ಲಕ್ಷ್ಮೇಶ್ವರ: ವಿದ್ಯೆಗೆ ಬಡತನ-ಸಿರಿತನ, ಮೇಲು-ಕೀಳೆಂಬ ಭೇದಭಾವವಿಲ್ಲ ಎಂಬುದಕ್ಕೆ ಇಲ್ಲಿನ ಇ-ಸ್ಟಾಂಪ್ ಸರ್ವಿಸ್ ಮೂಲಕ ಜೀವನ ಸಾಗಿಸುವ ಬಡ ಕುಟುಂಬದ ಆವಂತಿಕಾ ಪದ್ಮರಾಜ ಹೊಂಬಣ್ಣ ಉದಾಹರಣೆಯಾಗಿದ್ದು, ಈಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 99.04 ಅಂಕ ಪಡೆದು ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದಿದ್ದಾಳೆ.
ಜಿಲ್ಲೆಯ ಶೇಕಡಾವಾರು ಫಲಿತಾಂಶದಲ್ಲಿ ಗಣನೀಯ ಕುಸಿತ ಕಂಡಿದ್ದರೂ ಲಕ್ಷ್ಮೇಶ್ವರದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಆವಂತಿಕಾ ಕನ್ನಡದಲ್ಲಿ 125, ಹಿಂದಿ-100, ಗಣಿತ-99, ಇಂಗ್ಲಿಷ್-99, ಸಮಾಜ ವಿಜ್ಞಾನ-98, ವಿಜ್ಞಾನ-98 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಇಬ್ಬರೂ ಹೆಣ್ಣು ಮಕ್ಕಳಲ್ಲಿ ಆವಂತಿಕಾ ದೊಡ್ಡವಳು. ಇವಳ ತಂದೆ ಬಾಂಡ್ ಪೇಪರ್ ಮಾರಾಟ ಮಾಡಿ ಬರುವ ಕಮಿಷನ್ ಹಣವೇ ಬದುಕಿಗೆ ಆಧಾರ. ತಾಯಿ ಗೃಹಿಣಿ, ತಂಗಿ ಸೇವಂತಿಕಾ 8ನೇ ತರಗತಿ ಓದುತ್ತಿದ್ದಾಳೆ. ಸ್ವಂತ ಮನೆ, ಜಮೀನು ಇಲ್ಲದ ಬಡ ಕುಟುಂಬ ಇವರದ್ದು. ಚಿಕ್ಕದಾದ ಬಾಡಿಗೆ ಮನೆಯಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ತಂದೆಗೆ ಕಿಡ್ನಿ ತೊಂದರೆಯ ಚಿಕಿತ್ಸೆಗಾಗಿ ಸಾಕಷ್ಟು ಹಣ ಸುರಿದ್ದಿದ್ದು, ಕುಟುಂಬ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೂ ಇವಳ ಶೈಕ್ಷಣಿಕ ಸಾಧನೆ ಮೆಚ್ಚುವಂತದ್ದಾಗಿದೆ.
ಇವಳು ಕಳೆದ ವರ್ಷ ರಾಜ್ಯಮಟ್ಟದ ಪ್ರೌಢಶಾಲೆಗಳ ಪಠ್ಯೇತರ ಚಟುವಟಕೆಗಳ ಸ ರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲಾ ಧಿಕಾರಿಗಳು, ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ವಿಶೇಷ ಗೌರವ ಸನ್ಮಾನ ಮಾಡಿದ್ದರು.
ಈ ಕುರಿತು ಆವಂತಿಕಾ ಪತ್ರಿಕೆಯೊಂದಿಗೆ ಮಾತನಾಡಿ, ನಿತ್ಯ ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನು ಶ್ರದ್ಧೆಯಿಂದ ಕೇಳುವ ಜೊತೆಗೆ ನೋಟ್ಸ್ ಮಾಡಿಕೊಂಡು ಶಾಲಾವಧಿಯ ಬಳಿಕ ಅಂದಿನ ಪಾಠಗಳನ್ನು ಮತ್ತೂಮ್ಮೆ ಓದುತ್ತಿದ್ದೆ. ಕೇವಲ ಅಂಕಗಳಿಕೆ ಉದ್ದೇಶದಿಂದ ಓದದೇ ವಿಷಯವನ್ನು ಅರ್ಥೈಸಿಕೊಂಡು ಓದುವುದು ನನ್ನ ಹವ್ಯಾಸ. ದಿನಾಲೂ 4 ಗಂಟೆ ಓದುತ್ತಿದ್ದೆ. ಉತ್ತಮ ನಿದ್ದೆ, ಸಮತೋಲನ ಆಹಾರ ನನ್ನ ದಿನಚರಿಯಾಗಿದ್ದು, ತಂದೆ-ತಾಯಿ ಮತ್ತು ಶಿಕ್ಷಕ ಸಹಕಾರ ಸಾಧನೆಗೆ ಪ್ರೇರಣೆಯಾಗಿದೆ. ಕುಟುಂಬದ ಬಡತನ, ತಂದೆಯ ಅನಾರೋಗ್ಯ ನಾನು ಉತ್ತಮ ಸಾಧನೆ ಮಾಡಬೇಕು ಎಂಬುದಕ್ಕೆ ಕಾರಣವಾಗಿದ್ದು, ಮುಂದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುವ ಜೊತೆಗೆ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ ಉತ್ತಮ ಆಡಳಿತಾ ಧಿಕಾರಿ ಆಗುವ ಆಸೆ ವ್ಯಕ್ತಪಡಿಸಿದ್ದಾಳೆ.
ಮಗಳ ಉತ್ತಮ ಸಾಧನೆ ನಮಗೆ ಅತ್ಯಂತ ಆನಂದ ತಂದಿದೆ. ಗಂಡು ಮಕ್ಕಳಿಲ್ಲವೆಂಬ ಕೊರಗು ದೂರಮಾಡಿರುವ ಹೆಣ್ಣುಮಕ್ಕಳಿಬ್ಬರೂ ನಮ್ಮ ಕುಟುಂಬದ ಬಡತನ, ಸಂಕಷ್ಟ ಮಾಯವಾಗಿಸಿದ್ದಾರೆ. ಮಕ್ಕಳೇ ನಮಗೆ ಆಸ್ತಿಯಾಗಿದ್ದಾರೆ. ಅವಳ ಇಚ್ಚೆಯಂತೆ ಹಿರಿಯರ, ಶಿಕ್ಷಕರ ಸಲಹೆ ಪಡೆದು ಉನ್ನತ ಶಿಕ್ಷಣ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಂದೆ ಪದ್ಮರಾಜ್, ತಾಯಿ ಯಶೋಧಾ ಹೇಳಿದರು.
ನಿತ್ಯ ಶಾಲೆಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನು ಶ್ರದ್ಧೆಯಿಂದ ಕೇಳುವ ಜೊತೆಗೆ ನೋಟ್ಸ್ ಮಾಡಿಕೊಂಡು ಶಾಲಾವಧಿಯ ಬಳಿಕ ಅಂದಿನ ಪಾಠಗಳನ್ನು ಮತ್ತೂಮ್ಮೆ ಓದುತ್ತಿದ್ದೆ. ಕೇವಲ ಅಂಕಗಳಿಕೆ ಉದ್ದೇಶದಿಂದ ಓದದೇ ವಿಷಯವನ್ನು ಅರ್ಥೈಸಿಕೊಂಡು ಓದುವುದು ನನ್ನ ಹವ್ಯಾಸ.
ಆವಂತಿಕಾ