Advertisement

ಸ್ಟಾಂಪ್‌ ಪೇಪರ್‌ ಕರಾಮತ್ತು; ಮನೆಗಳಿಗೆ ಆಪತ್ತು

07:08 AM Jun 11, 2019 | Suhan S |

ಹುಬ್ಬಳ್ಳಿ: ಸ್ವಂತದ್ದೊಂದು ಸೂರು ಹೊಂದಬೇಕೆಂಬ ಆಸೆಯಿಂದ ಯಾರನ್ನೋ ನಂಬಿ ನಗರ ಮಧ್ಯಭಾಗದಲ್ಲಿ ಕಡಿಮೆ ಹಣಕ್ಕೆ ಜಾಗ ಸಿಗುತ್ತದೆಯಲ್ಲ ಎಂದು ಹಿಂದೆ-ಮುಂದೆ ನೋಡದೆ ನಿವೇಶನ ಪಡೆದು, ಮನೆ ಕಟ್ಟಿದವರೀಗ ಪಶ್ಚಾತಾಪ ಪಡುವಂತಾಗಿದೆ. ಇಲ್ಲಿನ ಬೆಂಗೇರಿಯ ಸುಮಾರು 72 ಮನೆಯವರು ಹಣವೂ ಇಲ್ಲ, ಮನೆಯೂ ಇಲ್ಲದೆ ಅಕ್ಷರಶಃ ಬೀದಿಪಾಲಾದ ಸ್ಥಿತಿ ಅನುಭವಿಸುವಂತಾಗಿದೆ.

Advertisement

ಇಲ್ಲಿನ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಬಳಿ ಸುಮಾರು 2 ಎಕರೆ 28 ಗುಂಟೆ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡಿದ್ದ 52 ಕುಟುಂಬಗಳು ಯಾರೋ ಮಾಡಿದ ತಪ್ಪಿಗೆ ಇದೀಗ ಮನೆ ಕಳೆದುಕೊಳ್ಳುವಂತಾಗಿದೆ. ಕಳೆದ 20-30 ವರ್ಷಗಳಿಂದ ಇದ್ದ ಜಾಗ ಇನ್ನೇನು ತಮ್ಮದಾಯಿತು ಎಂದು ನಂಬಿ ಸಾಲ ಮಾಡಿ, ಚಿನ್ನಾಭರಣ ಮಾರಾಟ ಮಾಡಿ ಮನೆ ಕಟ್ಟಿದವರೀಗ ಎಲ್ಲವನ್ನೂ ಕಳೆದುಕೊಂಡಿದ್ದಾರೆ.

ಕಡಿಮೆ ದರದಲ್ಲಿ ಜಾಗ ಕೊಡುತ್ತೇವೆಂದು ಜನರನ್ನು ನಂಬಿಸಿ ಇನ್ನೊಬ್ಬರ ಜಾಗ ಮಾರಾಟ ಮಾಡುವವರ ದಂಧೆ ನಗರದಲ್ಲಿ ಜೋರಾಗಿ ನಡೆಯುತ್ತಿದೆ. ಇಂತಹ ವಂಚಕರಿಗೆ ಮಧ್ಯಮವರ್ಗ, ಬಡವರೇ ಟಾರ್ಗೆಟ್. ಏಕೆಂದರೆ ಅವರು ಇದ್ದ ಹಣದಲ್ಲಿಯೇ ಮನೆ ಕಟ್ಟಿಸಿಕೊಳ್ಳಬೇಕೆಂಬ ಕನಸು ಕಂಡಿರುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಖದೀಮರ ಜಾಲವು ಅವರಿಗೆ ಕಡಿಮೆ ದರದಲ್ಲಿ ಜಾಗ ಕೊಡಿಸುತ್ತೇವೆಂದು 10-20 ರೂ. ಬಾಂಡ್‌ ಪೇಪರ್‌ನಲ್ಲಿ ಬರೆದುಕೊಟ್ಟು ಬಿಡುತ್ತಾರೆ. ಒಂದು ವೇಳೆ ಜಾಗಕ್ಕೆ ನೋಂದಣಿ ಮಾಡಿಸಬೇಕೆಂದರೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ಅಲ್ಲದೆ ಬ್ಯಾಂಕ್‌ನಿಂದ ಸಾಲ ಮಾಡಿ ಕಟ್ಟಿಸಬೇಕೆಂದರೂ ಇನ್ನಿತರೆ ಕಾಗದಪತ್ರಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ ಎಂಬುದು ಬಹುತೇಕ ಬಡವರ ಆಲೋಚನೆ. ಹೀಗಾಗಿ ವಂಚಕರು ಇದನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡು ಯಾರದೋ ಜಾಗವನ್ನು ತಮ್ಮದೆಂದು ನಂಬಿಸಿ ಬಡವರನ್ನು ವಂಚಿಸುತ್ತಿರುವುದು ಸಾಮಾನ್ಯವಾಗಿದೆ.

ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಬಳಿಯ ಮೋಹನ ಮಂಕಣಿ ಎಂಬುವರ ಮಾಲೀಕತ್ವದ ಜಾಗೆಯಲ್ಲೂ ನಡೆದದ್ದು ಇದೇ ರೀತಿ. ಮಂಕಣಿ ಅವರ ಜಾಗವನ್ನು ತಮ್ಮದೆಂದು ನಂಬಿಸಿ ಸುಮಾರು 52 ಕುಟುಂಬವರಿಗೆ ಮಾರಾಟ ಮಾಡಲಾಗಿದೆ. ಜಾಗ ಮಾರಿದವರು ಆರಾಮವಾಗಿದ್ದಾರೆ, ಖರೀದಿಸಿದವರು ಮಾತ್ರ ಬೀದಿಪಾಲಾಗಿ ಮುಂದೇನು ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ದುಡಿದ ಹಣದಲ್ಲಿ ಉಳಿತಾಯ ಮಾಡಿ, ಸಾಲ ಮಾಡಿ ಕಟ್ಟಿದ ಮನೆಯಲ್ಲಿ ಇರಲು ಬಿಡುವುದಿಲ್ಲವೆಂದರೆ ಅಲ್ಲಿಯೇ ಬಿದ್ದು ಸಾಯಲಾದರು ನನ್ನನ್ನು ಬಿಡಿ’ ಎಂದು ಮನೆಯೊಳಗೆ ಹೋಗಲು ತಡೆಯುತ್ತಿದ್ದ ಪೊಲೀಸರನ್ನು ಕೂಲಿ ಮಾಡಿಕೊಂಡಿದ್ದ ವೃದ್ಧ ಶರೀಫಸಾಬ್‌ ನದಾಫ್ ಹಲವು ಬಾರಿ ಅಂಗಲಾಚಿದ್ದು ಕಂಡು ಬಂದಿತು.
ಕುಟುಂಬದ ಆಸರೆಗಾಗಿ ಮನೆ ಮಾಡಿಕೊಳ್ಳಬೇಕೆಂಬ ಆಸೆಯಿಂದ ತವರು ಮನೆಯಲ್ಲಿ ಜಗಳ ಮಾಡಿಕೊಂಡು, ಹೊಲ ಮಾರಿಸಿ ಹಣ ತಂದು ಮನೆ ಕಟ್ಟಿಸಿಕೊಂಡಿದ್ದೆ. ಈಗ ಸೂರು ಇಲ್ಲವಾಯಿತು. ತವರು ಮನೆಯವರು ನನ್ನನ್ನು ತಮ್ಮಲ್ಲಿ ಇಟ್ಟುಕೊಳ್ಳುವುದಿಲ್ಲ. ನಾನು ಮನೆ ಮತ್ತು ತವರು ಮನೆ ಎರಡು ಕಳೆದುಕೊಂಡ ಮೇಲೆ ವಯಸ್ಸಾದ ಪತಿ, ನಾಲ್ಕು ಹೆಣ್ಣುಮಕ್ಕಳು, ಮಂದ ಮಗನೊಂದಿಗೆ ಜೀವನ ನಡೆಸುವುದೇ ಕಷ್ಟ. •ಬೀಬಿಜಾನ ನದಾಫ, ಮನೆ ಕಳೆದುಕೊಂಡ ಮಹಿಳೆ

ಮನೆ ಕಳೆದುಕೊಂಡವರು ಬಿಕ್ಕಿ ಬಿಕ್ಕಿ ಅತ್ತರು:

ದುಡಿದ ಹಣದಲ್ಲಿ ಒಂದಿಷ್ಟು ಹಣ ಉಳಿಸಿ, ಸಾಲಸೋಲ ಮಾಡಿ ಕನಸಿನ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಜನರು ತಮ್ಮ ಎದುರೇ ಜೆಸಿಬಿ ಯಂತ್ರಗಳಿಂದ ಧರೆಗುರುಳಿತ್ತಿದ್ದ ಮನೆಯನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತರು, ಎದೆ ಬಡಿದುಕೊಂಡು ಗೋಗರೆಯುತ್ತಿದ್ದರು. ಈ ದೃಶ್ಯ ಎಂಥವರ ಮನವನ್ನೂ ಕಲಕುವಂತಿತ್ತು. ಆದರೆ ಅಲ್ಲಿದ್ದ ಬಹುತೇಕರು ಅಸಹಾಯಕರಾಗಿದ್ದರು. ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ ಎನ್ನುತ್ತಿದ್ದರು.
•ಶಿವಶಂಕರ ಕಂಠಿ
Advertisement
Advertisement

Udayavani is now on Telegram. Click here to join our channel and stay updated with the latest news.

Next