Advertisement
ಅಂದು 1992 ಫೆಬ್ರವರಿ 11, “ಚೈತ್ರದ ಪ್ರೇಮಾಂಜಲಿ’. ಇಂದು 2017 ಫೆಬ್ರವರಿ “ಮನಸು ಮಲ್ಲಿಗೆ’ ಮತ್ತು “ಪಂಟ’!ಈ ಚಿತ್ರಗಳ ಶೀರ್ಷಿಕೆ ಓದಿದ ಮೇಲೆ ಇದು ನಿರ್ದೇಶಕ ಎಸ್. ನಾರಾಯಣ್ ಕುರಿತ ಸುದ್ದಿ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇಷ್ಟಕ್ಕೂ ಇಲ್ಲಿ ನಾರಾಯಣ್ ಬಗ್ಗೆ ಹೇಳ್ಳೋಕೆ ಬಲವಾದ ಕಾರಣವೂ ಇದೆ. ಕನ್ನಡ ಚಿತ್ರರಂಗದಲ್ಲಿ ನಾರಾಯಣ್ ಗುರುತಿಸಿಕೊಂಡಿರುವ ನಿರ್ದೇಶಕರು. ಸೋಲು, ಗೆಲುವು ಈ ಎರಡನ್ನೂ ಕಂಡವರು. ಸಿನಿಮಾ ರಂಗಕ್ಕೆ ಒಂದಷ್ಟು ಯಶಸ್ಸಿನ ಚಿತ್ರಗಳನ್ನು ಕೊಟ್ಟವರು. ಅನೇಕ ಯುವ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದವರು. ಇಂಥಾ ನಾರಾಯಣ್ ಕನ್ನಡ ಸಿನಿಮಾ ಲೋಕಕ್ಕೆ ಬಂದು ಇಪ್ಪತ್ತೈದು ವರ್ಷಗಳು ಪೂರ್ಣಗೊಂಡಿವೆ. ಈ ಇಪ್ಪತ್ತೈದು ವರ್ಷಗಳಲ್ಲಿ ನಾರಾಯಣ್ ಕನ್ನಡದ ಬಹುತೇಕ ಸ್ಟಾರ್ ನಟರು ಸೇರಿದಂತೆ ಅನೇಕ ಹೊಸ ಪ್ರತಿಭೆಗಳೊಂದಿಗೆ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿಯೂ ಛಾಪು ಮೂಡಿಸಿದ್ದಾರೆ. ಈ ಹೊತ್ತಲ್ಲಿ ಕಾಲು ಸೆಂಚುರಿ ಬಾರಿಸಿರುವ ನಾರಾಯಣ್, 25 ವರ್ಷಗಳಲ್ಲಿ ಬಿಡಿಸಿರುವ ಬಣ್ಣದ ಕಥೆಗಳಿಗೆ ಲೆಕ್ಕವೇ ಇಲ್ಲ. ಅಂತಹ ಕಲರ್‌ಫುಲ್, ಮೀನಿಂಗ್‌ಫುಲ್ ಸಿನಿಜರ್ನಿಯಲ್ಲಾದ ಅನುಭವಗಳನ್ನು ಅವರದೇ ಮಾತುಗಳಲ್ಲಿ ಕೇಳುತ್ತಾ ಹೋಗಿ…
Related Articles
Advertisement
ಜಗ್ಗೇಶ್, ಕುಮಾರ್‌ಗೊàವಿಂದ್ ಹೀಗೆ ಒಂದಷ್ಟು ಹೀರೋಗಳ ಚಿತ್ರ ಮಾಡಿದೆ. ಒಂದು ಲೆವೆಲ್‌ಗೆ ಅವು ಸುದ್ದಿಯಾದರೂ ಆ ನಂತರ ಮಾಡಿದ ನಾಲ್ಕು ಸಿನಿಮಾಗಳು ಸೋಲು ಕಂಡವು. ಆಗ ನನ್ನದೇ ನಿರ್ಮಾಣ, ನಿರ್ದೇಶನದಲ್ಲಿ “ಭಾಮ ಸತ್ಯ ಭಾಮ’ ಸಿನಿಮಾ ಮಾಡಿ ಆ ಮೂಲಕ ನಟನೂ ಆದೆ. ಅಲ್ಲಿಂದ ಪುನಃ ನನ್ನ ಸಿನಿ ಜರ್ನಿ ಫಾಸ್ಟ್ ಆಗುತ್ತಾ ಹೋಯ್ತು.
