Advertisement
ಕನ್ನಡ ಚಿತ್ರರಂಗದ ಮಂದಿ ಈ ಎರಡು ಸಿನಿಮಾವನ್ನು ನೋಡಿಕೊಂಡು ತಮ್ಮ ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ನಡೆಸುತ್ತಿದ್ದರು. ‘ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಎರಡೂ ಕೂಡಾ ಸ್ಟಾರ್ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ‘ಕುರುಕ್ಷೇತ್ರ’ ಬಹುತಾರಾಗಣದ ಅದ್ಧೂರಿ ಚಿತ್ರ. ಈ ಎರಡು ಸಿನಿಮಾಗಳ ಒಟ್ಟಿಗೆ ಬರೋದು ಬೇಡ, ಒಂದು ವಾರ ಬಿಟ್ಟು ಬಂದರೂ ಸೇಫ್ ಎಂದು ಹೊಸಬರು ಹಾಗೂ ಬೇರೆ ಬೇರೆ ಚಿತ್ರತಂಡಗಳು ಪ್ಲಾನ್ ಮಾಡಿಕೊಂಡಿದ್ದವು. ಅದರಂತೆ, ತಮ್ಮ ಸಿನಿಮಾ ಡೇಟ್‌ಗಳನ್ನು ಕೂಡಾ ಅನೌನ್ಸ್ ಮಾಡಿಕೊಂಡಿದ್ದವು. ಆದರೆ, ಈಗ ‘ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್’ ಎರಡೂ ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕುವ ಮೂಲಕ ಮಿಕ್ಕ ಚಿತ್ರತಂಡಗಳು ತಮ್ಮ ಸಿನಿಮಾ ಬಿಡುಗಡೆ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿವೆ. ಆಗಸ್ಟ್ 02ಕ್ಕೆ ಬಿಡುಗಡೆಯಾಗಬೇಕಿದ್ದ ‘ಕುರುಕ್ಷೇತ್ರ’ ಚಿತ್ರ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಆಗಸ್ಟ್ 09 ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗುತ್ತಿದೆ. ಈ ಮೂಲಕ ಆಗಸ್ಟ್ 09ಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದ, ಕೆಲವು ಚಿತ್ರಗಳು ಅನಿವಾರ್ಯವಾಗಿ ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕುವಂತಾಗಿದೆ. ಇನ್ನು ಕೆಲವು ಚಿತ್ರಗಳು ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಅದೇ ದಿನ ಬಿಡುಗಡೆ ಮಾಡಲು ಮುಂದಾಗಿವೆ. ‘ಕುರುಕ್ಷೇತ್ರ’ ಆಗಸ್ಟ್ 02ಕ್ಕೆ ಬಿಡುಗಡೆಯಾಗುತ್ತದೆ ಎಂದುಕೊಂಡು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಕೆಂಪೇಗೌಡ-2’ ಚಿತ್ರಗಳು ಆಗಸ್ಟ್ 09 ರಂದು ಬಿಡುಗಡೆಯನ್ನು ಘೋಷಿಸಿದ್ದವು. ಈಗ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಆಗಸ್ಟ್ 15 ರಂದು ಗುರುವಾರ ತೆರೆಗೆ ಬರಲಿದೆ. ಇನ್ನು, ನಟ ಕೋಮಲ್ ಮಾತ್ರ ತಾನು ಯಾವುದೇ ಕಾರಣಕ್ಕೂ ಬಿಡುಗಡೆಯನ್ನು ಮುಂದೆ ಹಾಕೋದಿಲ್ಲ ಎಂದು ಆಗಸ್ಟ್ 09ಕ್ಕೆ ಬರಲು ನಿರ್ಧರಿಸಿದ್ದಾರೆ. ಇನ್ನು ಸುದೀಪ್ ಅವರ ‘ಪೈಲ್ವಾನ್’ ಚಿತ್ರ ಆಗಸ್ಟ್ 29ಕ್ಕೆ ತೆರೆಗೆ ಬರುತ್ತದೆ ಎಂದುಕೊಂಡು, ಕೆಲವು ಚಿತ್ರಗಳು ತಮ್ಮ ಬಿಡುಗಡೆಯನ್ನು ಸೆಪ್ಟೆಂಬರ್ ಮೊದಲ ಹಾಗೂ ಎರಡನೇ ವಾರಕ್ಕೆ ಪ್ಲಾನ್ ಮಾಡಿಕೊಂಡಿದ್ದವು. ಆದರೆ, ಈಗ ‘ಪೈಲ್ವಾನ್’ ಬಿಡುಗಡೆಯನ್ನು ಎರಡು ವಾರ ಮುಂದಕ್ಕೆ ಹಾಕಿದ್ದು, ಸೆಪ್ಟೆಂಬರ್ 12 ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಈ ಮೂಲಕ ಸೆ.12ಕ್ಕೆ ಬರಲು ತಯಾರಿ ನಡೆಸಿದ್ದ ಹೊಸಬರ ಹಾಗೂ ಇತರ ಚಿತ್ರಗಳು ತಮ್ಮ ಬಿಡುಗಡೆಯನ್ನು ಅನಿವಾರ್ಯವಾಗಿ ಮುಂದಕ್ಕೆ ಹಾಕುವಂತಾಗಿದೆ.
