ಬೆಂಗಳೂರು: ನಗರದ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಭದ್ರತಾ ಸಿಬ್ಬಂದಿ, ಸ್ವತ್ಛತಾ ಸಿಬ್ಬಂದಿಗೆ ಗುತ್ತಿಗೆದಾರರು ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಹಾಗೂ ಕಾರ್ಮಿಕರ ರಾಜ್ಯ ವಿಮೆ (ಇಎಸ್‌ಐ) ವಂಚಿಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿವೆ. ಈ ಕುರಿತು ಮಾಹಿತಿ ನೀಡುವಂತೆ ಮಾಹಿತಿ ಹಕ್ಕಿನಡಿಯಲ್ಲಿ 6 ತಿಂಗಳ ಹಿಂದೆ ಸಲ್ಲಿಸಲಾದ ಅರ್ಜಿಗೆ ಆರೋಗ್ಯ ಇಲಾಖೆ ಉತ್ತರಿಸದೇ ಇರುವುದು ಆರೋಪಕ್ಕೆ ಪುಷ್ಟಿ ನೀಡಿದೆ.
ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಮತ್ತು ಅದರ ಅಧೀನದ ಆಸ್ಪತ್ರೆಗಳಲ್ಲಿ ಭದ್ರತಾ ಮತ್ತು ಸ್ವತ್ಛತಾ ಸಿಬ್ಬಂದಿ ಸೇರಿ ವಿವಿಧ ಸಿಬ್ಬಂದಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಅವರಿಗೆ ಇಪಿಎಫ್, ಇಎಸ್‌ಐ ಸೌಲಭ್ಯಗಳ ನೀಡಲಾಗಿಲ್ಲ ಎಂಬ ದೂರುಗಳಿವೆ.
ಸಿಬ್ಬಂದಿ ಹಾಗೂ ಅವರ ಖಾತೆಗೆ ಜಮೆಯಾಗಿರುವ ಇಎಸ್‌ಐ ಮತ್ತು ಇಪಿಎಫ್ ವಿವರ ಕೋರಿ ಆರ್‌ಟಿಐ ಕಾರ್ಯಕರ್ತ ಮಾಗಿ ಉಮೇಶ್ ಎಂಬುವವರು ಅಡಿ ಆರು ತಿಂಗಳ ಹಿಂದೆ ಅರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಸಮರ್ಪಕ ಉತ್ತರ ನೀಡದೆ, ಇದೊಂದು ಗೌಪ್ಯತೆ ವಿಚಾರ ಎಂದು ಸಬೂಬು ಹೇಳಿ ಮಾಹಿತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಒಂದೂವರೆ ಸಾವಿರ ಸಿಬ್ಬಂದಿಗೆ ವಂಚನೆ!?: ವಿಕ್ಟೋರಿಯಾ, ಮಿಂಟೋ, ವಾಣಿ ವಿಲಾಸ, ಟ್ರಾಮಾಕೇರ್ ಮತ್ತು ತುರ್ತು ನಿರ್ವಹಣಾ ಘಟಕ, ಬೋರಿಂಗ್, ಲೇಡಿ ಕರ್ಜನ್ ಆಸ್ಪತ್ರೆಗಳು ಮತ್ತು ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಸುಮಾರು 1500 ಸಿಬ್ಬಂದಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರಿಗೂ ವಂಚನೆಯಾಗಿರುವ ಸಾಧ್ಯತೆಯಿದೆ ಎಂದು ಮಾಗಿ ಉಮೇಶ್ ಆರೋಪಿಸಿದ್ದಾರೆ.
ಸ್ವತ್ಛತಾ ಸಿಬ್ಬಂದಿ ವೇತನ ಕೇವಲ 5-6 ಸಾವಿರ ಮಾತ್ರ!: ಕಳೆದ ಆಗಸ್ಟ್‌ನಲ್ಲಿ ಸರ್ಕಾರ ಪೌರಕಾರ್ಮಿಕರ ವೇತನವನ್ನು 14 ಸಾವಿರಕ್ಕೆ ಹೆಚ್ಚಿಸಿದೆ. ಆದರೆ, ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಅದರ ಅಧೀನದ ಆಸ್ಪತ್ರೆಗಳ ಸ್ವತ್ಛತಾ ಸಿಬ್ಬಂದಿಗೆ ಗುತ್ತಿಗೆದಾರರು ಇನ್ನೂ ಐದಾರು ಸಾವಿರ ರೂ. ವೇತನ ನೀಡುತ್ತಿದ್ದಾರೆ.
ಸಿಬ್ಬಂದಿಗೆ ದೊರೆಯಬೇಕಾದ ಸೌಲಭ್ಯಗಳು ಗೌಪ್ಯತೆ ಹೇಗಾಗುತ್ತದೆ. ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅಮಾಯಕ ಸಿಬ್ಬಂದಿಯನ್ನು ವಂಚಿಸುತ್ತಿದ್ದಾರೆ. ಹೀಗಾಗಿ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದೇನೆ.
-ಮಾಗಿ ಉಮೇಶ್, ಆರ್‌ಟಿಐ ಕಾರ್ಯಕರ್ತ
ಆರೋಪಗಳು ಹಾಗೂ ಮಾಹಿತಿ ಹಕ್ಕಿನಡಿ ಮಾಹಿತಿ ನೀಡದಿರುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಡಾ. ಸಚ್ಚಿದಾನಂದ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್