18 ಸಿನಿಮಾ ಕೈ ತಪ್ಪಿದ್ದವು…“ಭಾಮ ಸತ್ಯಭಾಮ’ ಬಳಿಕ ಯಶಸ್ಸು ಸುಳಿದಾಡುತ್ತಿತ್ತು. ಅದೇ ವರ್ಷ ವಿಷ್ಣುವರ್ಧನ್ ಅಭಿನಯದ “ವೀರಪ್ಪ ನಾಯ್ಕ’ ನನಗೆ ದೊಡ್ಡ ಹೆಸರು ತಂದುಕೊಟ್ಟಂತಹ ಮತ್ತೂಂದು ಸಿನಿಮಾ. ನಂತರದ ದಿನಗಳಲ್ಲಿ “ಸೂರ್ಯವಂಶ’, ಡಾ.ರಾಜ್‌ಕುಮಾರ್ ಅವರ “ಶಬ್ಧವೇಧಿ’, ರವಿಚಂದ್ರನ್ ಅವರ “ರವಿಮಾಮ’, ಶಿವರಾಜ್‌ಕುಮಾರ್ ನಟನೆಯ “ಗಲಾಟೆ ಅಳಿಯಂದಿರು’ ಹೀಗೆ ಒಂದೇ ವರ್ಷ ಸತತ ಸಕ್ಸಸ್ ಸಿಕ್ಕಿತು. ಅದಾದ ಮೇಲೂ, “ಜಮೀನಾªರ’, “ನನ್ನವಳು ನನ್ನವಳು’ ಸಿನಿಮಾಗಳು ಹೆಸರು ತಂದುಕೊಟ್ಟವು. “ಮಹಾಭಾರತ’ ಚಿತ್ರದ ಮೂಲಕ ದರ್ಶನ್ ಅವರನ್ನು ಪರಿಚಯಿಸಿದೆ. ಆ ನಂತರದ ದಿನಗಳಲ್ಲಿ ಪುನೀತ್, ಸುದೀಪ್, “ದುನಿಯಾ’ ವಿಜಯ್, ಗಣೇಶ್ ಹೀಗೆ ಈ ಕಾಲದ ಎಲ್ಲಾ ಸ್ಟಾರ್ ನಟರ ಚಿತ್ರಗಳನ್ನೂ ನಿರ್ದೇಶಿಸಿದೆ. ಸಿನಿಮಾ ಅನ್ನೋದು ಸುಲಭದ ಮಾತಲ್ಲ. ಅಲ್ಲಿ ಎಷ್ಟೇ ಕಷ್ಟಪಟ್ಟು ಮಾಡಿದ್ದರೂ, ಪ್ರೇಕ್ಷಕ ಕೊಡುವ ಫಲಿತಾಂಶಕ್ಕೆ ತಲೆಬಾಗಲೇ ಬೇಕು. ನನಗೂ ಪ್ರೇಕ್ಷಕ ಜೈ ಎಂದಿದ್ದೂ ಇದೆ. ಸಿನಿಮಾ ತಿರಸ್ಕರಿಸಿದ್ದೂ ಇದೆ. ಈ ಮಧ್ಯೆ ಸಿನಿಮಾಗಳು ಬಂದರೂ, ನನ್ನ ಕೈ ತಪ್ಪಿ ಹೋಗುತ್ತಿದ್ದವು. ಹಾಗಂತ ಸುಮ್ಮನೆ ಕೂತಿರಲಿಲ್ಲ. ಸ್ಕ್ರಿಪ್ಟ್ ಮಾಡುತ್ತಿದ್ದೆ. ಹಲವು ಕಾರಣಗಳಿಂದ ನನ್ನಿಂದ ಕೈ ತಪ್ಪುತ್ತಿದ್ದವು. ಈ ಮೂರು ವರ್ಷದಲ್ಲಿ ನನ್ನಿಂದ 18 ಚಿತ್ರಗಳು ಕೈ ತಪ್ಪಿ ಹೋಗಿವೆ. ನಿಜಕ್ಕೂ ಅದು ನೋವನ್ನುಂಟು ಮಾಡಿತ್ತು. ಆಗ ಅದೇಕೋ ಸಿಕ್ಕಾಪಟ್ಟೆ ಬೇಸರದಲ್ಲಿದ್ದದ್ದೂ ಉಂಟು. ಅಜ್ಞಾತವಾಸ ಬಳಿಕ ಮನಸು ಮಲ್ಲಿಗೆ!
