋರಿ ಸೆಲ್ಫಿ ತಗೊಂಡರು.
ತನ್ನ ಹುಟ್ಟುಹಬ್ಬಕ್ಕೆ ಯಾವುದೇ ಕೇಕ್, ಹಾರ ತರಬೇಡಿ ಎಂದು ಉಪೇಂದ್ರ ಕೆಲ ದಿನಗಳ ಹಿಂದೆ ಅಭಿಮಾನಿಗಳಿಗೆ ಮನವಿ ಮಾಡಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನಿಗೆ ಕೇಕ್ ತಂದು ಶುಭ ಕೋರಿ ಖುಷಿ ಪಟ್ಟರು. ಇದೇ ವೇಳೆ ಉಪೇಂದ್ರ ಅವರ “ಉಪೇಂದ್ರ ಮತ್ತೆ ಬಾ’ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.
ಇನ್ನು ನಟಿ ಶ್ರುತಿ, ಸಾಯಿಪ್ರಕಾಶ್ ನಿರ್ದೇಶನದ ಚಿತ್ರದ ಸೆಟ್‌ನಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.