ಕಾರ್ಕಳ: ಪ್ರಭು ಯೇಸುಕ್ರಿಸ್ತರ ಮುಖಾಂತರ ಕಾಲಪೂರ್ಣತೆಯಲ್ಲಿ ಪ್ರಕಟವಾದ ದೇವರ ಸುವಾರ್ತೆಯಲ್ಲಿ ನಂಬಿಕೆ ಇಟ್ಟು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡು ಬಾಳಲು ಪಣ ತೊಡುವವರು ತಮ್ಮ ಜೀವನದಲ್ಲಿ ದೇವರಿಗೆ ಮಹಿಮೆ ನೀಡುತ್ತಾರೆ. ಸುವಾರ್ತೆಯ ಸಂದೇಶ ಸದ್ಗುಣಗಳನ್ನು ಬೆಳೆಸಲು ಮತ್ತು ಸಮಾಜಮುಖಿಯಾಗಿ ಬಾಳಲು ಆಧಾರ. ಇದರಂತೆ ಬಾಳುವ ವಿಶ್ವಾಸಿಗಳ ಬದುಕು ನಿಜಕ್ಕೂ ಸಾರ್ಥಕ ಎಂದು ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಾಯಿಲ್ ಹೇಳಿದರು.
ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ಎರಡನೇ ದಿನ ಸೋಮವಾರ ಪ್ರಮುಖ ಬಲಿಪೂಜೆ ನೆರವೇರಿಸಿ ಪ್ರಬೋಧನೆ ನೀಡಿದರು.
ಮಹೋತ್ಸವದ ಎರಡನೇ ದಿನವೂ ಭಕ್ತರು ನಿರಂತರ ಆಗಮಿಸುತ್ತ ಸಂತ ಲಾರೆನ್ಸರ ಪವಾಡ ಮೂರ್ತಿಯ ಬಳಿ ಭಕ್ತಿಯಿಂದ ತಮ್ಮ ಕೋರಿಕೆಗಳಿಗಾಗಿ ಪ್ರಾರ್ಥಿಸಿ, ಹರಕೆ ಸಲ್ಲಿಸಿದರು.
ಸುವಾರ್ತಾ ಪ್ರಸಾರಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದಿನದ ಬಲಿಪೂಜೆಗಳನ್ನು ವಂ| ಸುನಿಲ್ ಡೊಮಿನಿಕ್ ಲೋಬೊ ಪೆರಂಪಳ್ಳಿ, ವಂ| ಕ್ಲಿಫರ್ಡ್ ಫೆರ್ನಾಂಡಿಸ್ ಕುಲಶೇಖರ, ವಂ| ಪ್ರದೀಪ್ ಕಾಡೋಜಾ ಮೂಡುಬೆಳ್ಳೆ, ವಂ| ಆಲ್ಬರ್ಟ್ ಕ್ರಾಸ್ತಾ, ಪಿಯುಸ್‌ನಗರ, ವಂ| ಸಂತೋಷ್ ರಾಡ್ರಿಗಸ್ ಮಂಗಳೂರು ನೆರವೇರಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ವಂ| ಡೊ. ಲೆಸ್ಲಿ ಡಿ’ಸೋಜಾ ಶಿರ್ವ ಅವರು ರಾತ್ರಿ 8 ಗಂಟೆಗೆ ನೆರವೇರಿಸಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು.
ಮಹೋತ್ಸವದ ಮೂರನೇ ದಿನ ಮಂಗಳವಾರ ಬೆಳಗ್ಗೆ 8, 10, 12 ಹಾಗೂ ಅಪರಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಸಂಜೆ 6 ಗಂಟೆಗೆ ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಕನ್ನಡದಲ್ಲಿ ಬಲಿಪೂಜೆ ನೆರವೇರಿಸಲಿದ್ದಾರೆ.