Advertisement

ಸರದಿಯಲ್ಲಿ ನಿಂತು ತಾರೆಯರ ಹಕ್ಕು ಚಲಾವಣೆ

11:43 AM Apr 19, 2019 | pallavi |

ಬೆಂಗಳೂರು: ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಭಾಗವಹಿಸಿದ್ದ ನಟ ನಟಿಯರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಪ್ರಚಾರದಲ್ಲಿ ಸಕ್ರಿಯರಾಗಿದ್ದ ಚಿತ್ರ ನಟ ದರ್ಶನ್‌ ಗುರುವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿ ನಗರದ ಮೌಂಟ್‌ ಕಾರ್ಮೆಲ್‌ ಇಂಗ್ಲಿಷ್‌ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು.

Advertisement

ಮಧ್ಯಾಹ್ನ ಪತ್ನಿ ವಿಜಯಲಕ್ಷ್ಮೀಜತೆಗೂಡಿ ಆಗಮಿಸಿದ ದರ್ಶನ್‌, ಹಲವು ಹೊತ್ತುಗಳ ಕಾಲ ಶ್ರೀಸಾಮಾನ್ಯರ ಸಾಲಿನಲ್ಲೇ ನಿಂತು, ಮತ ಚಲಾಯಿಸಿದರು. ಸರದಿ ಸಾಲಿನಲ್ಲೇ ದರ್ಶನ್‌ ಕೆಲವು ಅಭಿಮಾನಿಗಳಿಗೆ ಹಸ್ತಕ್ಷರ ನೀಡಿದರು. ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡರು. ಇದಕ್ಕೂ ಮೊದಲು ಹಿರಿಯ ಪೊಲೀಸ್‌ ಅಧಿಕಾರಿಗಳು ಅತೀ ಗಣ್ಯರು ಮತ ಚಲಾಯಿಸುವ ಗಟ್ಟೆಗೆ ಆಗಮಿಸಿ ಮತ ಚಲಾಯಿಸುವಂತೆ ಕೋರಿ ಕೊಂಡರು.

ಆದರೆ ಇದನ್ನು ನಿರಾಕರಿಸಿದ ದರ್ಶನ್‌ ಸಾಮಾನ್ಯರಂತೆ ಸಾಲಿನಲ್ಲೇ ಬಂದು ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ದರ್ಶನ್‌, ಕಳೆದ ವಿಧಾನಸಭಾ ಚುನಾವಣೆ ವೇಳೆ ಪತ್ನಿಯೊಂದಿಗೆ ಜೊತೆಗೂಡಿ ಮತ ಚಲಾವಣೆ ಮಾಡಲು ಆಗಿರಲಿಲ್ಲ. ಇವತ್ತು ಇಬ್ಬರು ಜೊತೆಯಾಗಿ ಬಂದಿರುವುದಾಗಿ ತಿಳಿಸಿದರು.

ಇದೇ ರೀತಿಯಲ್ಲಿ ಜಯನಗರದಲ್ಲಿ ಭಾರತಿ ವಿಷ್ಣುವರ್ಧನ್‌, ಬನಶಂಕರಿಯ ಬಿಎನ್‌ಎಂ ಶಾಲೆಯಲ್ಲಿ ನಟ ರಮೇಶ್‌ ಅರವಿಂದ್‌ ಕತ್ರಿಗುಪ್ಪೆಯಲ್ಲಿ ಪತ್ನಿ ಸಮೇತವಾಗಿ ನಟ ಉಪೇಂದ್ರ, ಸದಾಶಿವನಗರದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್‌, ಕುಟುಂಬ ಪತ್ನಿ ಜತೆ ಮಲ್ಲೇಶ್ವರದಲ್ಲಿ ನಟ ಜಗ್ಗೇಶ್‌, ರಾಮಮೂರ್ತಿನಗರದಲ್ಲಿ ನಟಿ ಹರ್ಷಿಕಾ ಪೂರ್ಣಚ್ಚ ಮತದಾನ ಮಾಡಿದರು.

