Advertisement

ಆರಂಭಕ್ಕೂ ಮುನ್ನವೇ ಐಪಿಎಲ್‌ಗೆ ಇಂಜುರಿ!

09:45 AM Apr 07, 2018 | Team Udayavani |

ಐಪಿಎಲ್‌ ಪಂದ್ಯಗಳಲ್ಲಿ ಭಾರತೀಯ ಆಟಗಾರರನ್ನು ಬಿಟ್ಟರೆ ಖ್ಯಾತಿ ಮತ್ತು ಮರನಂಜನೆಯಲ್ಲಿ ಮುಂಚೂಣಿಯಲ್ಲಿರುವುದು ಆಸ್ಟ್ರೇಲಿಯಾದ ಆಟಗಾರರು. ಆದರೆ ಈಗ ಚೆಂಡು ವಿರೂಪ ಹಾಗೂ ಗಾಯದ ಕಾರಣದಿಂದ ಆಸ್ಟ್ರೇಲಿಯಾದ ತಾರಾ ಆಟಗಾರರು ಐಪಿಎಲ್‌ನಿಂದ ದೂರ ಉಳಿದಿದ್ದಾರೆ…

Advertisement

ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ(ಐಪಿಎಲ್‌) ಕ್ಷಣಗಣನೆ ಆರಂಭವಾಗಿದೆ. ಆದರೆ, ಈ ಶ್ರೀಮಂತ ಕ್ರಿಕೆಟ್‌ ಲೀಗ್‌ ಆರಂಭಕ್ಕೂ ಮುನ್ನವೇ ಆಘಾತ ಜತೆಯಾಗಿದೆ. ಇದರಿಂದಾಗಿ, ಕಳೆದ 10 ಐಪಿಎಲ್‌ ಆವೃತ್ತಿಯಲ್ಲಿ ಕಂಡುಬಂದ ರೋಚಕತೆ ಈ ಆವೃತ್ತಿಯಲ್ಲಿ  ಕಾಣಿಸುತ್ತೋ ಇಲ್ಲವೋ ಅನ್ನುವ ಅನುಮಾನವನ್ನೂ ಹುಟ್ಟಿಸಿದೆ.

ಐಪಿಎಲ್‌ನಲ್ಲಿ ಸ್ಫೋಟಕ ಆಟಗಾರರು ಇರಬೇಕು. ಕೆಲವೇ ಚೆಂಡುಗಳಲ್ಲಿ ಬೌಂಡರಿ, ಸಿಕ್ಸರ್‌ ಹೊಡೆದು  ಪಂದ್ಯದ ದಿಕ್ಕನ್ನು ಬದಲಿಸುವರು ಬೇಕು. ಡೆತ್‌ ಓವರ್‌ನಲ್ಲಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದರೂ ಅವರಿಗೆ ಬೆವರಿಳಿಸುವ ಬೌಲರ್‌ಗಳು ಕಣದಲ್ಲಿ ಇರಬೇಕು. ಹಾಗಾದರೆ ಮಾತ್ರ ಪಂದ್ಯದ ಪ್ರತಿ ಕ್ಷಣವೂ ಕೌತುಕ ಸೃಷ್ಟಿಯಾಗುತ್ತದೆ. ಪಂದ್ಯ ನೋಡುವ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುತ್ತದೆ. ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಅನ್ನುವುದನ್ನು ಅಂದಾಜಿಸಲೂ ಸಾಧ್ಯವಾಗುವುದಿಲ್ಲ. ಆದರೆ, ಇಂಥ ತಾರಾ ಆಟಗಾರರೇ ಇಲ್ಲದಿದ್ದರೇನಾಗುತ್ತೆ? ಸದ್ಯ ಐಪಿಎಲ್‌ಗ‌ೂ ಆಗಿರುವುದು ಇದೇ ಚಿಂತೆ.

ಈಗಾಗಲೇ ಆಸ್ಟ್ರೇಲಿಯಾದ ವೇಗಿ ಕೋಲ್ಟರ್‌ ನೈಲ್‌, ಮಿಚೆಲ್‌ ಸ್ಟಾರ್ಕ್‌ ಗಾಯದ ಕಾರಣದಿಂದ ಹೊರಬಿದ್ದಿದ್ದಾರೆ. ದುರಾದೃಷ್ಟವಶಾತ್‌ ಚೆಂಡು ವಿರೂಪ ಪ್ರಕರಣದಿಂದ ಆಸ್ಟ್ರೇಲಿಯಾದ ತಾರಾ ಬ್ಯಾಟ್ಸ್‌ಮನ್‌ಗಳಾದ ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಮಿತ್‌ ಐಪಿಎಲ್‌ಗೆ ಲಭ್ಯರಿಲ್ಲ. ಇದುವೇ ಐಪಿಎಲ್‌ಗೆ ಆಗಿರುವ ಇಂಜುರಿ.

ಆರ್‌ಸಿಬಿಯಿಂದ ಹೊರಬಿತ್ತು ದೊಡ್ಡ ಅಸ್ತ್ರಆಸ್ಟ್ರೇಲಿಯಾದ ವೇಗಿ ಕೋಲ್ಟರ್‌ ನೈಲ್‌ ಎದುರಾಳಿಯ ಬ್ಯಾಟ್ಸ್‌ಮನ್‌ಗಳ ಎದೆ ನಡುಗಿಸುವ ಬೌಲರ್‌. ಅದರಲ್ಲಿಯೂ ಡೆತ್‌ ಓವರ್‌ನಲ್ಲಿ ಆತ ಮಾರಕ ದಾಳಿ ನಡೆಸುತ್ತಾರೆ. ಹೀಗಾಗಿಯೇ ಹರಾಜು ವೇಳೆ ರಾಯಲ್‌ ಚಾಲೆಂಜರ್ ಬೆಂಗಳೂರು(ಆರ್‌ಸಿಬಿ) ನೈಲ್‌ ಅವರನ್ನು 2.20 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ನೈಲ್‌ ಗಾಯಕ್ಕೆ ತುತ್ತಾಗಿರುವುದರಿಂದ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಇದರಿಂದ ಆರ್‌ಸಿಬಿ ಭಾರೀ ಅಸ್ತ್ರವೊಂದನ್ನು ಕಳೆದು ಕೊಂಡಂತಾಗಿದೆ. ಇದೀಗ ನೈಲ್‌ ಜಾಗದಲ್ಲಿ ನ್ಯೂಜಿಲೆಂಡ್‌ನ‌ ಆಲ್‌ರೌಂಡರ್‌ ಕೋರಿ ಆ್ಯಂಡರ್ಸನ್‌ ಸ್ಥಾನ ಪಡೆದಿದ್ದಾರೆ.

Advertisement

ಕೆಕೆಆರ್‌ಗೆ ಸ್ಟಾರ್ಕ್‌ ಇಲ್ಲದ ಆಘಾತ
ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ಯಾವುದೇ ತಂಡದಲ್ಲಿದ್ದರೂ ಬೌಲಿಂಗ್‌ನ ಪ್ರಮುಖ ಅಸ್ತ್ರವಾಗುತ್ತಾರೆ. ಆತ ಯಾವುದೇ ರೀತಿಯ ಪಿಚ್‌ನಲ್ಲಿ ಆದರೂ ವಿಕೆಟ್‌ ಹಾರಿಸಬಲ್ಲ ಚಾಣಾಕ್ಷ ಬೌಲರ್‌. ಹೀಗಾಗಿ ಐಪಿಎಲ್‌ ಹರಾಜಿನ ವೇಳೆ ಮಿಚೆಲ್‌ ಸ್ಟಾರ್ಕ್‌ ಖರೀದಿಗೆ ಕೋಲ್ಕತಾ ನೈಟ್‌ ರೈಡರ್(ಕೆಕೆಆರ್‌) ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮ ವಾಗಿ ಕೆಕೆಆರ್‌ 9.40 ಕೋಟಿ ರೂ. ಭರ್ಜರಿಮೊತ್ತ ನೀಡಿ ಸ್ಟಾರ್ಕ್‌ ಅವರನ್ನು ಬುಟ್ಟಿಗೆ ಹಾಕಿ ಕೊಂಡಿತ್ತು. ಆದರೆ, ಸ್ಟಾರ್ಕ್‌ ಗಾಯಗೊಂಡು ಐಪಿಎಲ್‌ನಲ್ಲಿ ಆಡದ ಸ್ಥಿತಿಗೆ ತಲುಪಿದ್ದಾರೆ. ಇದು ಕೆಕೆಆರ್‌ಗೆ ದೊಡ್ಡ ಆಘಾತವನ್ನೇ ನೀಡಿದೆ.

