Advertisement

ಸ್ಥಾಯಿ ಸಮಿತಿ ನೂತನ ಅಧ್ಯಕ್ಷರ ಆಯ್ಕೆ

12:14 PM Jun 21, 2018 | Team Udayavani |

ಮದ್ದೂರು: ಪುರಸಭೆ ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷೆಯಾಗಿ ವಾರ್ಡ್‌ ನಂ 20ರ ಸದಸ್ಯೆ,ಜೆಡಿಎಸ್‌ ಪಕ್ಷದ ರಾಧಾ ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಪಟ್ಟಣದ ಪುರಸಭೆ ಎಸ್‌.ಎಂ.ಕೃಷ್ಣ ಸಭಾಂಗಣದಲ್ಲಿ ಪ್ರಭಾರ ಅಧ್ಯಕ್ಷೆ ಪಾರ್ವತಮ್ಮಶಂಕರ್‌ ಅಧ್ಯಕ್ಷತೆಯಲ್ಲಿಬುಧವಾರ ನಡೆದ ವಿಶೇಷ ಸಭೆ ವೇಳೆ ತೆರವಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಧಾಗೋವಿಂದರಾಜು ಅವಿರೋಧವಾಗಿ ಆಯ್ಕೆಯಾದರು.

ಆಕ್ರೋಶ: ಪಟ್ಟಣದ ವಿವಿಧೆಡೆ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ತ್ಯಾಜ್ಯ ನೀರು ಮ್ಯಾನ್‌ಹೋಲ್‌ಗ‌ಳ ಮೂಲಕ ರಸ್ತೆಗಳಿಗೆ ಹರಿಯುತ್ತಿದೆ. ಕಂಡುಕಾಣದಂತಿರುವ ಅಭಿಯಂತರರ ವಿರುದ್ಧ ಸದಸ್ಯ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಎರಡು ವರ್ಷಗಳಿಂದಲೂ ಕೆಲ ಬಡಾವಣೆಗಳಲ್ಲಿ ಎದುರಾಗಿರುವ ಒಳಚರಂಡಿ ಪೈಪ್‌ಲೈನ್‌ ಮಾರ್ಗದ ಅವ್ಯವಸ್ಥೆ ಸರಿಪಡಿಸಲು ಮುಂದಾಗದ ಸಿಬ್ಬಂದಿ ಕ್ರಮ ಖಂಡಿಸಿದರು.

ಪಟ್ಟಣದ ವಿವಿಧ ನಗರ, ಹಳೆ ಒಕ್ಕಲಿಗರ ಬೀದಿ, ಎಚ್‌. ಕೆ.ವಿ.ನಗರ, ಗೊರವನಹಳ್ಳಿ ರಸ್ತೆ, ಸಿದ್ಧಾರ್ಥ ನಗರ ಮತ್ತಿತರೆಡೆ ಮ್ಯಾನ್‌ಹೋಲ್‌ನಿಂದ ಹೊರಬರುತ್ತಿರುವ ತ್ಯಾಜ್ಯ ನೀರು ಚರಂಡಿಗಳಿಗೆ ಮತ್ತು ಕೆಮ್ಮಣ್ಣು ನಾಲೆಗೆ ಸೇರುತ್ತಿದ್ದು, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ ಎಂದು ದೂರಿದರು

ಈ ಸಮಸ್ಯೆ ಬಗೆಹರಿಸುವ ಸಂಬಂಧ ಹಲವು ಬಾರಿ ಸೂಚಿಸುವ ಜತೆಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ 
ಕ್ರಮಕ್ಕೆ ಮುಂದಾಗದ ಅಭಿಯಂತರರಾದ ಶ್ರೀಕಾಂತ್‌ ಮತ್ತು ಮೀನಾಕ್ಷಿ ಅವರ ವಿರುದ್ಧ ಹರಿಹಾಯ್ದ ಅವರು, ಪರಿಸರ
ಇಲಾಖೆಗೆ ದೂರು ನೀಡುವ ಕುರಿತಾಗಿ ಎಚ್ಚರಿಕೆ ನೀಡಿದರು.

