ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದಲ್ಲಿ ರವಿವಾರ ಬೆಳಗ್ಗೆ ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ದೊರಕಿತು.
ಮುಖ್ಯ ಗುರುಗಳಾದ ವಂ| ಅಲ್ಬನ್ ಡಿ’ಸೋಜಾ ಅವರು ಧ್ವಜಾರೋಹಣ ನಡೆಸಿ, ಸಂತ ಲಾರೆನ್ಸರ ಪತ್ರ ಅವಶೇಷವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.
ದಿನದ ಪ್ರಮುಖ ಬಲಿಪೂಜೆಗಳನ್ನು ಶಿವಮೊಗ್ಗದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೊ ಮತ್ತು ಮಂಗಳೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ನೆರವೇರಿಸಿ ಪ್ರಬೋಧನೆ ನೀಡಿದರು. ಮೊದಲ ದಿನ ಮಕ್ಕಳಿಗೆ ಮೀಸಲಾಗಿದ್ದು, ಅವರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು. ಪುಟಾಣಿ ಮಕ್ಕಳೊಂದಿಗೆ ನೂರಾರು ಮಾತೆಯಂದಿರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಯುವಕನ ಬರ್ಬರ ಹತ್ಯೆ
ದಿನದ ಇತರ ಬಲಿಪೂಜೆಗಳನ್ನು ವಂ| ರೊಯ್ ಡಿ’ಸೋಜಾ ಕಲ್ಮಾಡಿ,ವಂ| ಜೇಸನ್ ಪಿಂಟೊ ಶಿರ್ವ ಮತ್ತು ವಂ| ಅನಿಲ್ ಕಿರಣ್ ಮೂಲ್ಕಿನೆರವೇರಿಸಿದರು. ಕನ್ನಡ ಬಲಿಪೂಜೆಯನ್ನು ಚಿಕ್ಕಮಗಳೂರಿನ ವಂ| ಜಾರ್ಜ್ ಮೊನಿಸ್ ನೆರವೇರಿಸಿದರು.
ಜನವರಿ ಕೊನೆಯ ವಾರದಲ್ಲಿ ನಡೆಯಬೇಕಾಗಿದ್ದ ಅತ್ತೂರು ಪುಣ್ಯಕ್ಷೇತ್ರದ ಮಹೋತ್ಸವವು ಕೋವಿಡ್ ಸೋಂಕಿನ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಸೋಮವಾರದಿಂದ ಗುರು ವಾರ ಬೆಳಗ್ಗೆ 8, 10, 12 ಮತ್ತು ಮಧ್ಯಾಹ್ನ 2, 4 ಹಾಗೂ 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.