ಒಮ್ಮೆ ನನಗೆ ಇಂಡಸ್ಟ್ರಿಯೇ ಸಾಕೆನಿಸಿತ್ತು. ಯಾಕೆಂದರೆ, ನಾನು ಶಿಸ್ತಿನಿಂದ ಬೆಳೆದು ಬಂದವನು. ಶಿಸ್ತಿಗೆ ಭಂಗ ಬರದಂತೆ ಚಿತ್ರರಂಗ ನನ್ನನ್ನು ನೋಡಿಕೊಂಡಿದೆ. ಕಲಾವಿದರು, ನಿರ್ಮಾಪಕರು, ವಿತರಕರು ನನ್ನನ್ನು ಬೆಳೆಸಿದ್ದಾರೆ. ನನ್ನ ಶಿಸ್ತಿಗೆ ತೊಡಕು ಬಂದಾಗ, ಶೂಟಿಂಗ್ ಸ್ಪಾಟ್‌ನಲ್ಲಿ ಶಿಸ್ತು ಕಲುಷಿತಗೊಂಡಾಗ, ಅಂತಹ ವಾತಾವರಣದಲ್ಲಿ ಕೆಲಸ ಮಾಡುವುದು ಬೇಡ ಅಂತ ನಿರ್ಧರಿಸಿದ್ದುಂಟು. ಒಳ್ಳೆಯ ಸಿನಿಮಾ ಕೊಟ್ಟ ದಾಖಲೆ ಇರುವ ನನಗೆ, ರಾಜಿ ಮಾಡಿಕೊಂಡು ಕೆಲಸ ಮಾಡುವ ಅಗತ್ಯ ಇರಲಿಲ್ಲ. ಹಾಗಾಗಿ ಆ ನಿರ್ಧಾರ ಮಾಡಿದ್ದೆ. ಆದರೆ, ಕೆಲವರು ಭಾಲಿಶ ಹೇಳಿಕೆ ಅಂದಿದ್ದರು. ಅಂಬರೀಷ್ ಸೇರಿದಂತೆ ಹಲವು ನಾಯಕರು, ನಿರ್ಮಾಪಕರು ಪುನಃ ಮನವೊಲಿಸಿದರು. ಪುನಃ ಬಂದೆ. ಕೆಲಸ ಶುರುಮಾಡಿದೆ. ಆದರೆ, ಮತ್ತದೇ ಸಮಸ್ಯೆ ಎದುರಾಯ್ತು. ಸಿನಿಮಾಗಳು ಕೈ ತಪ್ಪಿ ಹೋದವು. ಮೂರು ವರ್ಷ ನಿಜವಾಗಿಯೂ ನಾನು ಅಜ್ಞಾತವಾಸದಲ್ಲಿದ್ದೆ. ಟ್ರೆಂಡ್ ಬದಲಾಗುತ್ತಿದೆ. ಸಿನಿಮಾ ನೋಡುವರ ಮನಸ್ಥಿತಿ, ಮಾಡುವವರ ಅಭಿರುಚಿಯೂ ಬದಲಾಗಿದೆ ಎಂದೆನಿಸಿತು. ಈಗಿನವರಿಗೆ ನಾನು ಒಗ್ಗಲ್ಲ ಅಂದುಕೊಂಡೆ. ಆ ಸಮಯದಲ್ಲೇ ಅಭಿಜಿತ್ “ಪಂಟ’ ಸಿನಿಮಾ ಕೊಟ್ಟರು. ಅದರ ಬೆನ್ನಲ್ಲೇ ರಾಕ್‌ಲೈನ್ ವೆಂಕಟೇಶ್ “ಮನಸು ಮಲ್ಲಿಗೆ’ ಸಿನಿಮಾ ಕೈಗಿಟ್ಟರು. ಈ ಎರಡು ಸಿನಿಮಾಗಳು ಮೂರು ವರ್ಷಗಳ ಬಳಿಕ ಸಿಕ್ಕಂತವು. ತುಂಬಾ ಉತ್ಸಾಹದಿಂದ ಮಾಡಿದ್ದೇನೆ. ನನ್ನ ಈ 25 ವರ್ಷಗಳ ಸಿನಿಮಾ ಜರ್ನಿಯಲ್ಲಿ ಎಲ್ಲವೂ ಸಿಕ್ಕಿದೆ. ಕೆಲವು ಕಳೆದಿದೆ. ಸಂತಸ, ನೋವು, ಬೇಸರ, ಆನಂದ ಹೀಗೆ ಎಲ್ಲವನ್ನೂ ನೋಡಿಕೊಂಡು ಬಂದವನಿಗೆ ಒಂದಷ್ಟು ವಷರ ಕೈ ಕಾಲು ಕಟ್ಟಿದ್ದಂತಾಗಿತ್ತು. ಈಗ ಸ್ಟಾರ್ ಇಲ್ಲದೆಯೇ ಹೊಸಬರ ಚಿತ್ರ ಮಾಡಿದ್ದೇನೆ. ಉತ್ಸಾಹದಲ್ಲೇ ಕೆಲ್ಸ ಮಾಡಿದ್ದೆನೆ. ಹಿಂದೆಲ್ಲಾ “ಪವಾಡ’ಗಳೇ ಆಗಿ ಹೋಗಿವೆ. ಈಗ 25 ವರ್ಷ ಮುಗಿಸಿ, ಈ ಚಿತ್ರಗಳ ಮೂಲಕ ಮತ್ತೂಂದು ಹೊಸ ಇನ್ನಿಂಗ್ಸ್ ಶುರುಮಾಡಿದ್ದೇನೆ. ಇಷ್ಟು ವರ್ಷಗಳ ಯಶಸ್ಸು, ಸೋಲು ಎಲ್ಲವನ್ನೂ ನೆನಪಿಸಿಕೊಂಡೇ ಹೊಸದಾಗಿ ಕೆಲಸ ಆರಂಭಿಸಿದ್ದೇನೆ. ಈ ಜರ್ನಿಯಲ್ಲಿ ಶತದಿನೋತ್ಸವ ಕಂಡ 16 ಸಿನಿಮಾಗಳನ್ನು ಕೊಟ್ಟಿದ್ದೇನೆ. 25 ವಾರ ಪ್ರದರ್ಶನ ಕಂಡ 9 ಚಿತ್ರಗಳನ್ನು ನೀಡಿದ್ದೇನೆ. 75 ವಾರ ಪ್ರದರ್ಶನ ಕಂಡ “ಚಂದ್ರ ಚಕೋರಿ’ಯಂತಹ ಚಿತ್ರ ಕೊಟ್ಟಿದ್ದೇನೆ. ಅನೇಕ ಕಲಾವಿದರನ್ನು ಪರಿಚಯಿಸಿರುವ ಹೆಮ್ಮೆ ಇದೆ. ಮುಂದಿನ ದಿನಗಳಲ್ಲೂ ನಾರಾಯಣ್, ಒಳ್ಳೆಯ ಸಿನಿಮಾಗಳನ್ನು ಕೊಡುತ್ತಾರೆ. ಇನ್ನಷ್ಟು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಡುತ್ತಾರೆ. ಮುರು ಹೊತ್ತು ಸಿನಿಮಾ ಧ್ಯಾನಿಸುವ ನನಗೆ ಬಣ್ಣದ ಕಲೆ ಹೊರತು ಬೇರೇನೂ ಇಲ್ಲ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ನಾರಾಯಣ್. – ವಿಜಯ್ ಭರಮಸಾಗರ
