ಬೆಂಗಳೂರು: ತನ್ನ ಮೇಲೆ ಶ್ವಾನ ಛೂ ಬಿಟ್ಟಿದ್ದಾನೆ ಎಂದು ತಪ್ಪಾಗಿ ಭಾವಿಸಿದ ವ್ಯಕ್ತಿ ಯೊಬ್ಬ ದಾರಿಯಲ್ಲಿ ಹೋಗುತ್ತಿದ್ದ ವೃದ್ಧನಿಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಮಲ್ಲೇಶ್ವರ ಠಾಣೆ ವಾಪ್ತಿಯಲ್ಲಿ ನಡೆದಿದೆ.
ಮಲ್ಲೇಶ್ವರ ನಿವಾಸಿ ಎಚ್.ವಿ. ಬಾಲಸುಬ್ರಹ್ಮಣ್ಯ(62) ಗಾಯಗೊಂಡವರು. ಕೃತ್ಯ ಎಸಗಿದ ಹುಲಿ ಯೂರು ದುರ್ಗ ಮೂಲದ ರಾಜು(57)ಎಂಬಾತನನ್ನು ಬಂಧಿಸಲಾಗಿದೆ.
ಆ.21ರಂದು ರಾತ್ರಿ 8 ಗಂಟೆ ಸುಮಾರಿಗೆ ಮಲ್ಲೇಶ್ವರದ 17ನೇ ಕ್ರಾಸ್‌ನ ರಸ್ತೆಯಲ್ಲಿ ಆರೋಪಿ ರಾಜು ನಡೆದುಕೊಂಡು ಹೋಗುತ್ತಿದ್ದ. ಆಗ ನಾಯಿಯೊಂದು ಬೊಗಳಿ, ಹಿಂಬಾ ಲಿಸಿದೆ. ಅದರಿಂದ ಗಾಬರಿಗೊಂಡ ರಾಜು ನಾಯಿಗೆ ಹೆದರಿಸಿ ಮುಂದೆ ಹೋಗಿದ್ದಾನೆ. ಕೆಲ ಕ್ಷಣದ ಬಳಿಕ ತಿರುಗಿ ನೋಡಿದಾಗ ಆ ನಾಯಿ ಬಾಲಸುಬ್ರಹ್ಮಣ್ಯ ಅವರ ಹಿಂದೆ ನಡೆದುಕೊಂಡು ಬರುತ್ತಿತ್ತು. ಹೀಗಾಗಿ ನಾಯಿ ಬಾಲ ಸುಬ್ರಹ್ಮಣ್ಯ ಅವರದ್ದೇ ಎಂದು ಭಾವಿಸಿದ್ದಾನೆ. ಅಲ್ಲದೆ, ಆ ನಾಯಿ ಮತ್ತೆ ಆರೋಪಿ ಕಡೆ ನೋಡಿ ಬೊಗಳಲು ಆರಂಭಿಸಿದೆ. ಅದರಿಂದ ಗಾಬರಿಗೊಂಡ ರಾಜು ಅಲ್ಲಿಂದ ಓಡಲು ಪ್ರಾರಂಭಿಸಿದ. ನಾಯಿ ಸಹ ಬೆನ್ನಟ್ಟಿ ಹೋಗಿದೆ.
ಆನಂತರ ಬಾಲಸುಬ್ರಹ್ಮಣ್ಯ ಬಳಿ ಬಂದ ಆರೋಪಿ ರಾಜು, ನಾಯಿ ವಿಚಾರವಾಗಿ ಜಗಳ ತೆಗೆದು ತನ್ನ ಬಳಿ ಇದ್ದ ಚಾಕುವಿನಿಂದ ಪ್ರಹಾರ ನಡೆಸಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ ಬಾಲಸುಬ್ರಹ್ಮಣ್ಯರ ಬಲಭಾಗದ ಕೆನ್ನೆಗೆ ಗಾಯವಾಗಿದೆ. ಮತ್ತೂಮ್ಮೆ ಇರಿಯಲು ಬಂದಾಗ ಬಲಗೈಗೆ ಗಾಯವಾಗಿದೆ. ಬಾಲಸುಬ್ರಹ್ಮಣ್ಯಂ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಜನರು ಬರುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಸಾರ್ವಜನಿಕರು ಬಾಲಸುಬ್ರಹ್ಮಣ್ಯ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆ ದಾಖಲಿಸಿದ್ದರು. ಸದ್ಯ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಬಳಿಕ ಬಾಲಸುಬ್ರಹ್ಮಣ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಾಲಸುಬ್ರಹ್ಮಣ್ಯ ಹೇಳಿದ್ದೇನು?: ದಾರಿಯಲ್ಲಿ ಹೋಗುವಾಗ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ನಾಯಿ ಕಡೆ ಕೈ ತೋರಿಸಿ ಜೋರಾಗಿ ಕೂಗಾಡಿದ. ಆದರೆ, ಆತ ಏನು ಹೇಳುತ್ತಿದ್ದಾನೆ ಎಂಬುದು ನನಗೆ ಅರ್ಥ ವಾಗಲಿಲ್ಲ. ಬಳಿಕ ಚಾಕು ತೆಗೆದು ಏಕಾಏಕಿ ದವಡೆ ಮತ್ತು ಬಲಗೈಗೆ ಇರಿದಿದ್ದಾನೆ. ಅಷ್ಟ ರಲ್ಲಿ ಜೋರಾಗಿ ಕೂಗಿಕೊಂಡಾಗ ಸ್ಥಳೀಯರು ನೆರವಿಗೆ ಧಾವಿಸಿದರು. ಇಲ್ಲವಾದರೆ ಆತ ದೇಹದ ಮೇಲೆ ಇನ್ನಷ್ಟು ಬಾರಿ ಇರಿಯುತ್ತಿದ್ದ ಎಂದು ಬಾಲಸುಬ್ರಹ್ಮಣ್ಯಂ ಹೇಳಿಕೆ ನೀಡಿ ದ್ದಾರೆ ಎಂದು ಮೂಲಗಳು ತಿಳಿಸಿವೆ. ಮಲ್ಲೇಶ್ವರಂ ಠಾಣೆಯಲ್ಲಿ ಕೇಸು ದಾಖಲಾಗಿದೆ.
ತಪ್ಪು ಕಲ್ಪನೆಯಿಂದ ಕೃತ್ಯ: ಘಟನಾ ಸ್ಥಳದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಯನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆತ ವಿಚಾರಣೆ ವೇಳೆ “ನಾಯಿ ತನ್ನನ್ನು ಬೆನ್ನಟ್ಟಿ ಬರುತ್ತಿದ್ದಂತೆ ನಾನು ಸಹ ವೇಗವಾಗಿ ಓಡಿ ತಪ್ಪಿಸಿಕೊಂಡೆ. ಆದರೆ, ನಾಯಿ ಬಾಲಸುಬ್ರಹ್ಮಣ್ಯ ಬಳಿ ಹೋಗಿದ್ದರಿಂದ ತಪ್ಪಾಗಿ ಭಾವಿಸಿ ಚಾಕುವಿನಿಂದ ಇರಿದಿದ್ದೇನೆ’ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.