ಎಲ್ಲಾ ಓಕೆ, ಏಕಾಏಕಿ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಬಿಡುಗಡೆ ಗೊಂದಲಕ್ಕೆ ಕಾರಣವೇನು ಎಂದರೆ ಅದಕ್ಕೆ ಗಾಂಧಿನಗರದ ಮಂದಿ ‘ಸಾಹೋ’ ಚಿತ್ರದತ್ತ ಬೆರಳು ತೋರಿಸುತ್ತಾರೆ. ಪ್ರಭಾಸ್ ನಾಯಕರಾಗಿರುವ ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ‘ಸಾಹೋ’ ಚಿತ್ರದ ಬಿಡುಗಡೆ ಎಫೆಕ್ಟ್ ಕನ್ನಡ ಚಿತ್ರರಂಗದ ರಿಲೀಸ್ ಗೊಂದಲಕ್ಕೆ ಕಾರಣ ಎನ್ನಲಾಗುತ್ತಿದೆ. ‘ಬಾಹುಬಲಿ’ ನಂತರ ಪ್ರಭಾಸ್ ನಟಿಸಿರುವ ಸಿನಿಮಾ ಇದಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಆರಂಭದಲ್ಲಿ ‘ಸಾಹೋ’ ಚಿತ್ರ ಆಗಸ್ಟ್ 15ಕ್ಕೆ ಬಿಡುಗಡೆಯಾಗುತ್ತದೆ ಎನ್ನಲಾಗಿತ್ತು. ಈ ಕಾರಣದಿಂದಲೇ ‘ಕುರುಕ್ಷೇತ್ರ’ ತನ್ನ ಬಿಡುಗಡೆಯನ್ನು ಆಗಸ್ಟ್ 09 ರಿಂದ ಆಗಸ್ಟ್ 02ಕ್ಕೆ ಹಾಕಿತ್ತು. ಎರಡು ದೊಡ್ಡ ಸಿನಿಮಾಗಳು ಕ್ಲ್ಯಾಶ್ ಆಗಬಾರದೆಂಬ ಉದ್ದೇಶ ‘ಕುರುಕ್ಷೇತ್ರ’ದ್ದಾಗಿತ್ತು. ಆದರೆ, ‘ಸಾಹೋ’ ಚಿತ್ರ ತನ್ನ ಬಿಡುಗಡೆಯನ್ನು ಆಗಸ್ಟ್ 30ಕ್ಕೆ ಘೋಷಿಸಿದ್ದು, ಈ ಮೂಲಕ ‘ಕುರುಕ್ಷೇತ್ರ’ ಚಿತ್ರ ಮತ್ತೆ 09ಕ್ಕೆ ಬಂದಿದೆ. ತಾವು ಬಯಸಿದ ವರಮಹಾಲಕ್ಷ್ಮೀ ಹಬ್ಬದ ದಿನ ಸಿಕ್ಕ ಖುಷಿ ಚಿತ್ರತಂಡದ್ದು. ‘ಸಾಹೋ’ ಏಕಾಏಕಿ ಆಗಸ್ಟ್ 30ಕ್ಕೆ ಬಿಡುಗಡೆಯನ್ನು ಘೋಷಿಸಿದ್ದು, ‘ಪೈಲ್ವಾನ್’ ಮೇಲೆ ಎಫೆಕ್ಟ್ ಆಗಿದ್ದು ಸುಳ್ಳಲ್ಲ. ‘ಪೈಲ್ವಾನ್’ ಕೂಡಾ ಆಗಸ್ಟ್ 29ಕ್ಕೆ ಬರಲು ತಯಾರಿ ನಡೆಸಿತ್ತು. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್‌ಗೆ ಚಿತ್ರತಂಡ ತಯಾರಿ ನಡೆಸಿದೆ ಕೂಡಾ. ಇತ್ತ ಕಡೆ ‘ಸಾಹೋ’ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ಆ.30ಕ್ಕೆ ಬರುತ್ತಿರುವುದರಿಂದ ಹಿಂದಿ ಹಾಗೂ ತೆಲುಗಿನಲ್ಲಿ ‘ಪೈಲ್ವಾನ್’ಗೆ ನಿರೀಕ್ಷಿಸಿದಷ್ಟು ಚಿತ್ರಮಂದಿರ ಸಿಗೋದು ಕಷ್ಟವಾಗಬಹುದು ಎಂಬ ಕಾರಣಕ್ಕೆ ‘ಪೈಲ್ವಾನ್’ ಬಿಡುಗಡೆ ಮುಂದಕ್ಕೆ ಹೋಗಿದೆ ಎನ್ನಲಾಗಿದೆ.
