Advertisement

SSLC ಫ‌ಲಿತಾಂಶ: ಬಂಟ್ವಾಳ ಶೇ. 81.10; ಬೆಳ್ತಂಗಡಿ ಶೇ. 89.09

12:02 AM May 09, 2018 | Karthik A |

ಬಂಟ್ವಾಳ: ತಾಲೂಕಿನ 87  ಪ್ರೌಢಶಾಲೆಗಳಿಂದ ಎಸೆಸೆಲ್ಸಿ ಪರೀಕ್ಷೆಗೆ 5,456 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ 4,425 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 81.10 ಫಲಿತಾಂಶ ದಾಖಲಾಗಿ ರಾಜ್ಯದಲ್ಲಿ 100ನೇ ಸ್ಥಾನ ಪಡೆದಿದೆ. ಒಟ್ಟು ಪರೀಕ್ಷೆಗೆ ಹಾಜರಾದ 2,721 ಮಂದಿ ಹುಡುಗರಲ್ಲಿ 2,054 ಉತ್ತೀರ್ಣರಾಗಿದ್ದು, ಶೇ. 75.48 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 2,735 ಹುಡುಗಿಯರಲ್ಲಿ 2,371 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 86.69 ಫಲಿತಾಂಶ ಪಡೆದು ವಿದ್ಯಾರ್ಥಿನಿಯರು ಅಂಕ ಶೇಕಡಾವಾರು ಲೆಕ್ಕಾಚಾರವಾಗಿ ಮೇಲುಗೈ ಸಾಧಿಸಿದ್ದಾರೆ.

Advertisement

ಶೇ. ನೂರು ಫಲಿತಾಂಶ
ದಿ| ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆ ಆಂಗ್ಲ ಮಾಧ್ಯಮ ವಿಭಾಗ, ಅನುದಾನಿತ ಶಾಲೆ: ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲೆ, ಅನುದಾನ ರಹಿತ: ಮೊಡಂಕಾಪು ಇನ್‌ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆ,  ಎಸ್‌.ವಿ.ಎಸ್‌. ಟೆಂಪಲ್‌ ಆಂಗ್ಲ ಮಾಧ್ಯಮ ಶಾಲೆ,  ತೌಹೀದ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌, ಜೇಸಿ ಆಂಗ್ಲ ಮಾಧ್ಯಮ ಶಾಲೆ ವಿಟ್ಲ, ಜನತಾ ಆಂಗ್ಲ ಮಾಧ್ಯಮ ಶಾಲೆ ಅಡ್ಯನಡ್ಕ ಶೇಕಡಾ ನೂರು ಫಲಿತಾಂಶ ದಾಖಲಿಸಿವೆ.

ಗರಿಷ್ಟ 619 ಅಂಕ
ಇನ್‌ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಜ್ಞಾ ಶೆಟ್ಟಿ 619, ವಿಟ್ಲ ಜೇಸಿಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಮನ್ವಿತಾ 619 ಅಂಕಗಳನ್ನು ಪಡೆದು ಬಂಟ್ವಾಳ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ಇದ್ದಾರೆ. ವಿಟ್ಲ ಜೇಸಿಸ್‌ನ ಮರಿಯಮ್ಮತುಲ್‌ ಸಮ್‌ಲಾ 617 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲಿನ ನವೀನ್‌ಕುಮಾರ್‌ ಮಲ್ಲಪ್ಪ ಮಂಗಳಗುಡ್ಡ 616, ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದಾತ್ರಿ ಸೋಮಯಾಜಿ ಬಿ. 616 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿ ಇದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಾಹಿತಿ ಹೇಳಿದೆ.