ನಾನು ಯಾರ ಪರವಾಗಿಯೂ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಎರಡು ವರ್ಷದ ಹಿಂದೆಯೇ ತಿಳಿಸಿದ್ದೆ. ಪ್ರೀತಿ ವಿಶ್ವಾಸ ಮುಖ್ಯ. ಮತದಾರರು ಕೂಡ ಪ್ರೀತಿ ವಿಶ್ವಾಸದಿಂದ ಮತ ಚಲಾಯಿಸುತ್ತಾರೆ. ಅಭ್ಯರ್ಥಿಗಳು ಕೆಲಸ ಮಾಡದಿದ್ದರೆ ನಾವು ಜವಾಬ್ದಾರ ರಾಗಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಅಭ್ಯರ್ಥಿಗೆ ಬೆಂಬಲವಿಲ್ಲ ಅಂತಲ್ಲ.
●ಸುದೀಪ್‌, ನಟ.

Advertisement

ಮೊದಲು ನಮ್ಮ ಕಡೆಯಿಂದ ತೋರು ಬೆರಳು ತೋರಿಸಬೇಕು, ನಂತರ ಇನ್ನೊಬ್ಬರ ವಿರುದ್ಧ ಬೆರಳು ತೋರಿಸಬಹುದು. ನಾವು ನಮ್ಮ ಕೆಲಸ ಸರಿಯಾಗಿ ಮಾಡದೆ ಅಭ್ಯರ್ಥಿಗಳನ್ನು ತೆಗಳವುದು ಸರಿಯಲ್ಲ. ನಾವು ಓಟ್‌ ಮಾಡಿ ಅಭ್ಯರ್ಥಿಗಳು ಕೆಲಸ ಮಾಡುವಂತೆ ಮಾಡಬೇಕು.
●ಯಶ್‌, ನಟ.

ಮತದಾನ ಎಂಬುದು ಒಂದು ಅಸ್ತ್ರವಿದ್ದಂತೆ. ಅದನ್ನು ಮತದಾರರು ಸರಿಯಾಗಿ ಪ್ರಯೋಗಿಸಬೇಕು.
●ಉಪೇಂದ್ರ, ನಟ.

ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಪೂರೈಸಬೇಕಿದೆ.
●ಜಯಮಾಲ, ಸಚಿವೆ

ಸುಧಾಮೂರ್ತಿ ದಂಪತಿಯಿಂದ ಮತದಾನ
ಬೆಂಗಳೂರು: ಇನ್‌ಫೋಸಿಸ್‌ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷೆ ಸುಧಾಮೂರ್ತಿ ಅವರು ಪತಿ ನಾರಾಯಣ ಮೂರ್ತಿ ಮತ್ತು ಪುತ್ರ ರೋಹನ್‌ ಜತೆಗೂಡಿ ಜಯನಗರದ ಬಿಇಎಸ್‌ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜಿನ ಮತ ಕೇಂದ್ರದಲ್ಲಿ ಹಕ್ಕು ಚಲಾಯಿಸಿದರು.

ಮತದಾನ ಮಾಡಿ ಹೊರ ಬಂದ ದಂಪತಿಗಳು ಮಾಧ್ಯಗಳತ್ತ ಶಾಹಿ ಬಳಿದ ಬೆರಳಿನ ಗುರುತು ತೋರಿದರು. ಈ ವೇಳೆ ಮಾತನಾಡಿದ ಸುಧಾಮೂರ್ತಿ, ಮತದಾನ ರಾಷ್ಟ್ರಕಟ್ಟು ಕೆಲಸ. ಇಂತಹ ಕೆಲಸದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು. ಕರ್ನಾಟಕ ಜ್ಞಾನ ಆಯೋಗದ ಮಾಜಿ ಸದಸ್ಯ ಕಾರ್ಯದರ್ಶಿ ಪ್ರೊ.ಶ್ರೀಧರ್‌ ಸೇರಿದಂತೆ ಇನ್ನಿತರ ಗಣ್ಯರು ಬಿಇಎಸ್‌ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜಿನ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು.

ಮೊದಲ ಬಾರಿಗೆ ಮತದಾನ ಮಾಡಿದರ ಬಗ್ಗೆ ಅನಿಸಿಕೆ ಹಂಚಿಕೊಂಡ ಜಯನಗರದ ವಿದ್ಯಾ ಕಂಪೋಸಿಟ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಕೀರ್ತಿ ಮತ್ತು ನಿಶಾಂತ್‌, ಕೈ ಬೆರಳಿಗೆ ಶಾಹಿ ಹಾಕಿಸಿಕೊಳ್ಳುವುದೇ ಒಂದು ಖುಷಿ ಎಂದರು.

