Advertisement

ಎಸ್ಟಿ ಮೀಸಲು ಏರಿಕೆಗೆ ಸಮಿತಿ

02:13 AM Jun 29, 2019 | Sriram |

ಬೆಂಗಳೂರು: ವಾಲ್ಮೀಕಿ ಸಮುದಾಯದ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರ, ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಕ್ಕೆ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಸಮಿತಿ ಅಥವಾ ಆಯೋಗ ರಚನೆ ಮಾಡಲು ನಿರ್ಣಯಿಸಿದೆ.

Advertisement

ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಎಸ್ಟಿ ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಯಾವ ವರ್ಗದಿಂದ ಮೀಸಲಾತಿ ಪ್ರಮಾಣವನ್ನು ವರ್ಗಾಯಿಸಬೇಕು ಎನ್ನುವ ಕುರಿತು ಸುದೀರ್ಘ‌ ಚರ್ಚೆಯಾಗಿದೆ. ಈಗಿರುವ ಮೀಸಲಾತಿ ವ್ಯವಸ್ಥೆಯ ಬಗ್ಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಸಂಪುಟಕ್ಕೆ ವಿಸ್ತೃತ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇತರ ಹಿಂದುಳಿದ ವರ್ಗಗಳಿಂದ ಎಸ್ಟಿ ಸಮುದಾಯಕ್ಕೆ ಅನೇಕ ಜಾತಿಗಳು ಸೇರ್ಪಡೆ ಆಗಿರುವುದರಿಂದ ಎಸ್ಟಿ ಸಮುದಾಯದ ಜನಸಂಖ್ಯೆ ಹೆಚ್ಚಳವಾಗಿದೆ. ಆದರೆ, ಅದೇ ಪ್ರಮಾಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಿಲ್ಲ. ಹೀಗಾಗಿ ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇಕಡಾ 3 ರಿಂದ 7.5 ಕ್ಕೆ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದೆ.

ಸಂವಿಧಾನದಲ್ಲಿ ಅವಕಾಶವಿದೆಯೇ?: ಮೀಸಲಾತಿ ಪ್ರಮಾಣವನ್ನು ಶೇ. 50ಕ್ಕಿಂತ ಹೆಚ್ಚಳ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಸಂವಿಧಾನದ ಶೆಡ್ಯೂಲ್ 9 ರ ಪ್ರಕಾರ ಮೀಸಲಾತಿ ಪ್ರಮಾಣ ಶೇ.50 ಕ್ಕಿಂತ ಹೆಚ್ಚಳ ಮಾಡಲು ಸಂಸತ್ತಿನ ಅನುಮೋದನೆ ಅಗತ್ಯವಿದೆ. ಅಲ್ಲದೇ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಶೇ.16 ರಷ್ಟು ಮೀಸಲಾತಿ ನೀಡಲು ಅಲ್ಲಿನ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಮುಂಬೈ ಹೈಕೋರ್ಟ್‌ ಎತ್ತಿ ಹಿಡಿದಿರುವುದರಿಂದ ಆ ಬಗ್ಗೆಯೂ ಪರಿಶೀಲನೆ ನಡೆಸಿ ರಾಜ್ಯದಲ್ಲಿ ಎಸ್ಟಿ ಸಮುದಾಯದ ಮೀಸಲು ಪ್ರಮಾಣ ಹೆಚ್ಚಳ ಮಾಡಲು ಪರ್ಯಾಯ ಮಾರ್ಗ ಅನುಸರಿಸಲು ಸಮಿತಿ ಅಥವಾ ಆಯೋಗ ರಚನೆ ಮಾಡಿ ವರದಿ ಪಡೆಯಲು ಸಂಪುಟ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.50 ಪ್ರಮಾಣವನ್ನು ಮೀರಿ ಮೀಸಲು ನೀಡಲು ಅವಕಾಶ ಇದೆಯಾ ಎನ್ನುವ ಕುರಿತಂತೆ ಪರಾಮರ್ಶೆ ಮಾಡಿ ವರದಿ ನೀಡಲು ಆಯೋಗ ರಚನೆ ಅಥವಾ ಸಮಿತಿ ರಚನೆಯ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡು ಮುಂದಿನ ಸಂಪುಟ ಸಭೆಗೆ ತರುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಜುಲೈ 12ರಿಂದ ಅಧಿವೇಶನ ಶುರು
ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನವನ್ನು ಜುಲೈ 12ರಿಂದ 26ರವರೆಗೆ ನಡೆಸಲು ಸಂಪುಟ ತೀರ್ಮಾನಿಸಿದೆ. ಬಜೆಟ್‌ನ ಮುಂದುವರೆದ ಅಧಿವೇಶನ ಇದಾಗಿದ್ದು, ರಾಜ್ಯ ಸರ್ಕಾರದ ಪೂರ್ಣ ಪ್ರರ್ಮಾಣದ ಬಜೆಟ್ನ್ನು ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಈ ಬಾರಿಯ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡಬೇಕೆಂಬ ಚರ್ಚೆ ನಡೆದಿತ್ತು. ಆದರೆ, ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಕನಿಷ್ಠ ಒಂದು ತಿಂಗಳ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next