Advertisement

ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಗಳಿಗೆ ಏಕ ಮಂಡಳಿ

06:00 AM Feb 01, 2018 | Team Udayavani |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಒಂದೇ ಸೂರಿನಡಿ ನಡೆಸುವ ಪರೀಕ್ಷಾ ಏಕೀಕರಣ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

Advertisement

ಸದ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪಿಯುಸಿ ಪರೀಕ್ಷೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲಾಗುತ್ತಿದೆ. ಈ ಎರಡು ಪರೀಕ್ಷೆಯನ್ನು ಒಂದೇ ಮಂಡಳಿಯ ಮೂಲಕ ನಡೆಸುವ ಪ್ರಸ್ತಾವನೆ ಕಳೆದ ಅನೇಕ ವರ್ಷದಿಂದ ಸರ್ಕಾರದ ಮುಂದಿತ್ತು. ಈಗ ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ತೀರ್ಮಾನಿಸಿದೆ.

ಎರಡು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾದರಿಯಲ್ಲಿ ಪ್ರತ್ಯೇಕ ಮಂಡಳಿ ರಚನೆ ಮಾಡಿ ಅದಕ್ಕೆ ನಿರ್ದೇಶಕರನ್ನು ನೇಮಿಸಲಾಗುತ್ತದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಸುವುದು, ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಣೆ, ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ನಿರ್ವಹಣೆ, ಪರೀಕ್ಷಾ ಕೇಂದ್ರಗಳು ಮತ್ತು ಮೌಲ್ಯಮಾಪನ ಕೇಂದ್ರಗಳ ನವೀಕರಣ, ರಚನೆ ಮತ್ತು ನಿರ್ವಹಣೆ, ಫ‌ಲಿತಾಂಶ ಸಂಸ್ಕರಣೆ ಮತ್ತು ಪ್ರಕಟಣೆ, ಬಿಲ್‌ ಪಾವತಿ, ಮುದ್ರಣಕ್ಕಾಗಿ ದತ್ತಾಂಶ ನೀಡುವುದು ಮುಂತಾದ ಚಟುವಟಿಕೆಗಳನ್ನು ಈ ಮಂಡಳಿ ನಿರ್ವಹಿಸಲಿದೆ.

ಇದಲ್ಲದೆ ಪ್ರಶ್ನೆ ಪತ್ರಿಕೆಗಳ ಸಿದ್ಧತೆಯನ್ನೂ ಅತ್ಯಾಧುನಿಕ ರೀತಿಯಲ್ಲಿ ನಡೆಸಲು ಯೋಜನೆ ರೂಪಿಸಲಾಗುತ್ತಿದ್ದು, ಇ-ಕ್ವಶ್ಚನ್‌ ಬ್ಯಾಂಕ್‌ ಮೂಲಕ ಪ್ರಶ್ನೆ ಪತ್ರಿಕೆಗಳು ಯಾವುದೇ ಸಮಸ್ಯೆಯಿಲ್ಲದೆ ಮತ್ತು ಸೋರಿಕೆಯಾಗದೆ ಪರೀಕ್ಷಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲು ಮಂಡಳಿ ಕ್ರಮ ಕೈಗೊಳ್ಳಲಿದೆ.

ಸಚಿವ ಸಂಪುಟದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಪರೀಕ್ಷಾ ಏಕೀಕರಣ ನಿರ್ವಹಣಾ ವ್ಯವಸ್ಥೆ ಪ್ರಗತಿ-10 ಮತ್ತು 12ರ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಈ ವ್ಯವಸ್ಥೆ ರೂಪಿಸಲು ಐದು ವರ್ಷದ ಅವಧಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ 50.06 ಕೋಟಿ ರೂ. ಮತ್ತು ಪಿಯು ಮಂಡಳಿಗೆ 33.50 ಕೋಟಿ ವೆಚ್ಚವಾಗಲಿದೆ. ಈ ಮೊತ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದಿಂದಲೇ ಭರಿಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಹೊರೆಯಾಗುವುದಿಲ್ಲ ಎಂದರು.

Advertisement

ಸಂಪುಟ ಉಪಸಮಿತಿಗೆ ಶಾಲಾ ಶಿಕ್ಷಣ ನೀತಿ: ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆ, ಮೂಲಸೌಕರ್ಯ ಕುರಿತ ಮಾನದಂಡ ನಿಗದಿ, ಶುಲ್ಕ ಸಂಗ್ರಹ, ಬೋಧನೆ  ಮತ್ತು ಶಾಲೆಗಳ ಸುರಕ್ಷತೆ ಹಾಗೂ ಭದ್ರತೆ ಮುಂತಾದ ಅಂಶಗಳನ್ನು ಒಳಗೊಂಡ ಕರ್ನಾಟಕ ಶಾಲಾ ಶಿಕ್ಷಣ ನೀತಿ-2017ರ ಪ್ರಸ್ತಾವನೆ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ.

ಶಾಲಾ ಶಿಕ್ಷಣ ನೀತಿ ರೂಪಿಸುವ ಬಗ್ಗೆ 2017-18ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಅದರಂತೆ ರಾಜ್ಯದಲ್ಲಿ ವಿವಿಧ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಒಂದರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 1.15 ಕೋಟಿ ಮಕ್ಕಳ ಭವಿಷ್ಯ ರೂಪಿಸಲು ಕರ್ನಾಟಕ ಶಾಲಾ ಶಿಕ್ಷಣ ನೀತಿ-2017 ಕರಡು ಸಿದ್ಧಪಡಿಸಲಾಗಿದ್ದು, ಬುಧವಾರ ಸಚಿವ ಸಂಪುಟ ಸಭೆ ಮುಂದೆ ಬಂದಿತ್ತು. ಆದರೆ, ಅದರ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಯಿತು.  ಉಪಸಮಿತಿ ಪರಿಶೀಲಿಸಿದ ಬಳಿಕ ಆ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next