Advertisement

ಮೊಗಸಾಲೆಯಲ್ಲಿ ಶಾಸಕರಿಗೆ ಸ್ಟಾರ್‌ ಹೋಟೆಲ್‌ ತಿಂಡಿ, ಊಟ 

03:45 AM Feb 08, 2017 | |

ಬೆಂಗಳೂರು: ವಿಧಾನಸಭೆ ಮೊಗಸಾಲೆ ಆಧುನೀಕರಿಸಿ ಶಾಸಕರಿಗೆ ಐಷಾರಾಮಿ ಸೋಫಾ ಒದಗಿಸಿದ ನಂತರ ಇದೀಗ
ಸ್ಟಾರ್‌ ಹೊಟೆಲ್‌ನ ತಿಂಡಿ ತಿನಿಸು, ಬಿಸಿ ಬಿಸಿ ಚಹಾ, ಶಾಸಕರು ಅಪೇಕ್ಷಿಸುವ ಸ್ನಾಕ್ಸ್‌ ಸೌಲಭ್ಯ ಒದಗಿಸಲಾಗಿದೆ.

Advertisement

ಇಲ್ಲಿಯ ತನಕ ಶಾಸಕರಿಗೆ ಸಾಮಾನ್ಯ ದರ್ಜೆಯ ಹೋಟೆಲ್‌ (ಶಾಸಕರ ಭವನದ ನಿಸರ್ಗ)ನ ರುಚಿಕರವಾದ ತಿಂಡಿ ತಿನಿಸು, ಚಹಾ, ಕಾ ಸ್ನಾಕ್ಸ್‌ ಮತ್ತು ಊಟ ಒದಗಿಸಲಾಗುತ್ತಿತ್ತು. ಈಗ ವಿಧಾನಸಭೆಯ ಅಧ್ಯಕ್ಷರಾಗಿ ಕೆ.ಬಿ. ಕೋಳಿವಾಡ ಅಧಿಕಾರ ವಹಿಸಿಕೊಂಡ ನಂತರ ಶಾಸಕರಿಗೆ ಸ್ಟಾರ್‌ ಹೋಟೆಲ್‌ ದರ್ಜೆಯ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ತ್ರಿಸ್ಟಾರ್‌
ಹೊಟೆಲ್‌ ಚಾನ್ಸರಿಯಿಂದ ಆಧುನಿಕ ಶೈಲಿಯ ಉಪಹಾರ, ಸ್ನಾಕ್ಸ್‌, ಚಾ, ಕಾಫಿ, ಬ್ರೆಡ್‌ ಜಾಮ್‌, ಸ್ಯಾಂಡ್‌ವಿಚ್‌ ಸೌಲಭ್ಯ 
ಒದಗಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ಥ್ರಿ ಸ್ಟಾರ್‌ ಹೋಟೆಲ್‌ ಸಿಬ್ಬಂದಿ ಆಕರ್ಷಕ ಹೋಟೆಲ್‌ ಸಮವಸ ಧರಿಸಿ ಶಾಸಕರ ಸೇವೆಗೆ ಸಿದ್ದರಿರುತ್ತಾರೆ. ಸೋಮವಾರ ಹಾಗೂ ಮಂಗಳವಾರ ಮೊಗಸಾಲೆಯಲ್ಲಿ ಸಚಿವರು, ಶಾಸಕರು, ಅವರ ಆಪ್ತ ಸಹಾಯಕರು, ಅಧಿಕಾರಿ ವರ್ಗದವರು, ವಿಧಾನಸಭಾ ಸಚಿವಾಲಯದ ಸಿಬ್ಬಂದಿ ಹಾಗೂ ಪತ್ರಕರ್ತರು ಹೊಸ ಥ್ರಿ ಸ್ಟಾರ್‌ ಹೋಟೆಲ್‌ ಅಡುಗೆಯ ಸವಿಯನ್ನು ಆಸ್ವಾದಿಸಿದರು.

ಅಡುಗೆಯ ರುಚಿ ಸಾಮಾನ್ಯ ದರ್ಜೆಯ ಹೋಟೆಲ್‌ ನಷ್ಟು ಸಹ ಸ್ವಾದಿಷ್ಠವಾಗಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಟಾರ್‌ ಹೋಟೆಲ್‌ನ ತಿಂಡಿ-ತಿನಿಸಿನಲ್ಲಿ ಉಪ್ಪು, ಹುಳಿ, ಖಾರ,ಸಿಹಿ ಕಡಿಮೆ ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ, ರೋಗಿಗಳಿಗೆ ನೀಡುವ ಪಥ್ಯ ಆಹಾರದ ರೀತಿ ಇದೆ ಎಂದು ರುಚಿಕಟ್ಟಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. 

ಮಂಗಳವಾರ ಸಂಜೆ ಅಪರೂಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಗೆ ಆಗಮಿಸಿ ಸ್ಟಾರ್‌ ಹೋಟೆಲ್‌ನ ಚಹ ಮತ್ತು ತಿಂಡಿಯನ್ನು ಶಾಸಕರೊಂದಿಗೆ ಸವಿದರು. ರುಚಿ ಕಟ್ಟಿನ ಬಗ್ಗೆ ಪ್ರತಿಕ್ರಿಯಿಸದೆ ಶಾಸಕರೊಂದಿಗೆ ಔಪಚಾರಿಕವಾಗಿ ಮಾತನಾಡಿ, ತಮ್ಮ ಜೇಬಿನಿಂದಲೇ ಬಿಲ್‌ ಪಾವತಿಸಿದರು. ದೂರದಲ್ಲಿ ಪ್ರತ್ಯೇಕವಾಗಿ ಕುಳಿತು ಚಹಾ ಸೇವಿಸುತ್ತಿದ್ದ
ಮಧುಗಿರಿ ಶಾಸಕ ಕೆ.ಎನ್‌ ರಾಜಣ್ಣ ಅವರ ಬಿಲ್ಲನ್ನೂ ಸಹ ಮುಖ್ಯಮಂತ್ರಿಗಳೇ ಪಾವತಿಸಿ ರಾಜಣ್ಣಗೆ, “ನಾನ್‌ ಬಿಲ್‌ ಕೊಟ್ಟಿದೀನಿ, ನೀನ್‌ ಕೊಡಬೇಡಪ್ಪಾ’ ಎಂದು ಹೇಳಿ ಮುಗುಳ್ನಕ್ಕರು. ಸ್ಟಾರ್‌ ಹೋಟೆಲ್‌ನ ತಿಂಡಿ-ತಿನಿಸುಗಳ ದರ ಪಟ್ಟಿ ಸಹ ವಿಶೇಷವಾಗಿ ಗಮನ ಸೆಳೆಯಿತು. ಕೆಲವು ತಿಂಡಿ ತಿನಿಸುಗಳು ಕೈಗೆಟಕುವ ದರದಲ್ಲಿವೆ ಎಂಬ ಅಭಿಪ್ರಾಯ ವ್ಯಕ್ತವಾದರೆ, ರಾಗಿ ಮುದ್ದೆಗೆ ಐವತ್ತು ರೂಪಾಯಿ ದರ ನಿಗದಿ ಮಾಡಿದ್ದಕ್ಕೆ ಬಹಳಷ್ಟು ಅತೃಪ್ತಿ ವ್ಯಕ್ತವಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next