Advertisement

ಎಸ್ಸೆಸ್ಸೆಲ್ಸಿ ಫ‌ಲಿತಾಂಶ: ಜಿಲ್ಲೆ 31ರಿಂದ 20ನೇ ಸ್ಥಾನಕ್ಕೆ ಜಿಗಿತ

09:20 PM Apr 30, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಬಹು ನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫ‌ಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆ ಬರೋಬ್ಬರಿ ಶೇ.79.69 ರಷ್ಟು ಫ‌ಲಿತಾಂಶ ದಾಖಲುಗೊಂಡು ಚಿಕ್ಕಬಳ್ಳಾಪುರ ರಾಜ್ಯ ಕ್ರಮಾಂಕದಲ್ಲಿ 31ನೇ ಸ್ಥಾನದಿಂದ 20ನೇ ಸ್ಥಾನಕ್ಕೆ ಜಿಗಿದಿರುವುದು ಜಿಲ್ಲೆಗೆ ತುಸು ಸಮಾಧಾನ ತಂದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಫ‌ಲಿತಾಂಶದಲ್ಲಿ ಶೇ.11.67 ರಷ್ಟು ಹೆಚ್ಚಳವಾಗಿದೆ.

Advertisement

13,773 ವಿದ್ಯಾರ್ಥಿಗಳು ಉತ್ತೀರ್ಣ: ಜಿಲ್ಲೆಯ ಆರು ತಾಲೂಕುಗಳಲ್ಲಿನ ಒಟ್ಟು 56 ಕೇಂದ್ರಗಳಲ್ಲಿ ಮಾ.21 ರಿಂದ ಏ.4 ರ ವರೆಗೂ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬರೋಬ್ಬರಿ 14,667 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 13,773 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಗೆ ಶೇ.79.69 ರಷ್ಟು ಫ‌ಲಿತಾಂಶ ತಂದುಕೊಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

31ರಿಂದ 20ನೇ ಸ್ಥಾನಕ್ಕೆ ಜಿಗಿತ: ಕಳೆದ ಬಾರಿ ಜಿಲ್ಲೆಯು ಶೇ.68/02 ರಷ್ಟು ಫ‌ಲಿತಾಂಶ ಪಡೆದು ರಾಜ್ಯ ಕ್ರಮಾಂಕದಲ್ಲಿ 28ನೇ ಸ್ಥಾನದಿಂದ 31ನೇ ಸ್ಥಾನಕ್ಕೆ ಕುಸಿತಗೊಂಡಿತ್ತು. ಇದರಿಂದ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ಹಾಗೂ ಜಿಲ್ಲೆಯ ಶಿಕ್ಷಣದ ಗುಣಮಟ್ಟ ಕುಸಿದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ವರ್ಷ ಜಿಲ್ಲಾಡಳಿತದ ಕಾಳಜಿ, ವಿಶೇಷವಾಗಿ ಜಿಪಂ ಅಧ್ಯಕ್ಷರಾಗಿರುವ ಎಚ್‌.ವಿ.ಮಂಜುನಾಥರವರ ವಿಶೇಷ ಆಸಕ್ತಿಯಿಂದ ಜಿಲ್ಲೆಯಲ್ಲಿ ವರ್ಷಪೂರ್ತಿ ನಡೆಸಿದ ವಿಭಿನ್ನ ಕಲಿಕಾ ಕಾರ್ಯಕ್ರಮಗಳ ಫ‌ಲಪ್ರದವಾಗಿ ಜಿಲ್ಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಮಾಧಾನ ತರುವ ಫ‌ಲಿತಾಂಶ ಬಂದಿದೆ.

