ಶಿಡ್ಲಘಟ್ಟ: ಸರ್ಕಾರಿ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಿಸಲು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡುವ ಸರ್ಕಾರ, ಅದಕ್ಕೆ ಪೂರಕವಾಗಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾಗಿದ್ದು, ಇದರಿಂದ ಕಂದಾಯ ಇಲಾಖೆ ಸಿಬ್ಬಂದಿ ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿ ಆರೋಗ್ಯ ಹಾಳು ಮಾಡಿಕೊಳ್ಳುವಂತಾಗಿದೆ.
ಶೋಚನೀಯ ಪರಿಸ್ಥಿತಿ: ತಾಲೂಕು ಆಡಳಿತದ ಶಕ್ತಿ ಕೇಂದ್ರವೆಂದು ಪ್ರತಿಬಿಂಬಿಸುವ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಎಂ.ದಯಾನಂದ್ ಬಂದ ಬಳಿಕ ಒಂದಲ್ಲಾ-ಎರಡಲ್ಲಾ ಸುಮಾರು 18 ಮಂದಿ ವರ್ಗಾವಣೆ ಮತ್ತು ನಿಯೋಜನೆಯಾಗಿದ್ದು, ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳು ಅಧಿಕ ಕೆಲಸವನ್ನು ನಿರ್ವಹಿಸುವ ಮೂಲಕ ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಗಾವಣೆ, ನಿವೃತ್ತಿ ಸನಿಹ: ಶಿಡ್ಲಘಟ್ಟ ತಾಲೂಕು ಮಟ್ಟದಲ್ಲಿ ಪ್ರತಿಯೊಬ್ಬರು ತಾಲೂಕು ಕಚೇರಿಯನ್ನು ಆಶ್ರಯಿಸಿಕೊಂಡು ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಕೆಲವರು ಸಾಮಾಜಿಕ ಭದ್ರಾತ ಯೋಜನೆಯಡಿ ಮಾಸಾಶನ(ಪಿಂಚಣಿ), ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ಪಹಣಿ ಇನ್ನಿತರ ಕಾರ್ಯಗಳಿಗೆ ತಾಲೂಕು ಕಚೇರಿ ಆಶ್ರಯಿಸಿಕೊಂಡಿದ್ದಾರೆ. ಆದರೆ ಬಹುತೇಕ ಇಲಾಖೆಯಲ್ಲಿ ಕೆಲವೊಂದು ಸಿಬ್ಬಂದಿ ವರ್ಗಾವಣೆಯಾಗಿದ್ದರೇ, ಇನ್ನೂ ಕೆಲವರು ಶೀಘ್ರದಲ್ಲಿ ನಿವೃತ್ತಿಯಾಗಲಿದ್ದಾರೆ ಎನ್ನಲಾಗಿದೆ.
ವರ್ಗಾವಣೆ ಆಗಿರುವ ಅಧಿಕಾರಿ-ಸಿಬ್ಬಂದಿ ವಿವರ ತಾಲೂಕಿನ ಸಾದಲಿ ಹೋಬಳಿಯಲ್ಲಿ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್. ಮಹೇಶ್, ಚುನಾವಣಾ ಶಾಖೆಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿದ್ದ ಅನುಪಮಚಂದ್ರ, ಸಾಮಾಜಿಕ ಭದ್ರತಾ ಯೋಜನೆಯಡಿ ಶಿರಸ್ತೇದಾರ ಆಗಿದ್ದ ಎನ್.ಎಸ್.ಕವಿತಾ, ಸಿ.ಕೆ.ತ್ರಿವೇಣಿ ಪ್ರಥಮ ದರ್ಜೆ ಸಹಾಯಕ, ಎನ್.ಸುಭಾಷಿಣಿ ಗ್ರಾಮ ಲೆಕ್ಕಿಗರು (ಜಿಲ್ಲಾಧಿಕಾರಿಗಳಿಂದ ನಿಯೋಜನೆ). ಎನ್.ನರಸಿಂಹಯ್ಯ ಪ್ರ.ದ.ಸ (ನಿವೃತ್ತಿ), ಎಂ.ಕೆ. ಸುಜಾತಮ್ಮ, ಅಮೀನ್ ಖಾನಂ ದ್ವಿತೀಯ ದರ್ಜೆ ಸಹಯಕ (2019 ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ), ಬಿ.ಎಂ.ವೆಂಕಟಲಕ್ಷ್ಮಮ್ಮ ದ್ವಿ.ದ.ಸ (ಪದೋನ್ನತಿ), ಜಿ.ಕೋಮಲ, ಆರ್.ಭಾಗ್ಯಮ್ಮ, ಡಿ.ಆನಂದ್‌ಕುಮಾರ್, ಆರ್.ಮಂಜುನಾಥ್ ಗ್ರಾಮ ಲೆಕ್ಕಿಗರು (2019ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ).
