Advertisement
ವಾಲಿಬಾಲ್ ಪಟುಗಳ ಅನುಕೂಲಕ್ಕಾಗಿ ಸಂಸದರ ಅನುದಾನ 1.9 ಕೋಟಿ ರೂ., ರಾಜ್ಯಸಭಾ ಸದಸ್ಯರ ಅನುದಾನ 50 ಲಕ್ಷ ರೂ., ಶಾಸಕರ ಅನುದಾನ 3.21 ಕೋಟಿ ರೂ. ಸೇರಿದಂತೆ ಒಟ್ಟಾರೆ 5.61 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಾಲಿಬಾಲ್ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಈ ಮೂರಂತಸ್ತಿನ ಕಟ್ಟಡದಲ್ಲಿ ಒಂದು ವಾಲಿಬಾಲ್ ಕೋರ್ಟ್, ಎರಡು ತಂಡಗಳ ಕೊಠಡಿಗಳು, ಎರಡು ಸ್ಟೋರ್ ರೂಮ್ ಗಳು, 500 ಜನರು ಕುಳಿತುಕೊಳ್ಳುವ ಆಸನಗಳುಳ್ಳ ಸಾರ್ವಜನಿಕ ಗ್ಯಾಲರಿ, ವಿಐಪಿ ಗ್ಯಾಲರಿ ನಿರ್ಮಿಸಲಾಗಿದೆ. ಮುಖ್ಯದ್ವಾರಕ್ಕೆ ಗ್ಲಾಸ್ ಅಳವಡಿಸಲಾಗಿದೆ. ಹಾಗೆಯೇ ಕ್ರೀಡಾಂಗಣದಲ್ಲಿ ಗಾಳಿ, ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ, ಅಲ್ಲಿ ಆಟ ಆಡಲಿಕ್ಕೆ ಮಾತ್ರ ಅವಕಾಶ ನೀಡಿಲ್ಲ. ಒಂದೆಡೆ ಕ್ರೀಡಾಪಟುಗಳಿಗೆ ಸೂಕ್ತ ಕ್ರೀಡಾಂಗಣಗಳಿಲ್ಲದೆ ಒದ್ದಾಡುತ್ತಿದ್ದಾರೆ. ಜತೆಗೆ ಅಭ್ಯಾಸಕ್ಕಾಗಿ ಕ್ರೀಡಾಂಗಣಗಳ ಕೊರತೆ ಇರುವ ಕಾರಣ ಪ್ರತಿಭೆಗಳು ಮುನ್ನೆಲೆಗೆ ಬರುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಆದರೆ, ಇತ್ತ ದೂಳಿನ ಕಾರಣಕ್ಕಾಗಿ ಕ್ರೀಡಾಂಗಣಕ್ಕೆ ಬಾಗಿಲು ಹಾಕಲಾಗಿದೆ.
Related Articles
Advertisement
ಉದ್ಘಾಟನಾ ಫಲಕ ತೆರವುಗೊಳಿಸಿಲ್ಲ : 2018ರ ಮಾರ್ಚ್ 19ರಂದು ಸ್ಥಳೀಯ ಸಂಸದ ಹಾಗೂ ಕೇಂದ್ರ ಸಚಿವರು ಉದ್ಘಾಟಿಸಿದ್ದರು. ಕಟ್ಟಡವುಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಉದ್ಘಾಟನಾ ಸಮಾರಂಭವೆಂದು ಬ್ಯಾನರ್ ಅಳವಡಿಸಲಾಗಿತ್ತು. ಆದರೆ, ಈವರೆಗೂ ಬ್ಯಾನರ್ ತೆರವುಗೊಳಿಸಿಲ್ಲ. ಕೆಲ ಉಪಕರಣಗಳಿಗೆ ದೂಳು ಹಿಡಿದಿವೆ. ಕ್ರೀಡಾಂಗಣದ ಮುಂಭಾಗವು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ನಿಲುಗಡೆ ತಾಣವಾಗಿದೆ.
ಎಲೆಕ್ಟ್ರಿಕಲ್ ವರ್ಕ್, ಎಸಿ ಅಳವಡಿಕೆ ಸೇರಿದಂತೆ ಕೆಲವು ಕೆಲಸಗಳು ನಡೆಯುತ್ತಿರುವುದರಿಂದ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. 2020ರ ಆರಂಭದಲ್ಲೇ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದ್ದು, ಫೆಬ್ರವರಿಯಿಂದ ಕ್ರೀಡಾಂಗಣಕ್ಕೆ ಮುಕ್ತ ಅವಕಾಶ ನೀಡಲಾಗುವುದು. –ಕೆ. ನಂದಕುಮಾರ್, ವಾಲಿಬಾಲ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ.
-ಮಂಜುನಾಥ ಗಂಗಾವತಿ