ಸ್ಮಿತ್‌, ವಾರ್ನರ್‌ ಇಲ್ಲ
ಕಳೆದ ಕೆಲವು ಐಪಿಎಲ್‌ ಆವೃತ್ತಿಗಳಲ್ಲಿ ಅಭಿಮಾನಿಗಳನ್ನು ರಂಜಿಸಿದವರಲ್ಲಿ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಪ್ರಮುಖರು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ವಿಶ್ವಾದ್ಯಂತ ಕ್ರಿಕೆಟ್‌ ಅಭಿಮಾನಿಗಳ ಹೃದಯ ಕದ್ದ ಈ ಇಬ್ಬರೂ ಇದೀಗ ಚೆಂಡು ವಿರೂಪದ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೆ ತುತ್ತಾಗಿದ್ದಾರೆ. ಇದು, ಐಪಿಎಲ್‌ ಮೇಲೂ ಪರಿಣಾಮ ಬೀರುತ್ತಿದೆ.

ಸ್ಮಿತ್‌ ಮತ್ತು ವಾರ್ನರ್‌ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವ ಸಾಮರ್ಥ್ಯ ಉಳ್ಳವರಾಗಿದ್ದರು. ಇದೇ ದೃಷ್ಟಿಯಿಂದ ರಾಜಸ್ತಾನ್‌ ರಾಯಲ್ಸ್‌ ತಂಡ ಸ್ಮಿತ್‌ ಅವರನ್ನು 12 ಕೋಟಿ ರೂ.ಗೆ ತನ್ನಲ್ಲಿಯೇ ಉಳಿಸಿಕೊಂಡಿತ್ತು. ಅದೇ ರೀತಿ ಸನ್‌ ರೈಸರ್ ಹೈದರಾಬಾದ್‌ ತಂಡ ಕೂಡ 12 ಕೋಟಿ ರೂ.ಗೆ ವಾರ್ನರ್‌ ಅವರನ್ನು ತನ್ನಲ್ಲಿಯೇ ಉಳಿಸಿಕೊಂಡಿತ್ತು. ಆದರೀಗ ಅವರಿಬ್ಬರೂ ಕ್ರಿಕೆಟ್‌ನಿಂದ ದೂರ ಉಳಿದಿರುವುದು ರಾಜಸ್ಥಾನ್‌ ಮತ್ತು ಹೈದರಾಬಾದ್‌ ತಂಡಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಖಾಲಿಯಾದ ಜಾಗಗಳಿಗೆ ಸಮರ್ಥ ಆಟಗಾರರನ್ನು ಸೇರಿಸಿಕೊಳ್ಳಲು ಪ್ರಯತ್ನ ನಡೆದರೂ ಯಶಸ್ಸು ದೊರೆತಿಲ್ಲ.

ರೋಚಕತೆ ಉಳಿಸಿಕೊಳ್ಳುತ್ತಾ?
ಐಪಿಎಲ್‌ನಲ್ಲಿ ಭಾರತೀಯರನ್ನು ಬಿಟ್ಟರೆ ಪ್ರಮುಖ ಸ್ಥಾನದಲ್ಲಿ ಕಂಡುಬರುವವರು ಆಸ್ಟ್ರೇಲಿಯಾ ಕ್ರಿಕೆಟಿಗರು. ಆದರೆ ಈ ಬಾರಿ ನಾಲ್ವರು ಆಸ್ಟ್ರೇಲಿಯಾ ಆಟಗಾರರು ಹೊರಬಿದ್ದಿದ್ದಾರೆ. ಹೀಗಾಗಿ ಈ ಬಾರಿ ಐಪಿಎಲ್‌ ರೋಚಕತೆಯನ್ನು ಉಳಿಸಿಕೊಳ್ಳುತ್ತಾ? ಅನ್ನುವ ಪ್ರಶ್ನೆ ಕಾಡುತ್ತಿದೆ.

 ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next