ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಗೂ ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಅಂಕಪಟ್ಟಿಯ ಮೂಲ ಪ್ರತಿ ಆನ್‌ಲೈನ್‌ನಲ್ಲೇ ಸಿಗಲಿದೆ. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳೇ ಅಂಕಪಟ್ಟಿ ಪಡೆಯಬಹುದಾದ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜಾರಿಗೆ ತಂದಿದೆ.
ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಗೆ (ಎಸ್‌ಎಟಿಎಸ್) ಅಳವಡಿಸಲಾಗಿದೆ. ಜತೆಗೆ, ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಪಡೆಯಲಾಗಿದೆ. ಕೇಂದ್ರ ಸರ್ಕಾರದ ಡಿಜಿಲಾಕರ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
2018-19ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ಗೆ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಮಂಡಳಿಯಿಂದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ಗೆ ಹಾಕಿದ ನಂತರ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಡಿಜಿಲಾಕರ್ ಸೌಲಭ್ಯವನ್ನು ಬಳಸಲು digilocker.gov.in ಕೇಂದ್ರ ಸರ್ಕಾರದ ವೆಬ್‌ಸೈಟ್ ಪರಿಶೀಲಿಸಬೇಕಾಗುತ್ತದೆ. ಲಾಗಿನ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆ ಅಳವಡಿಸಬೇಕು. ಮೊಬೈಲ್‌ಗೆ ಒನ್ ಟೈಮ್ ಪಾಸ್‌ವರ್ಡ್(ಒಟಿಪಿ) ಬರುತ್ತದೆ.
ನಂತರ, ವಿದ್ಯಾರ್ಥಿ ತನ್ನ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಡಿಜಿಲಾಕರ್‌ನಿಂದ ಅಂಕಪಟ್ಟಿ ಪಡೆಯಬಹುದು. ಆಧಾರ್ ಸಂಖ್ಯೆಯನ್ನು ಡಿಜಿಲಾಕರ್‌ನೊಂದಿಗೆ ಜೋಡಿಸಿದ ನಂತರವಷ್ಟೇ ಅಂಕಪಟ್ಟಿ ಸಿಗಲಿದೆ. ಒಬ್ಬರ ಅಂಕಪಟ್ಟಿಯನ್ನು ಇನ್ನೊಬ್ಬರು ಡೌನ್‌ಲೋಡ್ ಮಾಡಿಕೊಳ್ಳಬಾರದು ಹಾಗೂ ನಕಲು ಮಾಡಲು ಸಾಧ್ಯವಾಗದಂತೆ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ವಿದ್ಯಾರ್ಥಿ ತನ್ನ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಹಾಕಿದರೆ ಮಾತ್ರ ಡಿಜಿಲಾಕರ್‌ನಲ್ಲಿರುವ ಅಂಕಪಟ್ಟಿ ಸಿಗುತ್ತದೆ. ಎಲ್ಲಿ ಬೇಕಾದರೂ ಪ್ರಿಂಟ್ ಔಟ್ ತೆಗೆಯಬಹುದು. ಮೂಲ ಅಂಕಪಟ್ಟಿ ಹಾಗೂ ಆನ್‌ಲೈನ್ ಅಂಕಪಟ್ಟಿಗಳ ಪರಿಶೀಲನೆಗೂ ಅವಕಾಶ ಇದೆ. ಅಂಕಪಟ್ಟಿ ಪರಿಶೀಲನೆ ಮತ್ತು ದ್ವಿಪ್ರತಿ ಪಡೆಯಲು ವಿದ್ಯಾರ್ಥಿಗಳು ಇಲಾಖೆಗೆ ಅಲೆದಾಡಬೇಕಾದ ಅವಶ್ಯಕತೆಯೂ ಇರುವುದಿಲ್ಲ.