ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಖರ್ಚು ವೆಚ್ಚದ ಮಾಹಿತಿ ಕೇಳಲಾಗಿದೆ. ಎರಡು ಕಮಿಟಿಗಳು ಮಾಹಿತಿ ಸಲ್ಲಿಕೆ ಮಾಡಿಲ್ಲ. ಅವರು ವರದಿ ಸಲ್ಲಿಸಿದ ಬಳಿಕ ಮಾಹಿತಿ ನೀಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ನಲ್ಲೇ ಉಳಿದುಕೊಂಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೀನಿನ ಹೆಜ್ಜೆ, ಜಿ.ಟಿ. ದೇವೇಗೌಡರ ನಡೆಯನ್ನು ಯಾರಿಂದಲೂ ಕಂಡುಹಿಡಿಯಲು ಆಗಲ್ಲ ಎಂದು ಈ ಹಿಂದೆಯೇ ಹೇಳಿದ್ದೆ, ಈಗ ನಿಜ ಆಗಿದೆ ಎಂದರು.
ಜಿ.ಟಿ.ದೇವೇಗೌಡ ಅವರನ್ನು ಬಿಜೆಪಿಗೆ ಕರೆದಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದೆವು. ಅವರು ಜೆಡಿಎಸ್ ಟಿಕೆಟ್ ಮೇಲೆ ಗೆದ್ದಿದ್ದು ಈಗ ಅಲ್ಲೆ ಉಳಿದಿದ್ದಾರೆ ಎಂದರು.
ಮಳೆ ಹಾನಿ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಮಳೆಹಾನಿ ಬಗ್ಗೆ ವರದಿ ಪಡೆದು ಮುಖ್ಯಮಂತ್ರಿಗಳಿಗೆ ತಿಳಿಸಲಾಗುತ್ತದೆ. ನಿರೀಕ್ಷೆಗೂ ಮೀರಿ ಮಳೆ ಆಗುತ್ತಿದೆ. ಮಳೆ ನಿಂತ ಮೇಲೆ ಎಲ್ಲಾ ವ್ಯವಸ್ಥೆ ಆಗುತ್ತದೆ ಎಂದು ಹೇಳಿದರು.
ಚಾಮುಂಡೇಶ್ವರಿ ಮಾತ್ರವಲ್ಲ 224 ಕ್ಷೇತ್ರದಲ್ಲೂ ಸಮರ್ಥ ಅಭ್ಯರ್ಥಿಗಳಿದ್ದಾರೆ. ಮುಂದೆಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಕ್ರಿಯಿಸಿದರು