ಬೆಂಗಳೂರು: ರಾಜಧಾನಿಯ ಪುರಾತನ ಚರ್ಚ್‌ಗಳಲ್ಲಿ ಒಂಗಿರುವ ಶಿವಾಜಿನಗರದ ಸಂತ ಬೆಸಲಿಕಾ ಚರ್ಚ್‌ನಲ್ಲಿ ಸಂತ ಮೇರಿ ಜಯಂತಿ ಅಂಗವಾಗಿ ಶನಿವಾರ ವಿಜೃಂಭಣೆಯ ಸಂತ ಮೇರಿ ಉತ್ಸವ ನಡೆಯಲಿದೆ.
ಸಂತ ಮೇರಿ ಜಯಂತಿಗೆ ಮೊದಲ ಒಂಬತ್ತು ದಿನಗಳನ್ನು “ನವೇನ’ ಎಂದು ಆಚರಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಸಂತ ಮೇರಿ ದೇವಿಗೆ ಹರಕೆ ಹೊತ್ತ ಭಕ್ತರು ಒಂಬತ್ತು ದಿನಗಳು ಚರ್ಚೆಗೆ ಭೇಟಿ ನೀಡಿ ಹರಕೆ ತೀರಿಸಿ ಪೂಜೆ ಸಲ್ಲಿಸುತ್ತಾರೆ. ಹತ್ತನೆ ದಿನ ಸಂತ ಮೇರಿ ಮಾತೆಯ ಉತ್ಸವ ನಡೆಯಲಿದ್ದು, ಲಕ್ಷಾಂತರ ಜನರು ಉತ್ಸವದಲ್ಲಿ ಭಾಗಿಯಾಗಿ ಮೇರಿ ಮಾತೆಯ ದರ್ಶನ ಪಡೆಯುತ್ತಾರೆ.
ಶನಿವಾರ ಬೆಳಗಿನ ಜಾವ 4 ಗಂಟೆಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಚರ್ಚ್‌ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅನ್ನಸಂತರ್ಪಣೆ ನಡೆಯುತ್ತದೆ.
ಸಂಜೆ 6 ಗಂಟೆಗೆ ಭಕ್ತರನ್ನು ಉದ್ದೇಶಿಸಿ ಆರ್ಚ್ ಬಿಷಪ್ ಪೀಟರ್ ಮಚಾಡೋ ಶಾಂತಿ ಸಂದೇಶ ಸಾರಲಿದ್ದು, ಮೇರಿ ಮಾತೆಯ ಮೂರ್ತಿ ಹೊತ್ತ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಥ ಮುಂದೆ ಸಾಗಿದಂತೆ ಭಕ್ತರು ಸಂಪಿಗೆ ಹಾಗೂ ಮಲ್ಲಿಗೆ ಹೂಗಳನ್ನು ದೇವಿ ಸಮರ್ಪಿಸುವ ಮೂಲಕ ಭಕ್ತಿ ಮೆರೆಯುತ್ತಾರೆ.
ದೊಡ್ಡ ಪರದೆ ಅಳವಡಿಕೆ: ಮೇರಿ ಮಾತೆಗೆ ನಡೆಯುವಂತಹ ಪೂಜೆ ಮತ್ತು ಧರ್ಮ ಗುರುಗಳ ಸಂದೇಶವನ್ನು ಚರ್ಚ್ ಹೊರಗಡೆ ನೆರೆಯುವಂತಹ ಭಕ್ತರು ವೀಕ್ಷಿಸಲು ಚರ್ಚ್ ಬಳಿ ದೊಡ್ಡ ಗಾತ್ರದ ಪರದೆಗಳನ್ನು ಅಳವಡಿಸಲಾಗಿದೆ. ಜತೆಗೆ ಭಕ್ತಿ ಸಂದೇಶ ಪ್ರಸಾರಕ್ಕಾಗಿ ಧ್ವನಿ ವರ್ಧಕಗಳು ಹಾಗೂ ಅಲಂಕಾರಿಕ ದೀಪಗಳನ್ನು ಅಳವಡಿಕೆ ಮಾಡಲಾಗಿದೆ.
ಸಂತ ಮೇರಿ ಮಾತೆಯು ಶನಿವಾರ ಜನಿಸಿದ್ದು, ಈ ಬಾರಿಯ ಅವರ ಜಯಂತಿ ಶನಿವಾರವೇ ಬಂದಿರುವುದು ವಿಶೇಷವಾಗಿದೆ. ಆ ಹಿನ್ನೆಲೆಯಲ್ಲಿ ಶನಿವಾರ ನಡೆಯುವ ಉತ್ಸವದಲ್ಲಿ 2.50 ಲಕ್ಷಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ.