Advertisement

SST, YST Tax…! ; ಐಟಿ ದಾಳಿಯಲ್ಲಿ ಹಣ ಸಿಕ್ಕ ಕುರಿತು ಎಚ್ ಡಿಕೆ ಸ್ಪೋಟಕ ಹೇಳಿಕೆ

05:34 PM Oct 16, 2023 | Team Udayavani |

ಮೈಸೂರು: ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದು,”ಮೊದಲ‌ ದಿನ‌ ಸಿಕ್ಕಿದ್ದು ಎಸ್.ಎಸ್‌‌.ಟಿ. ಟ್ಯಾಕ್ಸ್ ಹಣ, ಎರಡನೇ ದಿನ ಸಿಕ್ಕಿದ್ದು ವೈ.ಎಸ್.ಟಿ. ಟ್ಯಾಕ್ಸ್ ಹಣ” ಎಂದು ರಾಜ್ಯ ಸರಕಾರ ಮತ್ತು ಸಿಎಂ ಸಿದ್ದರಾಮಯಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Advertisement

ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ಬಳಿಕ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ”ಐಟಿ ದಾಳಿ ವೇಳೆ ಹಣ ಸಿಕ್ಕವರು ದೊಡ್ಡ ಗುತ್ತಿಗೆದಾರರೇನಲ್ಲ. ಗುತ್ತಿಗೆದಾರನಿಗೂ ವಾಸ್ತು ಶಿಲ್ಪಿಗೂ ಏನು ಸಂಬಂಧ? ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಮನೆ ನವೀಕರಿಸುತ್ತಿರುವವರು ಯಾರು? ಮೈಸೂರಿನ ಮನೆಯ ವಾಸ್ತು ಶಿಲ್ಪದ ಕೆಲಸ ಮಾಡುತ್ತಿರುವವರು, ಈ ವಾಸ್ತು ಶಿಲ್ಪಿ ಯಾರೊಂದಿಗೆ ಹತ್ತಿರವಿದ್ದಾರೆ ಅನ್ನುವುದು ತನಿಖೆಯಾಗಬೇಕು. ತನಿಖೆಯಾದರೆ ಎಲ್ಲವೂ ಬಯಲಾಗುತ್ತದೆ. ಸಿಕ್ಕ ಹಣಕ್ಕೆ ಮೈಸೂರಿನ ನಂಟು ಇದೆಯಾ? ಅದು ಕೂಡ ತನಿಖೆಯಾಗಲಿ” ಎಂದರು.

”ಪಂಚ ರಾಜ್ಯಗಳ ಎಲೆಕ್ಷನ್ ನಲ್ಲಿ ಹೈಕಮಾಂಡ್ ಹಣ ಕೇಳಿಲ್ಲ ಅನ್ನುತ್ತಾರೆ, ಕೇಳದೆನೆ ಇಷ್ಟೊಂದು ಹಣ ಕಲೆಕ್ಷನ್ ಮಾಡುತ್ತಿದ್ದಾರೆ, ಇನ್ನು ಹೈಕಮಾಂಡ್ ಕೇಳಿದರೆ ಎಷ್ಟೊಂದು ಕಲೆಕ್ಷನ್ ಮಾಡುತ್ತಿದ್ದರು. ರಾಜ್ಯದಲ್ಲಿ ಈಗ ಜಿ.ಎಸ್.ಟಿ‌ ಕಲೆಕ್ಷನ್ ಗಿಂತ ಎಸ್.ಎಸ್.ಟಿ. ಮತ್ತು ವೈ.ಎಸ್.ಟಿ.ಟ್ಯಾಕ್ಸ್ ಕಲೆಕ್ಷನ್ ಜೋರಾಗಿ ನಡೆಯುತ್ತಿದೆ” ಎಂದು ಆರೋಪಿಸಿದರು.

”ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರಕಾರವಿದು. ಜನ ಭಾರೀ ನಿರೀಕ್ಷೆಯಿಂದ ಇವರನ್ನು ಗೆಲ್ಲಿಸಿದರಲ್ಲ, ಜನರೇ ತಿರುಗಿ ಬೀಳೋ ಕಾಲ ದೂರವಿಲ್ಲ.ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ನುಡಿದಂತೆ ನಡೆದಿದ್ದೇವೆ ಅಂತಾರಲ್ಲ, ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕೆಲಸಗಳು ಏನಾದರೂ ಆಗುತ್ತಿದೆಯಾ? ಹೊಸತಾಗಿ ಗೆದ್ದ ಶಾಸಕರು ಕ್ಷೇತ್ರದ ಕಡೆ ತಲೆ ಹಾಕುತ್ತಿಲ್ಲ. ಜನರ ಪ್ರಶ್ನೆಗೆ ಉತ್ತರಿಸಲು ಆಗುತ್ತಿಲ್ಲ ಅಂತ ಗೋಳಾಡುತ್ತಿದ್ದರು. ನಾನು ಸತ್ಯ ಹರಿಶ್ಚಂದ್ರ, ಸಿದ್ದ ಪುರುಷ ಅಂತಾ ಹೇಳುವ ಸಿಎಂ ಐಟಿ ದಾಳಿ ಬಗ್ಗೆ ತನಿಖೆ ಮಾಡಿಸಲಿ, ಇವರು ತನಿಖೆ ಮಾಡಿದರೆ ಏನಾಗುತ್ತದೆ ಅಂತಾ ನಮಗೂ ಗೊತ್ತು” ಎಂದರು.

ರಾಜ್ಯಪಾಲರಿಗೆ ಕೃಷಿ‌ ಇಲಾಖೆ ಅಧಿಕಾರಿಗಳು ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ”ಈ ಬಗ್ಗೆ ತನಿಖೆ ಮಾಡಿಸಿದ್ದೀರಲ್ಲ ಏನಾಯಿತು?ನಾಗಮಂಗಲ ಬಸ್ ಕಂಡಕ್ಟರ್ ವಿಷ ಕುಡಿದ ಪ್ರಕರಣ, ಎಲ್ಲೆಲ್ಲಿ ಯಾರು ಯಾರನ್ನ ಅಡ್ಜೆಸ್ಟ್ ಮಾಡಿಕೊಳ್ಳುದ್ದೀರಾ ಅನ್ನೋದು ನನಗೂ ಗೊತ್ತಿದೆ.ಐಟಿ ದಾಳಿ‌ ಮಾಡುವಾಗ ನಿಮ್ಮ ರಾಜ್ಯದ ಅಧಿಕಾರಿಗಳು ಇರುವುದಿಲ್ಲವೇ? ಅವರಿಗೂ ಮಾಹಿತಿ ಇರುತ್ತದೆ. ಅವರಿಂದಲಾದರೂ ಮಾಹಿತಿ ಪಡೆದು ಸತ್ಯಾಂಶ ಹೇಳಿ. ಐಟಿ ದಾಳಿಯಲ್ಲಿ ಸಿಕ್ಕ ಹಣ ಜನರ ತೆರಿಗೆ ಹಣ. ಇದು ಯಾವುದೋ ಗುತ್ತಿಗೆದಾರ ಅಥವಾ ಬೇರೆ ವ್ಯಕ್ತಿಗೆ ಸೇರಿದ್ದಲ್ಲ.ಹಣ ಯಾರಿಗೆ ಸೇರಿದ್ದೆಂದು ಸರಿಯಾಗಿ ತನಿಖೆಯಾದರೆ ಇವರ ಬಣ್ಣ ಬಯಲಾಗುತ್ತದೆ” ಎಂದರು.

Advertisement

ಪಂಡಿತ್ ರಾಜೀವ್ ತಾರಾನಾಥರ ಬಳಿ 3 ಲಕ್ಪ ರೂ. ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ”ಈ ಪ್ರಕರಣದಲ್ಲಿ ಅಧಿಕಾರಿ ಲಂಚ ಕೇಳೋಕೆ ಕಾರಣ ಯಾರು? ಆ ಅಧಿಕಾರಿ ಭಾರೀ ಲಂಚ ಕೊಟ್ಟು ಇಲ್ಲಿಗೆ ಬಂದಿದ್ದಾನೆ. ಅದಕ್ಕೆ ಲಂಚ ಕೇಳಿದ್ದಾನೆ. ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಹಂತ ತಲುಪಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ” ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next