ಶ್ರೀನಗರ: ಜಮ್ಮು ಕಾಶ್ಮೀರದ ಪ್ರಸಿದ್ಧ ಮಾತಾ ವೈಷ್ಣೋದೇವಿ ಮಂದಿರದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 12 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 14 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದುರಂತ ಪರಿಸ್ಥಿತಿಯನ್ನು “ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಟ್ರ್ಯಾಕ್ ಮಾಡುತ್ತಿದ್ದಾರೆ” ಎಂದು ಅವರ ಕಚೇರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ಕಾಲ್ತುಳಿತದಲ್ಲಿ 12 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 14 ಮಂದಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಥವಾ ಎಡಿಜಿಪಿ ಮುಖೇಶ್ ಸಿಂಗ್ ಖಚಿತಪಡಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ತ್ರಿಕೂಟ ಬೆಟ್ಟದ ಗರ್ಭಗುಡಿಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷದ ಕಾರಣ ಅಪಾರ ಸಂಖ್ಯೆಯ ಭಕ್ತರು ವೈಷ್ಣೋದೇವಿ ಭವನವನ್ನು ಪ್ರವೇಶಿಸಿದಾಗ ನೂಕುನುಗ್ಗಲು ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಒಮಿಕ್ರಾನ್: ಫೆಬ್ರವರಿ ಅಂತ್ಯಕ್ಕೆ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳ ಸಾಧ್ಯತೆ?
ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಸಹಾಯವಾಣಿ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ.
ಮಾತಾ ವೈಷ್ಣೋ ದೇವಿ ಭವನದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಪ್ರಾಣಹಾನಿಯಾಗಿರುವುದು ಅತೀವ ದುಃಖ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ದುಃಖತಪ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.