**
ಮಹೇಂದರ್ : ಪಿಯುಸಿಯಲ್ಲಿ ಪಿಸಿಎಂಬಿ ಸಬೆjಕ್ಟ್. ಸೈನ್ಸ್ ಆದರೂ ಹುಡುಗ ಓದುವುದರಲ್ಲಿ ಮುಂದೆ ಇದ್ದ. ಆದರೆ, ತಾನು ಪಿಯುಸಿಯಲ್ಲಿ ಪಾಸಾಗಿ ಬಿಟ್ಟರೆ ಮುಂದೆ ಕಾಲೇಜಿಗೆ ಕಳುಹಿಸುತ್ತಾರೆ. ಆಗ ತನ್ನ ಕನಸು ನನಸಾಗುವುದಿಲ್ಲ. ಹೇಗಾದರೂ ಮಾಡಿ ತನ್ನ ಕನಸಿನ ಕ್ಷೇತ್ರಕ್ಕೆ ಹೋಗಲೇಬೇಕು. ಅದಕ್ಕೇನು ಮಾಡಬೇಕೆಂದು ಆಲೋಚಿಸುತ್ತಿದ್ದ ಹುಡುಗನ ಮನಸ್ಸಿನಲ್ಲಿ ಬಂದ ಆಲೋಚನೆ ಪರೀಕ್ಷೆಗೆ ಗೈರು. ತನ್ನ ಇಷ್ಟದ ಎರಡು ಸಬೆjಕ್ಟ್ಗಳ ಪರೀಕ್ಷೆಗೇ ಚಕ್ಕರ್ ಹಾಕುವ ಮೂಲಕ “ಫೇಲ್ ಕ್ಯಾಂಡಿಡೇಟ್’ ಆದ ಆ ಹುಡುಗನ ಖುಷಿಗೆ ಪಾರವೇ ಇರುವುದಿಲ್ಲ. ಅಂದು ತನ್ನ ಕನಸಿಗಾಗಿ ಎಕ್ಸಾಂ, ಕಾಲೇಜಿಗೆ ಗುಡ್‌ಬೈ ಹೇಳಿದ ಆ ಹುಡುಗ ಬೇರಾರು ಅಲ್ಲ, ಎಸ್.ಮಹೇಂದರ್. ಸುಮಾರು 30 ವರ್ಷಗಳ ಹಿಂದೆ ಸಿನಿಮಾ ಕನಸು ಕಂಡು, ಕೊಳ್ಳೇಗಾಲದಿಂದ ಬೆಂಗಳೂರಿಗೆ ಬಂದ ಮಹೇಂದರ್ ತಮ್ಮದೇ ಶ್ರಮದಿಂದ ಮೇಲೆ ಬಂದವರು. ಮಹೇಂದರ್ ನಿರ್ದೇಶಕರಾಗಿ 25 ವರ್ಷಗಳಾಗಿದೆ. ಈ 25 ವರ್ಷಗಳಲ್ಲಿ ಮಹೇಂದರ್ 33 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಒಬ್ಬ ನಿರ್ದೇಶಕನ ಕೆರಿಯರ್‌ನಲ್ಲಿ 25 ವರ್ಷ ಅನ್ನೋದು ಮಹತ್ವದ ಘಟ್ಟ. ಈ 25 ವರ್ಷಗಳಲ್ಲಿ ಸಾಕಷ್ಟು ಏಳು-ಬೀಳುಗಳನ್ನು ನೋಡಬೇಕಾಗುತ್ತದೆ. ಆ ವಿಷಯದಲ್ಲಿ ಮಹೇಂದರ್ ಕೂಡಾ ಹೊರತಾಗಿಲ್ಲ. ತಮ್ಮ ಮೊದಲ ಚಿತ್ರ “ಪ್ರಣಯದ ಪಕ್ಷಿಗಳು’ ಸಿನಿಮಾದಿಂದ ಇಲ್ಲಿವರೆಗೆ ಮಹೇಂದರ್ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. “ಶೃಂಗಾರ ಕಾವ್ಯ’, “ಕರ್ಪೂರದ ಗೊಂಬೆ’, “ಸ್ನೇಹಲೋಕ’, “ಮೌನರಾಗ’ … ಹೀಗೆ ಅನೇಕ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದಾರೆ ಮಹೇಂದರ್. ಜೊತೆಜೊತೆಗೆ ನಿರೀಕ್ಷಿತ ಮಟ್ಟ ತಲುಪದ ಸಿನಿಮಾಗಳು ಕೂಡಾ ಇವೆ. ತಮ್ಮ 25 ವರ್ಷದ ಸಿನಿಜರ್ನಿ ಬಗ್ಗೆ ಮಹೇಂದರ್‌ಗೆ ಖುಷಿ ಇದೆ. “ಸಿನಿಮಾ ಅನ್ನೋದು ನನ್ನ ಕನಸು. ಚಿಕ್ಕಂದಿನಿಂದಲೇ ನನ್ನ ಆಕರ್ಷಿಸಿದ್ದು ಸಿನಿಮಾ. ಹೇಗಾದರೂ ಮಾಡಿ ಸಿನಿಮಾಕ್ಕೆ ಬರಬೇಕೆಂದು ಸಾಕಷ್ಟು ಪ್ರಯತ್ನಪಡುತ್ತಿದ್ದೆ. ಪಿಯುಸಿಯಲ್ಲಿ ಪಿಸಿಎಂಬಿ ಓದುತ್ತಿದ್ದ ನಾನು ಒಳ್ಳೆಯ ವಿದ್ಯಾಥಿಯೇ. ಆದರೆ ಪಾಸಾದರೆ ಮುಂದೆ ಕಾಲೇಜಿಗೆ ಕಳುಹಿಸುತ್ತಾರೆಂಬ ಕಾರಣಕ್ಕೆ ಎರಡು ಸಬೆjಕ್ಟ್ ಪರೀಕ್ಷೆ ಬರೆಯಲೇ ಇಲ್ಲ. ಕಾಲೇಜು ಹೇಗೋ ಡಿಸ್‌ಕಂಟಿನ್ಯೂ ಆಯಿತು, ಆದರೆ ಬೆಂಗಳೂರಿಗೆ ಬರೋದು ಹೇಗೆ? ಇಲ್ಲಿ ಯಾರೂ ಪರಿಚಯ ಬೇರೆ ಇಲ್ಲ. ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸೋದು ಎಂದು ನಿರ್ಧರಿಸಿಯೇ ಬಿಟ್ಟೆ. ಆಗ ನಮ್ಮೂರು ಕೊಳ್ಳೇಗಾಲದಿಂದ ಬೆಂಗಳೂರಿಗೆ ಒಂದು ಲಾರಿ ಹೋಗುತ್ತಿತ್ತು. ಆ ಲಾರಿ ಹತ್ತಿಕೊಂಡು ಬೆಂಗಳೂರಿಗೆ ಬಂದೆ. ಇಲ್ಲಿ ಅನೇಕರ ಜೊತೆ ಕೆಲಸ ಮಾಡಿ ಕೊನೆಗೆ ಸ್ವತಂತ್ರ ನಿರ್ದೇಶಕನಾದೆ’ ಎಂದು ತಮ್ಮ ಸಿನಿಜರ್ನಿ ಬಗ್ಗೆ ಹೇಳುತ್ತಾರೆ ಮಹೇಂದರ್. ಸಂಕ್ರಾಂತಿ ಹಬ್ಬ ಮಹೇಂದರ್ ಪಾಲಿಗೆ ಸಾಕಷ್ಟು ನೆನಪುಗಳನ್ನು ತರುವ ಹಬ್ಬ. ಚಿತ್ರರಂಗಕ್ಕೆ ಬಂದು 30 ವರ್ಷ. ನಿರ್ದೇಶಕನಾಗಿ 25 ವರ್ಷ. ಬೇರೆ ಬೇರೆ ನಾಯಕರ ಜೊತೆ ಸಿನಿಮಾ. ಸಾಕಷ್ಟು ಹಿಟ್ಸ್ … ಹೀಗೆ ಮಹೇಂದರ್ ಎಲ್ಲವನ್ನು ನೆನಪಿಸಿಕೊಳ್ಳುತ್ತಾರೆ. “ಇಷ್ಟು ವರ್ಷ ನಾನು ಚಿತ್ರರಂಗದಲ್ಲಿದ್ದೇನೆ, ಸಿನಿಮಾ ಮಾಡುತ್ತಿದ್ದೇನೆಂದರೆ ಅದಕ್ಕೆ ಕಾರಣ ನನ್ನನ್ನು ಪ್ರೋತ್ಸಾಹಿಸಿದ ಸ್ನೇಹಿತರು ಹಾಗೂ ಮಾಧ್ಯಮ ವರ್ಗ. ನನ್ನ ಜೀವನದಲ್ಲಿ ನಾನು ಸಾಕಷ್ಟು ಎತ್ತರದ ಕ್ಷಣಗಳನ್ನು ನೋಡಿದ್ದೇನೆ, ಜೊತೆಗೆ ಪಾತಾಳಕ್ಕೂ ಹೋಗಿದ್ದೇನೆ. ಗೆದ್ದಾಗ ಹಿಗ್ಗಿಲ್ಲ, ಸೋತಾಗ ಕುಗ್ಗಿಲ್ಲ. “ನಿಮ್ಮ ಜೀವನ ಹೇಗೆ ನಡೆಯುತ್ತಿದೆ …’ ಎಂದು ಕೆಲವು ಸ್ನೇಹಿತರು ಕೇಳುವಂತಹ ಪರಿಸ್ಥಿತಿಯನ್ನೂ ಎದುರಿಸಿದ್ದೇನೆ. ಅವೆಲ್ಲದರಿಂದ ಹೊರಗಡೆ ಬಂದಿದ್ದೇನೆ ಕೂಡಾ. ನನ್ನದೇ ಆದ ಒಂದು ಸಿದ್ಧಾಂತ, ತತ್ವವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದವನು. ನಿರ್ಮಾಪಕರಿಗೆ ಹೊರೆಯಾಗುವಂತೆ ಯಾವತ್ತೂ ಸಿನಿಮಾ ಮಾಡಿಲ್ಲ. ಇಷ್ಟು ವರ್ಷವಾದರೂ ಆರಂಭದಿಂದ ನನ್ನ ಜೊತೆಗಿದ್ದ ತಂಡವನ್ನು ನಾನು ಯಾವತ್ತೂ ಮರೆತಿಲ್ಲ. ನಾನು ಸಿನಿಮಾ ಮಾಡಬೇಕೆಂದು ಆಲೋಚಿಸಿದಾಗ ಇವತ್ತಿಗೂ ಮೊದಲು ಫೋನ್ ಮಾಡೋದು ಅದೇ ಗೆಳೆಯರಿಗೆ’ ಎನ್ನುತ್ತಾರೆ ಮಹೇಂದರ್. ಈ ಹಿಂದೆ ಬಿ.ಸಿ.ಪಾಟೀಲ್‌ಗೆ “ಕೌರವ’ ಸಿನಿಮಾ ಮಾಡಿದ ಮಹೇಂದರ್ ಈಗ ನರೇಶ್ ಎನ್ನುವವರಿಗೆ “ಒನ್ಸ್ ಮೋರ್ ಕೌರವ’ ಸಿನಿಮಾ ಮಾಡಿದ್ದಾರೆ. “ಅಂದು ಕೌರವ ಎನ್ನುವ ಟೈಟಲ್ ಕೊಟ್ಟಿದ್ದೂ ನಾನೇ, ಬಿ.ಸಿ.ಪಾಟೀಲ್ ಅವರಿಗೆ ಉದ್ದ ಮೀಸೆ ಬಿಡಿಸಿದ್ದೂ ನಾನೇ. ಈಗ “ಒನ್ಸ್ ಮೋರ್ ಕೌರವ’ ಟೈಟಲ್ ಕೂಡಾ ನಂದೇ, ನರೇಶ್ ಅವರಿಗೂ ಉದ್ದ ಮೀಸೆ ಬಿಡಿಸಿದ್ದೂ ನಾನೇ. ಹಳ್ಳಿಯಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ. – ರವಿಪ್ರಕಾಶ್ ರೈ