ಕನ್ನಡ ಚಿತ್ರರಂಗದಲ್ಲಿ ಈಗ ಒಂದು ಹೊಸ ಬೆಳವಣಿಗೆ ಆರಂಭವಾಗಿದೆ. ಅದೇನೆಂದರೆ ಚಿತ್ರರಂಗಕ್ಕೆ ಬರುವ ಹೊಸ ತಂಡಗಳು, ತಾವು ಮಾಡಿದ ಕೆಲಸವನ್ನು ಸ್ಟಾರ್ ನಟರಿಗೆ ಅಥವಾ ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ-ನಟಿಯರಿಗೆ ತೋರಿಸಿ ಅವರ, ಶುಭಹಾರೈಕೆ ಪಡೆದೇ ಸಿನಿಮಾ ಬಿಡುಗಡೆ ಮಾಡುತ್ತಿದೆ.
ಇದೊಂಥರ ಒಳ್ಳೆಯ ಬೆಳವಣಿಗೆ ಎಂದರೆ ತಪ್ಪಲ್ಲ. ಈಗಾಗಲೇ “ಮಹಾನುಭಾವರು’ ಸೇರಿದಂತೆ ಅನೇಕ ಚಿತ್ರತಂಡಗಳು ಈ ತರಹ ಸ್ಟಾರ್‌ಗಳ ಬಳಿಗೆ ಹೋಗಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ನನ್ ಮಗಳೇ ಹೀರೋಯಿನ್’. ಹೀಗೊಂದು ಫನ್ನಿ ಟೈಟಲ್ ಇಟ್ಟುಕೊಂಡಿರುವ ಚಿತ್ರ ಬರುತ್ತಿರೋದು ನಿಮಗೆ ಗೊತ್ತಿರಬಹುದು. ಸಂಚಾರಿ ವಿಜಯ್ ಈ ಚಿತ್ರದ ನಾಯಕ.
ಸಂಚಾರಿ ವಿಜಯ್ ಚಿತ್ರರಂಗಕ್ಕೇನು ಹೊಸಬರಲ್ಲ. ಆದರೆ, “ನನ್ ಮಗಳೇ ಹೀರೋಯಿನ್’ ತಂಡ ಮಾತ್ರ ಹೊಸದು. ಈ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಚಿತ್ರರಂಗಕ್ಕೆ ಹೊಸಬರು. ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಇದಾಗಿದ್ದು, ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ನವೆಂಬರ್ 17 ರಂದು ಬಿಡುಗಡೆಯಾಗುತ್ತಿದೆ.
ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿದವರು ಖುಷಿಯಾಗಿದ್ದಾರೆ. ಈ ಟ್ರೇಲರ್ ಅನ್ನು ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರಿಗೆ ತೋರಿಸಿ ಅವರ ಹಾರೈಕೆ ಪಡೆದಿದೆ ಚಿತ್ರತಂಡ. ಪ್ರತಿಯೊಬ್ಬ ನಟರು ಕೂಡಾ ಟ್ರೇಲರ್ ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರೋದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.
“ಶಿವರಾಜಕುಮಾರ್, ಪುನೀತ್, ದರ್ಶನ್ , ಗಣೇಶ್, ವಿಜಯ್ ಸೇರಿದಂತೆ ಬಹುತೇಕ ನಟರು ನಮ್ಮ ಟ್ರೇಲರ್ ನೋಡಿ ವಿಶ್ ಮಾಡಿದ್ದಾರೆ’ ಎನ್ನುತ್ತಾರೆ ನಾಯಕ ಸಂಚಾರಿ ವಿಜಯ್. ಚಿತ್ರದ ಟ್ರೇಲರ್ ಅನ್ನು ಶಿವರಾಜಕುಮಾರ್, ಪುನೀತ್ ರಾಜಕುಮಾರ್, ದರ್ಶನ್, ಗಣೇಶ್, ವಿಜಯ್, ಪ್ರೇಮ್, ಕಿಟ್ಟಿ, ರಕ್ಷಿತ್ ಶೆಟ್ಟಿ, ಪ್ರಜ್ವಲ್ ಸೇರಿದಂತೆ ಅನೇಕ ನಟರು “ನನ್ ಮಗಳೇ ಹೀರೋಯಿನ್’ ವೀಕ್ಷಿಸಿ ಶುಭಕೋರಿದ್ದಾರೆ.
ಇದು ಚಿತ್ರತಂಡದ ವಿಶ್ವಾಸವನ್ನು ಹೆಚ್ಚಿಸಿರೋದಂತು ಸುಳ್ಳಲ್ಲ. ಚಿತ್ರದಲ್ಲಿ ಅಮೃತಾ ರಾವ್ ಹಾಗೂ ದೀಪಿಕಾ ನಾಯಕಿಯರು. ಈ ಚಿತ್ರವನ್ನು ಬಾಹುಬಲಿ ಎನ್ನುವವರು ನಿರ್ದೇಶಿಸಿದ್ದು, ಎನ್.ಬಿ.ಮೋಹನ್ ಕುಮಾರ್ ಹಾಗೂ ಪಟೇಲ್ ಅನ್ನದಾನಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ.