Advertisement

ಅಧ್ಯಯನ ಕೇಂದ್ರವಾಗಿ ಸೈಂಟ್‌ ಮೇರಿಸ್‌: ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ.

02:46 AM Apr 26, 2022 | Team Udayavani |

ಉಡುಪಿ: ಭೌಗೋಳಿಕವಾಗಿ ಅತ್ಯಂತ ವಿಶಿಷ್ಟವಾಗಿರುವ ಮಲ್ಪೆಯ ಸೈಂಟ್‌ ಮೇರಿಸ್‌ ದ್ವೀಪವನ್ನು ಅಧ್ಯಯನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಹೇಳಿದರು.

Advertisement

ಸೈಂಟ್‌ ಮೇರಿಸ್‌ ದ್ವೀಪ ಕೇವಲ ಪ್ರವಾಸಿ ತಾಣವಾಗದೆ ಅಧ್ಯಯನ ಕೇಂದ್ರವಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಇದು ಕೇವಲ ವೀಕ್ಷಣೀಯ ಅಥವಾ ಸೌಂದರ್ಯ ಸವಿಯುವ ಸ್ಥಳವಾಗದೆ ಅಧ್ಯಯನದ ವಿಷಯವೂ ಆಗಬೇಕು ಎಂಬುದು ನಮ್ಮ ಯೋಚನೆಯಾಗಿದೆ ಎಂದು ಉಡುಪಿ ಪತ್ರಿಕಾಭವನದಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದರು.

ಸೈಂಟ್‌ಮೇರಿಸ್‌ ದ್ವೀಪದಲ್ಲಿ ಪ್ರವಾಸಿಗರ ಸುರಕ್ಷೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಇತ್ತೀಚೆಗೆ ನಡೆದಿರುವ ಘಟನೆ ಸಂಬಂಧ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉಪ ಸಮಿತಿ ರಚಿಸಿದ್ದೇವೆ. ಉಪಸಮಿತಿಯ ಸದಸ್ಯರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಮಲ್ಪೆ ಭಾಗದ ಸ್ಥಳೀಯರೊಂದಿಗೂ ಮಾತುಕತೆ ನಡೆಸಿದ್ದು, ಅವರು ಕೆಲವು ಸಲಹೆ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಪ್ರವಾಸಕ್ಕೆ ಬರುವ ಸಂದರ್ಭದಲ್ಲಿ ಆ ಕಾಲೇಜಿಗೆ ಸಂಬಂಧಿಸಿದ ಪ್ರಾಧ್ಯಾಪಕರಿಗೆ ಕೆಲವು ಸುರಕ್ಷೆಯ ಜವಾಬ್ದಾರಿ ವಹಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ಪರಿಸರಸ್ನೇಹಿ ಸೆಲ್ಫಿ ಪಾಯಿಂಟ್‌ ಒಂದನ್ನು ಸುರಕ್ಷಿತ ಸ್ಥಳದಲ್ಲಿ ನಿರ್ಮಿಸಲಿದ್ದೇವೆ. ಕ್ಲಾಕ್‌ ಟವರ್‌ ಕೂಡ ನಿರ್ಮಾಣ ಮಾಡಲಿದ್ದೇವೆ. ಈಗಾಗಲೆ ನಡೆದಿರುವ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರಿಗೆ ಕಠಿನ ಶಿಕ್ಷೆಯಾಗಲಿದೆ ಎಂದರು.

4ನೇ ಅಲೆ: ಮುನ್ನೆಚ್ಚರಿಕೆ ಕ್ರಮ
ಕೊರೊನಾ ಇನ್ನೂ ನಮ್ಮ ನಡುವೆ ಇದೆ. ಎಲ್ಲರಿಗೂ ಆದ್ಯತೆ ಮೇಲೆ ಲಸಿಕೆ ನೀಡುತ್ತಿದ್ದೇವೆ. ಮೊದಲ ಡೋಸ್‌ನಲ್ಲಿ ಶೇ. 100ಕ್ಕೂ ಅಧಿಕ ಸಾಧನೆಯಾಗಿದೆ. ಎರಡನೇ ಡೋಸ್‌ನಲ್ಲಿ ಶೇ. 98.5ರಷ್ಟು ಗುರಿ ತಲುಪಿದ್ದೇವೆ. ಮಕ್ಕಳಿಗೆ ಮತ್ತು ಮುನ್ನೆಚ್ಚರಿಕೆ ಡೋಸ್‌ ನೀಡುವಲ್ಲಿಯೂ ವಿಶೇಷ ಗಮನ ಹರಿಸುತ್ತಿದ್ದೇವೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ಪ್ರಾಥಮಿಕ ಮುನ್ನೆಚ್ಚರಿಕೆಯನ್ನು ಎಲ್ಲರೂ ವಹಿಸಲೇ ಬೇಕಾಗುತ್ತದೆ. ನಾಲ್ಕನೇ ಅಲೆಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಈವರೆಗೂ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಲೇರಿಯಾ ಮುಕ್ತ ಜಿಲ್ಲೆಗೆ ಕ್ರಮ
ಜಿಲ್ಲಾಡಳಿತ, ಆರೋಗ್ಯ ಸಹಿತ ವಿವಿಧ ಇಲಾಖೆಗಳು ಮತ್ತು ನಗರಸಭೆಯ ಸಹಕಾರದೊಂದಿಗೆ ಮಲೇರಿಯಾ ಮುಕ್ತ ಉಡುಪಿ ಜಿಲ್ಲೆಯ ನಿರ್ಮಾಣಕ್ಕೆ ಶ್ರಮಿಸುತ್ತಿದ್ದೇವೆ. ಏಳೆಂಟು ವರ್ಷದಿಂದ ಮಲೇರಿಯಾ ಪ್ರಮಾಣ ಕಡಿಮೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದೇವೆ. ಜಿಲ್ಲೆಯಲ್ಲಿ ಮಲೇರಿಯಾ ಸ್ಪಾಟ್‌ಗಳನ್ನು ಗುರುತಿಸುತ್ತಿದ್ದೇವೆ. ಮಲ್ಪೆ ಭಾಗದಲ್ಲಿ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ತಿಳಿಸಿದರು.

Advertisement

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಮತ್ತು 160 ಎ ಸಮಸ್ಯೆಗಳನ್ನು ಹಂತಹಂತವಾಗಿ ಸರಿಪಡಿಸಲಾಗುತ್ತಿದೆ. ಸರ್ವೀಸ್‌ ರಸ್ತೆಯ ಸಮಸ್ಯೆಯ ಬಗ್ಗೆಯೂ ಪ್ರಾಧಿಕಾರದ ಗಮನಕ್ಕೆ ತಂದಿದೇವೆ. ಒಂದೊಂದೇ ಸಮಸ್ಯೆಗೆ ಪರಿಹಾರ ಸಿಗಲಿದೆ.
-ಕೂರ್ಮಾರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next