ತಾಲೂಕುವಾರು ಫ‌ಲಿತಾಂಶ ವಿವರ: ಜಿಲ್ಲೆಯ ಆರು ತಾಲೂಕುಗಳ ಪೈಕಿ ಬಾಗೇಪಲ್ಲಿ ತಾಲೂಕಿನಲ್ಲಿ ಒಟ್ಟು ಪರೀಕ್ಷೆ ಬರೆದಿದ್ದ 2,528 ವಿದ್ಯಾರ್ಥಿಗಳ ಪೈಕಿ 1.712 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ ಶೇ |67.72 ರಷ್ಟು ಫ‌ಲಿತಾಂಶ ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು ಪರೀಕ್ಷೆ ಬರೆದಿದ್ದ 3,238 ವಿದ್ಯಾರ್ಥಿಗಳ ಪೈಕಿ ಕೇವಲ 2,103 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.64.95 ರಷ್ಟು ಸಾಧನೆ ಮಾಡಿದ್ದಾರೆ.

Advertisement

ಚಿಂತಾಮಣಿ ತಾಲೂಕಿನಲ್ಲಿ ಈ ಬಾರಿ ಪರೀಕ್ಷೆ ಬರೆದಿದ್ದ ಒಟ್ಟು 4,040 ವಿದ್ಯಾರ್ಥಿಗಳ ಪೈಕಿ 3,252 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.80.05 ರಷ್ಟು ಫ‌ಲಿತಾಂಶ ದಾಖಲಿಸಿದ್ದಾರೆ.
ಗೌರಿಬಿದನೂರು ತಾಲೂಕಿನಲ್ಲಿ ಒಟ್ಟು 4,113 ವಿದ್ಯಾರ್ಥಿಗಳ ಪೈಕಿ 2,789 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.67.81 ರಷ್ಟು ಫ‌ಲಿತಾಂಶ ಬಂದಿದೆ. ಗುಡಿಬಂಡೆ ತಾಲೂಕಿನಲ್ಲಿ ಪರೀಕ್ಷೆ ಬರೆದಿದ್ದ ಒಟ್ಟು 712 ವಿದ್ಯಾರ್ಥಿಗಳ ಪೈಕಿ 582 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.80.72 ರಷ್ಟು ಫ‌ಲಿತಾಂಶ ಬಂದಿದೆ.

ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 2,547 ವಿದ್ಯಾರ್ಥಿಗಳು ಪರೀಕ್ಷೆ ಬರೆದು 2,166 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಬರೋಬ್ಬರಿ 85.04 ರಷ್ಟು ಫ‌ಲಿತಾಂಶ ಪಡೆದುಕೊಂಡಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ ಉದಯವಾಣಿಗೆ ತಿಳಿಸಿದರು.

43 ಶಾಲೆಗಳಿಗೆ ಶೇ.100 ರಷ್ಟು ಫ‌ಲಿತಾಂಶ: ಈ ಬಾರಿ ಜಿಲ್ಲೆಯಲ್ಲಿ ಬರೋಬ್ಬರಿ 43 ಶಾಲೆಗಳು ಮಾತ್ರ ಶೇ.100 ರಷ್ಟು ಫ‌ಲಿತಾಂಶ ಪಡೆದುಕೊಂಡಿವೆ. ಆ ಪೈಕಿ 8 ಸರ್ಕಾರಿ ಪ್ರೌಢ ಶಾಲೆಗಳಿಗೆ ಹಾಗೂ 1 ಅನುದಾನಿತ ಪ್ರೌಢ ಹಾಗೂ 34 ಖಾಸಗಿ ಪ್ರೌಢ ಶಾಲೆಗಳಿಗೆ ಶೇ.100 ರಷ್ಟು ಫ‌ಲಿತಾಂಶ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಈ ವರ್ಷ ಯಾವುದೇ ಶಾಲೆ ಶೂನ್ಯ ಫ‌ಲಿತಾಂಶ ಪಡೆಯದಿರುವುದು ಸಮಾಧಾನದ ಸಂಗತಿಯಾಗಿದೆ.