ಮೈಸೂರು ರಸ್ತೆ: ಟ್ರ್ಯಾಫಿಕ್‌ ಜಾಮ್‌
ಬೆಂಗಳೂರು: ಗುರುವಾರ ಬೆಳಗ್ಗೆ ಮತ ಚಲಾಯಿಸಿದ ಬೆಂಗಳೂರು ನಗರ ಮತದಾರ ಮಂಡ್ಯ, ಶ್ರೀರಂಗ ಪಟ್ಟಣ ಹಾಗೂ ಮೈಸೂರು ಕಡೆಗೆ ಕಾರುಗಳಲ್ಲಿ ಸಾಗಿದ ಹಿನ್ನೆಲೆಯಲ್ಲಿ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಕಾರುಗಳಲ್ಲಿ ಸಾಗುತ್ತಿದ್ದ ಕೆಲವರು ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಕಡೆಗೆ ಮತದಾನ ಮಾಡಲು ತೆರಳುತ್ತಿದ್ದವರು ಸೇರಿದ್ದರು.ಈ ವೇಳೆ ಮಾತನಾಡಿದ ಆಟೋ ಚಾಲಕ ಮಂಜುನಾಥ್‌, ಇದೆಲ್ಲಾ ಚುನಾವಣಾ ಮಹಿಮೆ, ಜನರು ಸಂಚಾರ ದಟ್ಟಣೆಯನ್ನು ಸಹಿಸಿಕೊಳ್ಳಲೇಬೇಕಾಗಿದೆ ಎಂದು ಹೇಳಿದರು.

ನಿರ್ಮಲಾ ಸೀತಾರಾಮನ್‌ ಹಕ್ಕು ಚಲಾವಣೆ
ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಜಯ ನಗರದ ಬಿಇಎಸ್‌ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜಿನ ಮತ ಕೇಂದ್ರದಲ್ಲಿ ಗುರುವಾರ ತಮ್ಮ ಹಕ್ಕು ಚಲಾಯಿಸಿದರು.

ಗಣ್ಯಾತಿಗಣ್ಯರಿಗೆ ನೀಡುವ ಸವಲತ್ತು ಇದ್ದರೂ ನಿರ್ಮಲಾ ಸೀತಾರಾಮನ್‌ ದೊಡ್ಡ ಸಾಲುಗಟ್ಟಿದ್ದ ಶ್ರೀಸಾಮಾನ್ಯರ ಸರದಿಯಲ್ಲಿಯೇ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ನಿಂತು, ಮತ ಚಲಾಯಿಸಿದ್ದು ವಿಶೇಷವಾಗಿತ್ತು. ತಮ್ಮಂತೆ ಸರದಿ ಸಾಲಿನಲ್ಲಿ ನಿಂತಿದ್ದ ಕೇಂದ್ರ ಸಚಿವೆಯನ್ನು ಹತ್ತಿರದಿಂದ ಕಂಡ ಮತದಾರರು ಪುಳಕಿತಗೊಂಡರು.

ಮತದಾನ ಮಾಡಿದ ಬಳಿಕ ಮಾತನಾಡಿದ ನಿರ್ಮಲಾ ಸೀತಾರಾಮನ್‌, ಹಿರಿಯರು ಮತ್ತು ಹೊಸ ಮತದಾರರು ಉತ್ಸಾಹದಿಂದ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿರುವುದನ್ನು ಒಂದು ಗಂಟೆಗಳ ಕಾಲ ನೋಡಿದೆ. ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಯುವ ಮತದಾರರಿಗೆ ಮತ್ತು ಹಿರಿಯ ನಾಗರಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಉತ್ತಮ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಕ್ಷೇತ್ರದ ತುಂಬೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಮಲ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾವುದೇ ಒಡಕ್ಕಿಲ್ಲದೆ ಒಗ್ಗೂಡಿ ನಾಯಕರು ಪ್ರಚಾರ ನಡೆಸಿದ್ದು, ಮತ್ತೂಮ್ಮೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next