ಆಗಸ್ಟ್ 15ಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
ಆಗಸ್ಟ್ 09 ಕ್ಕೆ ಬಿಡುಗಡೆಯಾಗಬೇಕಿದ್ದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಆ.15ಕ್ಕೆ ತೆರೆಕಾಣುತ್ತಿದೆ. ಈ ಬಗ್ಗೆ ಮಾತನಾಡುವ ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ‘ನಾವು ಆ.15ಕ್ಕೆ ಬರುತ್ತಿದ್ದೇವೆ. ಸ್ವಾತಂತ್ರ್ಯ ದಿನದಂದು ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡುತ್ತಿದ್ದೇವೆ. ಕಳೆದ ವರ್ಷ ನಮ್ಮ ನಿರ್ಮಾಣದ ‘ಅಯೋಗ್ಯ’ ಚಿತ್ರ ಕೂಡಾ ಸ್ವಾತಂತ್ರ್ಯ ದಿನದ ಬೆನ್ನಲ್ಲೇ (ಆ.17) ರಿಲೀಸ್ ಆಗಿ ದೊಡ್ಡ ಹಿಟ್ ಆಗಿತ್ತು. ಈಗಲೂ ಅದೇ ನಿರೀಕ್ಷೆ ಇದೆ’ ಎನ್ನುತ್ತಾರೆ.
ಮುಂದೆ ಹೋಗಲ್ಲ: ಕೋಮಲ್
ಕೋಮಲ್ ಅವರು ಮೊದಲ ಬಾರಿಗೆ ಔಟ್ ಅಂಡ್ ಔಟ್ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿರುವ ‘ಕೆಂಪೇಗೌಡ-2’ ಆ.09ಕ್ಕೆ ಬಿಡುಗಡೆಯಾಗುತ್ತಿದೆ. ‘ಕುರುಕ್ಷೇತ್ರ’ ಬಿಡುಗಡೆ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗುತ್ತಾರಾ ಎಂದರೆ ‘ಖಂಡಿತಾ ಇಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. ‘ನಾನು ಮೊದಲೇ ಡೇಟ್ ಅನೌನ್ಸ್ ಮಾಡಿದ್ದೆ. ಮತ್ತೆ ಮುಂದಕ್ಕೆ ಹೋಗಲ್ಲ. ನಮಗೆ ಏನು ಬರಬೇಕೋ ಅದು ಬರುತ್ತದೆ. ಪಾಲಿಗೆ ಬಂದಿದ್ದನ್ನು ದೇವರ ಪ್ರಸಾದ ಎಂದು ಸ್ವೀಕರಿಸುತ್ತೇನೆ’ ಎನ್ನುತ್ತಾರೆ ಕೋಮಲ್.