ಸರ್ಕಾರಿ ಶಾಲೆಗಳ ಪೈಕಿ ಚಿಂತಾಮಣಿಯ ಆನೂರು, ಕಾಗತಿ ಸರ್ಕಾರಿ ಪ್ರೌಢ ಶಾಲೆ, ಚಿಕ್ಕಬಳ್ಳಾಪುರದ ಕುಪ್ಪಳ್ಳಿ ಸರ್ಕಾರಿ ಪ್ರೌಢ ಶಾಲೆ, ಗೌರಿಬಿದನೂರು ತಾಲೂಕು ನಕ್ಕಹಳ್ಳಿ ಸರ್ಕಾರಿ ಪ್ರೌಢ ಶಾಲೆ, ಶಿಡ್ಲಘಟ್ಟ ತಾಲೂಕಿನ ಗೊರ‌್ಲಗೊಮ್ಮನಹಳ್ಳಿ ಸರ್ಕಾರಿ ಪ್ರೌಢ ಶಾಲೆ, ಗುಡಿಬಂಡೆ ತಾಲೂಕಿನ ಕೊಂಡರೆಡ್ಡಿಹಳ್ಳಿ, ಶಿಡ್ಲಘಟ್ಟ ತಾಲೂಕಿನ ಪುರಬ್ರಾಯನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಈ ಬಾರಿ ಶೇ.100 ರಷ್ಟು ಫ‌ಲಿತಾಂಶ ದಾಖಲಿಸಿ ಗಮನ ಸೆಳೆದಿವೆ.

ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಫ‌ಲಿತಾಂಶ: ಜಿಲ್ಲೆಯಲ್ಲಿ ಕನ್ನಡ ಮಾಧ್ಯಮಕ್ಕಿಂತ ಈ ಬಾರಿ ಆಂಗ್ಲ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೆಚ್ಚಾಗಿರುವುದು ಕಂಡು ಬಂದಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಒಟ್ಟು 7,515 ವಿದ್ಯಾರ್ಥಿಗಳ ಪೈಕಿ 5,407 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ ಶೇ.74.09 ರಷ್ಟು ಫ‌ಲಿತಾಂಶ ಪಡೆದಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಒಟ್ಟು 7,114 ವಿದ್ಯಾರ್ಥಿಗಳ ಪೈಕಿ 6.350 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.89.26 ರಷ್ಟು ಫ‌ಲಿತಾಂಶ ಪಡೆದಿದೆ. ಇನ್ನೂ ಉರ್ದು ವಿಭಾಗದಲ್ಲಿ ಪರೀಕ್ಷೆ ಎದುರಿಸಿದ್ದ ಒಟ್ಟು 38 ವಿದ್ಯಾರ್ಥಿಗಳ ಪೈಕಿ ಕೇವಲ 16 ಮಂದಿ ಉತ್ತೀರ್ಣರಾಗಿ ಶೇ.42.11 ರಷ್ಟು ಫ‌ಲಿತಾಂಶ ಪಡೆದುಕೊಂಡಿದೆ.

ಸರ್ಕಾರಿ ಶಾಲೆಗಳಿಗೆ ಶೇ.74 ರಷ್ಟು ಫ‌ಲಿತಾಂಶ: ಜಿಲ್ಲೆಯಲ್ಲಿ ಈ ಬಾರಿ ಒಟ್ಟು 121 ಸರ್ಕಾರಿ ಪ್ರೌಢ ಶಾಲೆಗಳಿಗೆ ಬರೋಬ್ಬರಿ 74.09 ರಷ್ಟು ಫ‌ಲಿತಾಂಶ ಬಂದಿದೆ. ಸರ್ಕಾರಿ ಶಾಲೆಗಳ ಒಟ್ಟು 6,968 ವಿದ್ಯಾರ್ಥಿಗಳ ಪೈಕಿ 5.219 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನೂ 36 ಅನುದಾನಿತ ಪ್ರೌಢ ಶಾಲೆಗಳಲ್ಲಿ ಪರೀಕ್ಷೆ ಬರೆದ ಒಟ್ಟು 2,486 ವಿದ್ಯಾರ್ಥಿಗಳ ಪೈಕಿ 1,825 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.73.41 ರಷ್ಟು ಫ‌ಲಿತಾಂಶ ಬಂದರೆ ಜಿಲ್ಲೆಯಲ್ಲಿರುವ ಬರೋಬ್ಬರಿ 126 ಖಾಸಗಿ ಪ್ರೌಢ ಶಾಲೆಗಳಲ್ಲಿ ಪರೀಕ್ಷೆ ಬರೆದ ಒಟ್ಟು 5,213 ವಿದ್ಯಾರ್ಥಿಗಳ ಪೈಕಿ 4,729 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.90.72 ರಷ್ಟು ದಾಖಲೆಯ ಫ‌ಲಿತಾಂಶ ಪಡೆದುಕೊಂಡಿವೆ.

