ಚೆನ್ನೈ/ನವದೆಹಲಿ: ಕಾವೇರಿ ವಿಚಾರದಲ್ಲಿ ಮತ್ತೆ ಕಿತಾಪತಿ ತೆಗೆದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕರ್ನಾಟಕದಿಂದ ಜುಲೈ ತಿಂಗಳ ಬಾಕಿ ಕಾವೇರಿ ನೀರನ್ನು ಬಿಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಜೂನ್‌ನಲ್ಲಿ ತೀವ್ರ ಮಳೆ ಕೊರತೆ ಅನುಭವಿಸಿದ್ದ ಕರ್ನಾಟಕ, ಜುಲೈನಲ್ಲಿ ಒಂದಷ್ಟು ಉತ್ತಮ ಮಳೆಯಾಗಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಅಲ್ಲದೆ, ಕಾವೇರಿ ಕಣಿವೆಯಲ್ಲಿರುವ ಕೆಆರ್‌ಎಸ್ ಅಣೆಕಟ್ಟು ಇನ್ನೂ ತುಂಬಿಲ್ಲ. ಸದ್ಯ ಕೇವಲ 91 ಟಿಎಂಸಿ ನೀರಷ್ಟೇ ಬಂದಿದೆ. ಆದರೂ ತಮಿಳುನಾಡು ಮಾತ್ರ ನೀರಿಗಾಗಿ ತನ್ನ ಕಿತಾಪತಿ ಮುಂದುವರಿಸಿದೆ.
ಜು.1ರಿಂದ 31ರವರೆಗೆ ಕರ್ನಾಟಕ 40 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಕೇವಲ 11.6 ಟಿಎಂಸಿ ನೀರನ್ನು ಹರಿಸಿದೆ. ಉಳಿದ 28.8 ಟಿಎಂಸಿ ನೀರು ಹರಿಸಬೇಕು. ಜತೆಗೆ, ಕರ್ನಾಟಕ ಸುಪ್ರೀಂಕೋರ್ಟ್ ತೀರ್ಪನ್ನಾಗಲಿ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನಾಗಲಿ ಪಾಲನೆ ಮಾಡುತ್ತಿಲ್ಲ ಎಂದು ಪ್ರಧಾನಿಗೆ ದೂರುಗಳ ಸುರಿಮಳೆಯನ್ನೇಗೈದಿದ್ದಾರೆ.
ಸ್ಟಾಲಿನ್ ಅವರ ಪತ್ರದ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವ್ಯಂಗ್ಯವಾಡಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅವರದ್ದೇ ಮಿತ್ರ ಪಕ್ಷಗಳ ಸರ್ಕಾರಗಳಿವೆ. ತಾವೇ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲಾಗದೇ, ಪ್ರಧಾನಿಯವರ ಮುಂದೆ ದೂರು ಸಲ್ಲಿಸಲಾಗಿದೆ ಎಂದಿದ್ದಾರೆ.