Advertisement

Kadaba; ಮುದ್ರಾಂಕ ಇಲಾಖೆಯ ತಾಂತ್ರಿಕ ದೋಷ: ಕಗ್ಗಂಟಾದ ಪಹಣಿ ದಾಖಲಾತಿ

11:00 PM Feb 06, 2024 | Team Udayavani |

ಕಡಬ: ಮುದ್ರಾಂಕ ಇಲಾಖೆಯ ತಾಂತ್ರಿಕ ದೋಷದಿಂದಾಗಿ ಪಹಣಿ(ಆರ್‌ಟಿಸಿ)ಯಲ್ಲಿ ದಾಖಲಾತಿಗೆ ತೊಡಕುಂಟಾಗಿದ್ದು, ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಆನ್‌ಲೈನ್‌ ಮೂಲಕ ದಸ್ತಾವೇಜು ನೋಂದಣಿ ಪ್ರಾರಂಭವಾದ ದಿನದಿಂದ ಈ ತನಕ ಉಪನೋಂದಣಿ ಕಚೇರಿಯಲ್ಲಿ ನೋಂದಣಿಯಾದ ಹೆಚ್ಚಿನ ಹಕ್ಕು ಖುಲಾಸು ಪತ್ರಗಳ ಪಹಣಿ/ಖಾತೆ ಬದಲಾವಣೆಗೆ ತೀವ್ರ ಹಿನ್ನೆಡೆಯಾಗಿದೆ. 5 ತಿಂಗಳಿಂದ ನೋಂದಣಿಯಾದ ಹಲವಾರು ಆಸ್ತಿಯ ಪಹಣಿ ಪತ್ರ ಬಾಕಿಯಿದ್ದು ಸಾರ್ವಜನಿಕರು ಕಚೇರಿಗಳಿಗೆ ಅಲೆದು ಹೈರಾಣಾಗಿದ್ದಾರೆ. ಜನಸಾಮಾನ್ಯರು ಹಲವು ಬಾರಿ ಮಾಹಿತಿ ಕೇಳಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ.

ಈ ಹಿಂದೆ ಕಾವೇರಿ ತಂತ್ರಾಂಶ-1ರಲ್ಲಿ ದಸ್ತಾವೇಜು ಮಾಡಿ ಸಬ್‌ ರಿಜಿಸ್ಟ್ರಾರ್‌ ಕಚೇರಿ ಸೂಕ್ತ ದಾಖಲೆಗಳನ್ನು ನೀಡಿದರೆ ಸುಲಲಿತವಾಗಿ ದಸ್ತಾವೇಜು ನಡೆದು ಪಹಣಿಯಾಗುತ್ತಿತ್ತು. ಈಗ ಕಾವೇರಿ ತಂತ್ರಾಂಶ 2ರಲ್ಲಿ ದಸ್ತಾವೇಜು ಬರಹಗಾರರು ದಸ್ತಾವೇಜು ಮಾಡಿ ಕೀ ಫೀಡ್‌ ಮಾಡಿ ಅದನ್ನು ರಿಜಿಸ್ಟ್ರಾರ್‌ ಲಾಗ್‌ ಇನ್‌ಗೆ ಕಳುಹಿಸಬೇಕು. ಬಳಿಕ ರಿಜಿಸ್ಟ್ರಾರ್‌ ಅವರು ಅಪ್‌ ಲೋಡ್‌ ಆದ ದಾಖಲೆಗಳನ್ನು ಪರಿಶೀಲಿಸಿ ನೋಂದಣಿ ಶುಲ್ಕದ ಪಾವತಿ ಮಾದರಿಯನ್ನು ಕಳುಹಿಸಿ ಕೊಟ್ಟು, ಬಳಿಕ ಪಾವತಿ ಮಾಡಿ ಶೆಡ್ನೂಲ್‌ ಟೈಮ್‌ ನಿಗದಿ ಮಾಡಿಕೊಂಡು ನೋಂದಣಿ ಮಾಡಬೇಕಾಗಿದೆ.

ಈ ಮಧ್ಯೆ ನೋಂದಣಿ ಶುಲ್ಕ ಪಾವತಿಸುವಾಗ ತಾಂತ್ರಿಕ ತೊಂದರೆಯಾದರೆ ಶುಲ್ಕವನ್ನು ವಾಪಸು ಪಡೆಯಲು ತಿಂಗಳುಗಳೇ ಬೇಕಾಗುತ್ತದೆ. ಆ ತೊಂದರೆಯನ್ನು ಮುಂದಿಟ್ಟುಕೊಂಡು ದಸ್ತಾವೇಜು ಬರಹಗಾರರು ವಿಳಂಬಿಸಿದಲ್ಲಿ ತಮ್ಮ ಗ್ರಾಹಕರ ಅಸಮಾಧಾನಕ್ಕೆ ತುತ್ತಾಗುತ್ತಿದ್ದಾರೆ. ಇಷ್ಟೆಲ್ಲಾ ಆಗಿ ದಸ್ತಾವೇಜು ಪ್ರಕ್ರಿಯೆ ಪರಿಪೂರ್ಣ ಗೊಳಿಸಿದರೂ ಪಹಣಿಯಾಗುತ್ತಿಲ್ಲ ಎನ್ನುವುದೇ ಸಮಸ್ಯೆ.

ಖಲಾಸ್‌ ಪತ್ರ!
5 ತಿಂಗಳಿಂದ ನೋಂದಣಿಯಾದ ಹಲವಾರು ಹಕ್ಕು ಖುಲಾಸು ಪತ್ರ “ಹಕ್ಕು ಖಲಾಸ್‌ ಪತ್ರ’ವಾಗಿಯೇ ಉಳಿದಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ಅಗ್ರಹ ವ್ಯಕ್ತವಾಗಿದೆ.

Advertisement

ಇದು ರಾಜ್ಯಾದ್ಯಂತ ಇರುವ ಸಮಸ್ಯೆ. ಕಾವೇರಿ 1 ತಂತ್ರಾಂಶದಿಂದ ಕಾವೇರಿ 2 ತಂತ್ರಾಂಶಕ್ಕೆ ಬದಲಾಗುವಾಗ ಆಗಿರುವ ತಾಂತ್ರಿಕ ಸಮಸ್ಯೆ. ಸಮಸ್ಯೆಯನ್ನು ಕಂದಾಯ ಸಚಿವರ ಗಮನಕ್ಕೆ ತರಲಾಗಿದ್ದು, ಹಂತಹಂತವಾಗಿ ಸರಿಪಡಿಸಲಾಗುತ್ತಿದೆ. ಶೀಘ್ರ ಪೂರ್ಣ ಪರಿಹಾರ ಸಿಗಲಿದೆ.
– ಸಯ್ಯದ್‌ ನೂರ್‌ ಪಾಷ, ನೋಂದಣಾಧಿಕಾರಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next