ರಾಚಯ್ಯ ಮಠಪತಿ, ಸಂಗಪ್ಪ ಮೇಟಿ, ಚಂದ್ರಮ್ಮ ಚಕ್ರಸಾಲಿ ಗ್ರಾಮ ಲೆಕ್ಕಿಗರು ( ನಿಯಮ-6 ಅಡಿ ವರ್ಗಾ ವಣೆ), ಎಸ್.ಎ.ಪ್ರಕಾಶ್, ಎಂ.ಎಸ್.ಜಯಪ್ರಕಾಶ್ ಗ್ರಾಮ ಲೆಕ್ಕಿಗರು (ಪದೋನ್ನತಿ) ಪಡೆದುಕೊಂಡು ವರ್ಗಾವಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರದ ಆದೇಶಗಳನ್ನು ನಿಯಮಿತವಾಗಿ ಪಾಲನೆ ಮಾಡಿ ಜಿಲ್ಲಾ ಮಟ್ಟದ ಅಧಿಕಾರಿಗಳ ಆದೇಶಗಳನ್ವಯ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ. ಕೆಲವರು ಮಧುಮೇಹದಿಂದ ಬಳಲುತ್ತಿದ್ದರೆ, ಇನ್ನೂ ಹಲವರು ರಕ್ತದೊತ್ತಡ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಗಾಗಿ ರಜೆ ಹಾಕಲು ನಿರ್ಧರಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದುಬಂದಿದೆ.
ಒಬ್ಬೊಬ್ಬರು 8 ರಿಂದ 9 ಉಸ್ತುವಾರಿ : ಒಂದು ಇಲಾಖೆಯಲ್ಲಿ ಸುಮಾರು 18 ಮಂದಿ ಪದೋನ್ನತಿ, ನಿಯೋಜನೆ ಮತ್ತು ವರ್ಗಾವಣೆಯಾದರೇ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ. ಆದರೆ ಇದುವರೆಗೆ ವರ್ಗಾವಣೆ, ನಿವೃತ್ತಿ, ನಿಯೋಜನೆಗೊಂಡಿರುವ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಇನ್ನಿತರೆ ಇಲಾಖಾಧಿಕಾರಿಗಳ ಬದಲಿಗೆ ಬೇರೆಯವರನ್ನು ವರ್ಗಾವಣೆ ಅಥವಾ ನಿಯೋಜನೆ ಮಾಡಿಲ್ಲ. ಇದರಿಂದ 18 ಮಂದಿಯ ಕೆಲಸವನ್ನು ಹಾಲಿ ಇರುವ ಸಿಬ್ಬಂದಿ ಮತ್ತು ಅಧಿಕಾರಿಗಳು ವಹಿಸಿಕೊಂಡು ಮಾನಸಿಕ ಒತ್ತಡದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಒಬ್ಬೊಬ್ಬರು ಸುಮಾರು 8 ರಿಂದ 9 ವಿಭಾಗಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಬ್ಬರು ಒಂದು ವಿಭಾಗದ ಕೆಲಸ ಮಾಡಲು ಸುಸ್ತಾಗಿ ಬಿಡ್ತಾರೆ. ಆದರೆ 8-9 ವಿಭಾಗಗಳ ಕೆಲಸವನ್ನು ನ್ಯಾಯಯುತವಾಗಿ ನಿರ್ವಹಣೆ ಮಾಡಲು ಸಾಧ್ಯವೇ? ಎಲ್ಲಾ ವಿಭಾಗದ ಕೆಲಸ ಮತ್ತು ಸಕಾಲದಲ್ಲಿ ಪ್ರಗತಿಯ ವರದಿ ಸಲ್ಲಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ತಾಲೂಕು-ಜಿಲ್ಲಾಡಳಿತ ಮತ್ತು ಸರ್ಕಾರದ ಪ್ರತಿನಿಧಿಗಳು ಉತ್ತರಿಸಬೇಕಾಗಿದೆ.
ಕಳೆದ 6 ತಿಂಗಳಿಂದ ಸುಮಾರು 18 ಮಂದಿ ಸಿಬ್ಬಂದಿ ವರ್ಗಾವಣೆ ಆಗಿ ಇರುವ ಸಿಬ್ಬಂದಿ ಹೆಚ್ಚುವರಿಯಾಗಿ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ನಿಜ. ಸಾರ್ವಜನಿಕರ ಕೆಲಸಗಳನ್ನು ಸುಗಮವಾಗಿ ಮಾಡಿಕೊಳ್ಳಲು ಸಿಬ್ಬಂದಿ ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಬೇರೆ ತಾಲೂಕುಗಳಿಂದ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಭರವಸೆ ಇದೆ.
–ಎಂ.ದಯಾನಂದ್ ತಹಶೀಲ್ದಾರ್ ಶಿಡ್ಲಘಟ್ಟ ತಾಲೂಕು