ಬಾಲಕಿಯರೇ ಮೇಲುಗೈ: ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಈ ಬಾರಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಲಕರಿಗಿಂತ ಬಾಲಕಿಯರೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 7,246 ಮಂದಿ ಬಾಲಕರ ಪೈಕಿ ಕೇವಲ 5,665 ಮಂದಿ ಉತ್ತೀರ್ಣರಾಗಿ ಶೇ.78.18 ರಷ್ಟು ಫ‌ಲಿತಾಂಶ ದಾಖಲಿಸಿದರೆ ಪರೀಕ್ಷೆ ಬರೆದಿದ್ದ 7,421 ಬಾಲಕಿಯರ ಪೈಕಿ ಪರೀಕ್ಷೆಯಲ್ಲಿ 6,108 ಮಂದಿ ವಿದ್ಯಾರ್ಥಿರಾಗಿ ಶೇ.93.90 ರಷ್ಟು ದಾಖಲೆಯ ಫ‌ಲಿತಾಂಶ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಶಿಡ್ಲಘಟ್ಟ ಪ್ರಥಮ..ಚಿಕ್ಕಬಳ್ಳಾಪುರ ಕೊನೆ: ಜಿಲ್ಲೆಯ ಆರು ತಾಲೂಕುಗಳ ಪೈಕಿ ಶಿಡ್ಲಘಟ್ಟ ತಾಲೂಕು ಶೇ.85.04 ಫ‌ಲಿತಾಂಶ ಪಡೆದು ಜಿಲ್ಲೆಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರೆ, ಎರಡನೇ ಸ್ಥಾನವನ್ನು ಗುಡಿಬಂಡೆ ತಾಲೂಕು ಶೇ.80.72 ರಷ್ಟು ಫ‌ಲಿತಾಂಶ ಪಡೆದುಕೊಂಡು ಗಮನ ಸೆಳೆದಿದೆ. ಇನ್ನೂ ಮೂರನೇ ಸ್ಥಾನವನ್ನು ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ತಾಲೂಕು ಪಡೆದುಕೊಂಡಿದ್ದು ಶೇ.80.05 ರಷ್ಟು ಫ‌ಲಿತಾಂಶವನ್ನು ತನ್ನದಾಗಿಸಿಕೊಂಡಿದೆ.

ನಾಲ್ಕನೇ ಸ್ಥಾನವನ್ನು ಗೌರಿಬಿದನೂರು ತಾಲೂಕು ಪಡೆದುಕೊಂಡು ಶೇ.67.81 ರಷ್ಟು ಫ‌ಲಿತಾಂಶ ಪಡೆದಿದ್ದರೆ, ಬಾಗೇಪಲ್ಲಿ ತಾಲೂಕು 67.72 ರಷ್ಟು ಫ‌ಲಿತಾಂಶ ಪಡೆದು ಐದನೇ ಸ್ಥಾನದಲ್ಲಿದ್ದರೆ, ಜಿಲ್ಲಾ ಕೇಂದ್ರ ಹೊಂದಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಶೇ.64.95 ರಷ್ಟು ಫ‌ಲಿತಾಂಶ ಪಡೆದು ಕೊನೆ ಸ್ಥಾನದಲ್ಲಿದೆ.

