ಕೊಪ್ಪಳ: ಕೊಪ್ಪಳ ತಾಲೂಕಿನ ಬೆಟಗೇರಿ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಹಿತ ಕಾಪಾಡುವ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರಿಗೆ ಅಭಿನಂದನಾ ಪತ್ರ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ತಾಲೂಕಿನ ಹನುಕುಂಟಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಸಕ್ತ ವರ್ಷ 10ನೇ ತರಗತಿ ಅಭ್ಯಾಸ ಮಾಡಿ ಪರೀಕ್ಷೆ ಬರೆಯುತ್ತಿರುವ ಪ್ರಿಯಾಂಕ ಎನ್ನುವ ವಿದ್ಯಾರ್ಥಿನಿಯು, ಕೋವಿಡ್-19 ಹಾವಳಿಯಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ನಮಗೆ ಆತಂಕ, ದುಗುಡ ಮನೆ ಮಾಡಿತ್ತು. ಆದರೆ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ನಮಗೆಲ್ಲ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ವಿತರಿಸಿ, ಸ್ಯಾನಿಟೈಜರ್ ಹಾಕಿ ಸ್ವಚ್ಛತೆಯಿಂದ ಇರಬೇಕು ಎನ್ನುವ ಜಾಗೃತಿ ಮೂಡಿಸಿದರಲ್ಲದೇ, ಸಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ನಮಗೆ ಮಾಹಿತಿ ನೀಡಿದರು. ನಮ್ಮೆಲ್ಲ ಸಹೋದರ ಹಾಗೂ ಸಹೋದರಿಯರಿಗೂ ಜಾಗೃತಿ ಮೂಡಿಸಿದರು.
ನಮ್ಮ ಆರೋಗ್ಯದ ಹಿತ ಕಾಯುವಲ್ಲಿ ಕಾಳಜಿ ವಹಿಸಿರುವ ಶ್ರೀ ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರಿಗೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ನಾವು ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ. ನಿಮಗೆ ಒಳ್ಳೆಯದಾಗಲಿ ಎಂದು ಶಿಕ್ಷಣ ಸಚಿವರ ಕಾರ್ಯ ವೈಖರಿಗೆ ಅಭಿನಂದಿಸಿ ಪತ್ರ ಬರೆದಿದ್ದಾಳೆ. ಈ ವಿದ್ಯಾರ್ಥಿನಿಯ ಪತ್ರಕ್ಕೆ ಶಾಲೆಯ ಹಲವು ವಿದ್ಯಾರ್ಥಿಗಳು ಸಹಿ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ಇನ್ನೂ ಬೆಟಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಗಣಿತ ವಿಷಯ ಪರೀಕ್ಷೆಗೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು ಕೇಂದ್ರದ ಆವರಣದಲ್ಲಿನ ಆಶಾ ಕಾರ್ಯಕರ್ತೆಯರಿಗೆ, ಪೌರ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ, ಪೊಲೀಸರಿಗೆ, ಸ್ಕೌಟ್ ಗೈಡ್ಸ್ ತಂಡಕ್ಕೆ, ಆರೊಗ್ಯ ಸಿಬ್ಬಂದಿಗಳಿಗೆ ಗುಲಾಬಿ ಹೂವು ಕೊಡುವ ಮೂಲಕ ನಮ್ಮ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ನೀಡಿದ್ದಕ್ಕೆ ಅಭಿನಂದನೆ ಎಂದು ತಿಳಿಸಿ ಗುಲಾಬಿ ಹೂ ನೀಡಿದರು.