Advertisement

ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಮಾರಾಟ ಯತ್ನ : ಆರೋಪಿ ಬಂಧನ

07:26 PM Mar 28, 2021 | Team Udayavani |

ಮಡಿಕೇರಿ : ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಪೊಲೀಸ್‌ ಸಿಐಡಿ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.

Advertisement

ಮೂಲತಃ ತಮಿಳುನಾಡಿನ ಕೀರನಿಪಟ್ಟಿ ಇಲಯತಗುಡಿ ತಿರುಪಾತೂರು ನಿವಾಸಿ, ಮಾಲ್ದಾರೆಯಲ್ಲಿ ವಾಸವಿರುವ ಪಳನಿಯಪ್ಪ ಅಲಿಯಾಸ್‌ ಅಂಡೋವನ್‌(32) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ ಒಂದು ಜೀವಂತ ನಕ್ಷತ್ರ ಆಮೆಯನ್ನು ವಶಕ್ಕೆ ಪಡೆಯಲಾಗಿದೆ.

ಭಾನುವಾರ ಮಡಿಕೇರಿ ಅಶೋಕಪುರ ರಸ್ತೆಯ ಮೂಲಕ ಭಾರತೀಯ ವಿದ್ಯಾಭವನಕ್ಕೆ ತೆರಳುವ ರಸ್ತೆಯಲ್ಲಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಗಸ್ತು ನಡೆಸುತ್ತಿರುವ ಸಂದರ್ಭ ಶಂಕಿತ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ನಕ್ಷತ್ರ ಆಮೆ ಮಾರಾಟ ಮಾಡಲು ಹೊಂಚು ಹಾಕುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು ಮಾಲು ಸಹಿತ ಸ್ಥಳದಲ್ಲೇ ಬಂಧಿಸಿದ ಪೊಲೀಸ್‌ ಸಿಐಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಅಳಿವಿನ ಅಂಚಿನಲ್ಲಿರುವ ಆಮೆಯನ್ನು ರಕ್ಷಿಸಿದ್ದಾರೆ. ಆರೋಪಿಯ ವಿರುದ್ದ 1972 ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್‌ 9, 39, 48(ಎ), 50 ಮತ್ತು 51ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಕ್ಷಿಸಲಾದ ನಕ್ಷತ್ರ ಆಮೆಯನ್ನು ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ದುರಸ್ತಿ ಭಾಗ್ಯ ಕಾಣದ ಕೋಣಿ- ಕೋಟೇಶ್ವರ ರಸ್ತೆ : ಅಲ್ಲಲ್ಲಿ ಹೊಂಡ- ಗುಂಡಿ

Advertisement

ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸ್‌ ವರಿಷ್ಠಾಧಿಕಾರಿ ಸುರೇಶ್‌ ಬಾಬು ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ನಿರೀಕ್ಷಕ ಎಂ.ಡಿ ಅಪ್ಪಾಜಿ, ಸಿಬ್ಬಂದಿಗಳಾದ ಶೇಖರ್‌, ರಾಜೇಶ್‌, ರಾಘವೇಂದ್ರ, ಯೋಗೇಶ್‌, ಮೋಹನ್‌, ರಮೇಶ್‌ ಅವರುಗಳು ಕಾರ್ಯಾಚರಣೆ ನಡೆಸಿದ್ದರು.

13 ನಕ್ಷತ್ರಗಳಿರುವ ಆಮೆ
ಭಾನುವಾರ ಮಡಿಕೇರಿ ಪೊಲೀಸ್‌ ಸಿಐಡಿ ಅರಣ್ಯ ಸಂಚಾರ ದಳದ ಸಿಬ್ಬಂದಿಗಳು ರಕ್ಷಿಸಿದ ಆಮೆಯ ಚಿಪ್ಪುವಿನಲ್ಲಿ 13 ನಕ್ಷತ್ರಗಳಿದ್ದು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಆಮೆ ಕಳ್ಳ ಸಾಗಾಣಿಕೆ ಮತ್ತು ಮಾರಾಟ ಪ್ರಕರಣ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮುನ್ನ ನಕ್ಷತ್ರ ಆಮೆ ಕಳ್ಳಸಾಗಾಟ ಮತ್ತು ಮಾರಾಟ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದರೂ ಕೂಡ ಅದರಲ್ಲಿ 13 ನಕ್ಷತ್ರಗಳು ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದರ ಬೆಲೆ ಕಾಳಸಂತೆಯಲ್ಲಿ 25 ಲಕ್ಷ ರೂ.ಗಳಿಗೂ ಮೇಲ್ಪಟ್ಟಿದೆ ಎಂದು ಅರಣ್ಯ ಸಂಚಾರಿ ದಳದ ಪೊಲೀಸರು ತಿಳಿಸಿದ್ದಾರೆ. ಸಾಮಾನ್ಯವಾಗಿ ಈ ನಕ್ಷತ್ರ ಆಮೆಯನ್ನು ವಾಸ್ತು ವಿಚಾರಕ್ಕಾಗಿ ಖರೀದಿಸಲಾಗುತ್ತದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next