ಜಿಲ್ಲೆಗೆ ಚೌಡರೆಡ್ಡಿ, ಕೀರ್ತನಾ, ಮುಬೀಷಿರಾ ಟಾಪರ್‌: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ ಚಿಕ್ಕಬಳ್ಳಾಪುರದ ಬಿಜಿಎಸ್‌ ಶಾಲೆಯ ಚೌಡರೆಡ್ಡಿ 625ಕ್ಕೆ 622 ಅಂಕ ಗಳಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ 125ಕ್ಕೆ 125 ಇಂಗ್ಲೀಷ್‌ನಲ್ಲಿ 100ಕ್ಕೆ 100, ಹಿಂದಿಯಲ್ಲಿ 98, ಗಣಿತದಲ್ಲಿ 100, ವಿಜ್ಞಾನದಲ್ಲಿ 99 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕ ಸೇರಿ ಒಟ್ಟು 622 ಅಂಕಗಳನ್ನು ಪಡೆದುಕೊಂಡು ಶೇ.99.52 ರಷ್ಟು ಫ‌ಲಿತಾಂಶ ಪಡೆದುಕೊಂಡಿದ್ದಾರೆ.

ಮಂಚನಬಲೆ ಬಿಜಿಎಸ್‌ ಶಾಲೆಯ ಕೀರ್ತನಾ 625ಕ್ಕೆ 621 ಅಂಕ ಹಾಗೂ ಮುಬೀಷಿರಾ 625ಕ್ಕೆ 621 ಅಂಕಗಳನ್ನು ಪಡೆದು ಜಿಲ್ಲೆಯಲ್ಲಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಯಂಗ್‌ ಇಂಡಿಯಾ ಶಾಲೆಯ ಉಷಾ 625ಕ್ಕೆ 620 ಅಂಕಗಳನ್ನು ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 14,667 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಆ ಪೈಕಿ 13,773 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ ಈ ಬಾರಿ ಶೇ.79.60 ರಷ್ಟು ಫ‌ಲಿತಾಂಶ ಪಡೆದು ರಾಜ್ಯದಲ್ಲಿ 31ನೇ ಸ್ಥಾನದಿಂದ 20ನೇ ಸ್ಥಾನಕ್ಕೆ ಏರಿದೆ. ಫ‌ಲಿತಾಂಶ ಕಳೆದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಸಮಾಧಾನ ತಂದಿದೆ. ಜಿಲ್ಲೆಯಲ್ಲಿ ಯಾವುದೇ ಶಾಲೆ ಶೂನ್ಯ ಫ‌ಲಿತಾಂಶ ಪಡೆದಿಲ್ಲ. 43 ಶಾಲೆಗಳು ಶೇ.100 ರಷ್ಟು ಫ‌ಲಿತಾಂಶ ಪಡೆದುಕೊಂಡಿವೆ.
-ಎಸ್‌.ಜಿ.ನಾಗೇಶ್‌, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಲೂಕು ಒಟ್ಟು ವಿದ್ಯಾರ್ಥಿಗಳು ಉತ್ತೀರ್ಣ ಶೇ. ಸ್ಥಾನ
-ಶಿಡ್ಲಘಟ್ಟ 2,547 2,166 85.04 1
-ಗುಡಿಬಂಡೆ 712 582 80.72 2
-ಚಿಂತಾಮಣಿ 4040 3252 80.5 3
-ಗೌರಿಬಿದನೂರು 4,113 2,789 67.81 4
-ಬಾಗೇಪಲ್ಲಿ 2.528 1,712 67.72 5
-ಚಿಕ್ಕಬಳ್ಳಾಪುರ 3.238 2,103 64.95 5

ಮಾಧ್ಯಮ ಒಟ್ಟು ವಿದ್ಯಾರ್ಥಿಗಳು ಉತ್ತೀರ್ಣ ಶೇಕಡವಾರು
-ಕನ್ನಡ ಮಾಧ್ಯಮ 7,515 5,407 ಶೇ.71.95
-ಆಂಗ್ಲ ಮಾಧ್ಯಮ 7,114 6,350 ಶೇ.89.26
-ಉರ್ದು 38 16 ಶೇ.42.11

ಶಾಲಾವಾರು ಒಟ್ಟು ವಿದ್ಯಾರ್ಥಿಗಳು ಉತ್ತೀರ್ಣ ಶೇಕಡವಾರು
-ಸರ್ಕಾರಿ 121 6,968 5,219 ಶೇ.74.09
-ಅನುದಾನಿತ 36 2,486 1,825 ಶೇ.73.41
-ಖಾಸಗಿ 126 5,213 4,729 ಶೇ.90.72

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next