Advertisement

ಅಂಚೆ ಚೀಟಿಯಲ್ಲಿ ಹಳ್ಳಿ ಸೊಗಡು!

03:45 AM Apr 07, 2017 | Harsha Rao |

ನೃತ್ಯ ನಿರ್ದೇಶಕ ಕಪಿಲ್‌ ನಿರ್ದೇಶನದ “ಹಳ್ಳಿ ಸೊಗಡು’ ಈಗ ರಿಲೀಸ್‌ಗೆ ರೆಡಿಯಾಗಿದೆ. ಇದು ಸಾಹಿತಿ ಡಾ.ದೊಡ್ಡರಂಗೇಗೌಡ‌ರ ಅಭಿಮಾನಿಯೊಬ್ಬನ ಜೀವನದ ಕಥಾಹಂದರ ಹೊಂದಿದೆ. ರಿಲೀಸ್‌ಗೂ ಮುನ್ನ ಚಿತ್ರತಂಡ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪೋಸ್ಟರ್ ಹಾಗೂ ದೊಡ್ಡರಂಗೇಗೌಡರ ಭಾವಚಿತ್ರ ಇರುವ “ಮೈ ಸ್ಟಾಂಪ್‌’ ಎಂಬ ವಿಶೇಷ ಅಂಚೆ ಚೀಟಿಯ ಬಿಡುಗಡೆ ಮಾಡುವ ಮೂಲಕ “ಹಳ್ಳಿ ಸೊಗಡು’ ಚಿತ್ರ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ವಿಶೇಷವೆಂದರೆ, ಈ ಅಂಚೆ ಚೀಟಿಯು ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಸಾಮಾನ್ಯ ಅಂಚೆ ಚೀಟಿಯಂತೆ ಇದನ್ನೂ ಕೂಡ ಪತ್ರ ವ್ಯವಹಾರಕ್ಕೆ ಬಳಸಬಹುದಾಗಿದೆ. 

Advertisement

ಅಂದಹಾಗೆ, ನಟ ಕುಮಾರ್‌ ಬಂಗಾರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಈ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ಅಂಚೆ ಚೀಟಿ ರಿಲೀಸ್‌ ಮಾಡಿದ ಕುಮಾರ್‌ ಬಂಗಾರಪ್ಪ, “ದೊಡ್ಡರಂಗೇಗೌಡ ಅವರು ನಮ್ಮ  “ಅಶ್ವಮೇಧ’ ಚಿತ್ರಕ್ಕೆ “ಹೃದಯ ಸಮುದ್ರ ಕಲಕಿ …’ ಎಂಬ ಹಾಡು ಬರೆದಿದ್ದರು. ಆ ಹಾಡು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆ ಹಾಡಿನ ಮೂಲಕ ಸಿನಿಮಾ ಕೂಡ ಸದ್ದು ಮಾಡಿತು. ಈ ಚಿತ್ರ ಎಲ್ಲರಿಗೂ ಗೆಲುವು ತಂದುಕೊಡಲಿ’ ಎಂದು ಶುಭಹಾರೈಸಿದರು ಕುಮಾರ್‌ ಬಂಗಾರಪ್ಪ. 

“ನನ್ನ ಗೆಳೆಯನ ಬದುಕಿನ ಕುರಿತು ಸಿನಿಮಾ ಮಾಡಿರುವುದು ಖುಷಿ ಕೊಟ್ಟಿದೆ. ಈಗ ಬರುತ್ತಿರುವ ಸಿನಿಮಾಗಳ ಶೀರ್ಷಿಕೆಗಳು ತುಂಬಾ ವಿಚಿತ್ರವಾಗಿರುತ್ತವೆ. “ಹಳ್ಳಿ ಸೊಗಡು’ ಎಂಬ ಶೀರ್ಷಿಕೆ ಆಕರ್ಷಕ ಎನಿಸುತ್ತದೆ. ಚಿತ್ರಕ್ಕೆ ಯಶಸ್ಸು ದೊರೆಯಲಿ’ ಎಂದು ಹಾರೈಸಿದರು ಪ್ರೊ.ಸಿದ್ದರಾಮಯ್ಯ.

ಈ ಚಿತ್ರವನ್ನು ಪಿ.ಸತೀಶ್‌ಕುಮಾರ್‌ ಮೆಹ್ತಾ ನಿರ್ಮಾಣ ಮಾಡಿದ್ದಾರೆ. 
ಅರವ್‌ ಸೂರ್ಯ ಮತ್ತು ಅಕ್ಷರಾ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಚಿತ್ರವನ್ನು ನೃತ್ಯ 
ನಿರ್ದೇಶಕ ಕಪಿಲ್‌ ನಿರ್ದೇಶಿಸಿದ್ದಾರೆ. ಇಲ್ಲಿ ಡಾ.ದೊಡ್ಡರಂಗೇಗೌಡ ಅವರೂ ನಟಿಸಿದ್ದಾರೆ. ನಿಜ ಜೀವನದ ಪಾತ್ರವನ್ನೇ ನಿರ್ವಹಿಸಿರುವುದು ವಿಶೇಷ. ಅವರ ಹುಟ್ಟೂರು ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ದೊಡ್ಡರಂಗೇಗೌಡರ ಪುತ್ರ ಭರತ್‌ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ರಾಗರಮಣ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next