Related Articles
Advertisement
ನಾಗಣ್ಣ ನಿರ್ದೇಶನದ ಕುರುಕ್ಷೇತ್ರ, ಗಿಮಿಕ್ ಒಂದೇ ದಿನ ತೆರೆಗೆ?ಕನ್ನಡ ಚಿತ್ರರಂಗದಲ್ಲಿ ಆಗಾಗ ಇಂತಹ ಗೊಂದಲಗಳು ನಡೆಯುತ್ತಲೇ ಇರುತ್ತವೆ. ಒಬ್ಬ ಹೀರೋನಾ ಎರಡು ಚಿತ್ರ ಒಂದು ದಿನ ತೆರೆಕಾಣೋದು ಅಥವಾ ಒಬ್ಬ ನಿರ್ದೇಶಕನ ಎರಡು ಚಿತ್ರ ಬಿಡುಗಡೆಯಾಗೋದು ಆಗುತ್ತಿರುತ್ತದೆ. ಈಗ ನಾಗಣ್ಣ ನಿರ್ದೇಶನದ ಎರಡು ಚಿತ್ರಗಳು ಒಂದೇ ದಿನ ತೆರೆಕಾಣುವ ಸಾಧ್ಯತೆ ಇದೆ. ಈಗಾಗಲೇ ಎರಡೂ
ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಅಷ್ಟಕ್ಕೂ ಯಾವುದು ಆ ಚಿತ್ರ ಎಂದರೆ “ಕುರುಕ್ಷೇತ್ರ’ ಹಾಗೂ “ಗಿಮಿಕ್’. ಈ ಎರಡೂ ಚಿತ್ರಗಳು° ನಾಗಣ್ಣ ನಿರ್ದೇಶಿಸಿದ್ದಾರೆ. “ಕುರುಕ್ಷೇತ್ರ’ ಆಗಸ್ಟ್ 09ಕ್ಕೆ ಬರೋದು ನಿಮಗೆ ಗೊತ್ತಿರಬಹುದು. ಆದರೆ, ಈಗ ಗಣೇಶ್ ನಾಯಕರಾಗಿರುವ “ಗಿಮಿಕ್’ ಕೂಡಾ ಆಗಸ್ಟ್ 09ರಂದು
ಬಿಡುಗಡೆಯಾಗುವುದಾಗಿ ಘೋಷಿಸಿಕೊಂಡಿದೆ. ಈ ಬಗ್ಗೆ ನಟ ಗಣೇಶ್ ಅವರನ್ನು ಕೇಳಿದರೆ, “ಈ ಬಗ್ಗೆ ನನಗೇನೂ ಗೊತ್ತಿಲ್ಲ. ನನ್ನ ಕೆಲಸವನ್ನು ನೀಟಾಗಿ ಮುಗಿಸಿಕೊಟ್ಟಿದ್ದೇನೆ’ ಎನ್ನುತ್ತಾರೆ. ಚಿತ್ರದ ನಿರ್ಮಾಪಕ ದೀಪಕ್ ಮಾತ್ರ ಆಗಸ್ಟ್ 09 ರಂದು ಬಿಡುಗಡೆಗೆ ತಯಾರಿ ನಡೆಸಿರುವುದಾಗಿ ಹೇಳುತ್ತಾರೆ. ಈ ಬಗ್ಗೆ “ಉದಯವಾಣಿ’ಯೊಂದೊಗೆ ಮಾತನಾಡಿದ ದೀಪಕ್, “ಆಗಸ್ಟ್ 02ಕ್ಕೆ “ಕುರುಕ್ಷೇತ್ರ’ ಬರುತ್ತದೆ ಎಂದು ನಾವು ಆಗಸ್ಟ್ 09ಕ್ಕೆ ಪ್ಲಾನ್ ಮಾಡಿಕೊಂಡೆವು. ಈಗ ಮುಂದಕ್ಕೆ ಹೋಗೋದು ಕಷ್ಟ.ಹಾಗಾಗಿ, ಅದೇ ದಿನ ಬಿಡುಗಡೆಗೆ ತಯಾರಿ ನಡೆಸಿದ್ದೇವೆ.
“ಕುರುಕ್ಷೇತ್ರ’ ಹಾಗೂ “ಗಿಮಿಕ್’ ಎರಡೂ ಬೇರೆ ಬೇರೆ ಜಾನರ್ ಸಿನಿಮಾ’ ಎನ್ನುತ್ತಾರೆ. ಕೊನೆಕ್ಷಣದಲ್ಲಿ ಬದಲಾವಣೆ ಆದರೂ ಆಗಬಹುದು.