Advertisement

ಭರವಸೆ: ಹಣಕಾಸಿನ ಕೊರತೆಯಿಂದ ಒಳಚರಂಡಿ ಅವ್ಯವಸ್ಥೆ ಸರಿಪಡಿಸುವ ದುರಸ್ತಿ ಕಾಮಗಾರಿ ವಿಳಂಬವಾಗಿದ್ದು, ವಿಶೇಷ ಅನುದಾನದ ನಿರೀಕ್ಷೆಯಲ್ಲಿದ್ದು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮವಹಿಸುವ ಕುರಿತಾಗಿ ಮುಖ್ಯಾಧಿಕಾರಿ ಕುಮಾರ್‌ ಸಭೆ ವೇಳೆ ಭರವಸೆ ನೀಡಿದರು.

ಕ್ರಮ ವಹಿಸಿ: ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗಿರುವ ಮದ್ದೂರು ಕೆರೆ ಅಚ್ಚುಕಟ್ಟು ಭಾಗದ ಚನ್ನಸಂದ್ರ, ನಗರಕೆರೆ, ಸೋಂಪುರ ಮಾಲಗಾರನಹಳ್ಳಿ ಮತ್ತಿತರ ಗ್ರಾಮಗಳ ರೈತರ ಜಮೀನುಗಳಿಗೆ ನೀರೊದಗಿಸುವ ಕೆಮ್ಮಣ್ಣು ನಾಲೆ ತ್ಯಾಜ್ಯಗಳ ಜತೆಗೆ ಕಳೆ ಸಸ್ಯೆಗಳಿಂದ ತುಂಬಿ ನಿಂತಿದೆ. ನಾಲೆ ಅಕ್ಕಪಕ್ಕದ ನಿವಾಸಿಗಳ ನರಕಯಾತನೆ ಹೇಳತೀರದಾಗಿದ್ದು, ಕಾಲುವೆ ಸ್ವಚ್ಚತೆ ಹಾಗೂ ಹೂಳು ತೆಗೆಸುವ ಸಂಬಂಧ ಕ್ರಮವಹಿಸುವಂತೆ ಹಿರಿಯ ಸದಸ್ಯ ಎಂ.ಐ. ಪ್ರವೀಣ್‌ ಸೂಚಿಸಿದರು.

ಸಿಸಿ ಡಕ್‌ ಅಳವಡಿಸಿ ಪಟ್ಟಣದ ಸಾರ್ವಜನಿಕರು ತ್ಯಾಜ್ಯಗಳನ್ನು ನಾಲೆಗಳಿಗೆ ಎಸೆಯುವುದನ್ನು ತಡೆಗಟ್ಟಲು
ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿದ ಪ್ರವೀಣ್‌ ಅವರ ಸಲಹೆಗೆ ಸದಸ್ಯರು ಪಕ್ಷಾತೀತವಾಗಿ ದನಿಗೂಡಿಸಿದರು.

ಹರಾಜಿಗೆ ಸಮ್ಮತಿ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಖಾಸಗಿ ಬಸ್‌ ನಿಲ್ದಾಣದಲ್ಲಿ ವಾಹನಗಳಿಂದ ಸುಂಕ ವಸೂಲಾತಿ ಸಂಬಂಧದ ಮರು ಬಹಿರಂಗ ಹರಾಜು ಪ್ರಕ್ರಿಯೆಗೆ ಸಭೆ ವೇಳೆ ಒಪ್ಪಿಗೆ ಪಡೆಯಲಾಯಿತಲ್ಲದೇ ಜೂ.26ರ ಮಂಗಳವಾರ ಪುರಸಭೆ ಕಚೇರಿ ಆವರಣದಲ್ಲಿ ಆಸಕ್ತ ಬಿಡ್‌ದಾರರಿಗೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಬಂಧ ಸಭೆ ನಿರ್ಣಯಿಸಿತು.

ಸಭೆ ವೇಳೆ ಸದಸ್ಯರಾದ ಅಸ್ಲಂಖಾನ್‌, ಮಹೇಶ್‌, ಶೇಖರ್‌, ಎನ್‌.ಸಿ. ರಘು, ವಿಜಿಯಾಕುಮಾರಿ, ಲತಾ ಬಸವರಾಜು,
ನಾಗರತ್ನ, ಮಂಜುಳಾ ಮೃತ್ಯುಂಜಯ, ಅಧಿಕಾರಿಗಳಾದ ಶಿವಕುಮಾರ್‌, ಶ್ರೀಕಾಂತ್‌, ಮಹೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next