ಶೇ. 4 ಪ್ರಗತಿ 
ಈ ಸಲದ ಪರೀಕ್ಷೆಯಲ್ಲಿ ಅನುತ್ತೀರ್ಣ ವಿದ್ಯಾರ್ಥಿಗಳು ನಿರಾಶರಾಗದೆ ಜೂ. 21ರ ಬಳಿಕ  ನಡೆಯುವ ಪೂರಕ ಪರೀಕ್ಷೆಗೆ ಹಾಜರಾಗಬಹುದು. ಅವರು ಸ್ವಲ್ಪ ಶ್ರಮಪಟ್ಟು ಓದಿ ಇದರಲ್ಲಿ ಉತ್ತೀರ್ಣವಾಗಲು ಸಾಕಷ್ಟು ಅವಕಾಶ ಇದೆ. ಅವರಿಗೆ ಕಾಲೇಜು ಸೇರ್ಪಡೆಗೂ ಉಳಿದ ಕೋರ್ಸ್‌ಗಳಿಗೆ ಸೇರ್ಪಡೆಗೂ ಅವಕಾಶಗಳನ್ನು ಸರಕಾರ ವ್ಯವಸ್ಥೆ ಮಾಡಿದೆ. ಕಳೆದ ಅವಧಿಗೆ ಹೋಲಿಸಿದರೆ ಈ ಸಲ ಶೇ. 4ರಷ್ಟು ಫಲಿತಾಂಶದಲ್ಲಿ ಪ್ರಗತಿ ಇದೆ. ಪರೀಕ್ಷೆಗೆ ಹಾಜರಾದ ಪ್ರತಿ ವಿದ್ಯಾರ್ಥಿಯೂ ಉತ್ತೀರ್ಣ ಆಗಬೇಕು ಎಂಬುದು ನಮ್ಮ ಗುರಿ.
– ಎನ್‌.ಶಿವಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

ಬೆಳ್ತಂಗಡಿ: ತಾಲೂಕಿನಲ್ಲಿ ಒಟ್ಟು 3,823 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 3,406 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 89.09 ಫಲಿತಾಂಶ ದಾಖಲಾಗಿ ರಾಜ್ಯದಲ್ಲಿ 24ನೇ ಸ್ಥಾನ ಪಡೆದಿದೆ. ಪರೀಕ್ಷೆಗೆ ಹಾಜರಾದ 1,851 ಬಾಲಕರ ಪೈಕಿ 1,601 ಮಂದಿ ಉತ್ತೀರ್ಣರಾಗಿದ್ದಾರೆ. 1,972 ಬಾಲಕಿಯರ ಪೈಕಿ 1,805 ಮಂದಿ ಉತ್ತೀರ್ಣರಾಗಿದ್ದಾರೆ. ಈ ಬಾರಿ 3 ಸರಕಾರಿ ಪ್ರೌಢಶಾಲೆಗಳು ಹಾಗೂ ಒಂದು ವಸತಿ ಶಾಲೆ ಪೂರ್ಣ ಫಲಿತಾಂಶ ದಾಖಲಿಸುವ ಮೂಲಕ ಸಾಧನೆ ಮೆರೆದಿವೆ. ಉಳಿದಂತೆ 7 ಖಾಸಗಿ ಶಾಲೆಗಳಲ್ಲಿ ಪೂರ್ಣ ಫಲಿತಾಂಶ ದಾಖಲಾಗಿದೆ.

Advertisement

8 ಬಾರಿ ಪೂರ್ಣ ಫಲಿತಾಂಶ
ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸತತ 8ನೇ ಬಾರಿಗೆ ಪೂರ್ಣ ಫಲಿತಾಂಶ ದಾಖಲಿಸಿದೆ. ಗುರುವಾಯನಕೆರೆ ಸರಕಾರಿ ಪ್ರೌಢಶಾಲೆ ಸತತ 7 ಬಾರಿ ಪೂರ್ಣ ಫಲಿತಾಂಶ ಪಡೆದು ಸಾಧನೆ ಮಾಡಿದೆ. ಸ. ಪ್ರೌಢಶಾಲೆ ಕಲ್ಮಂಜ, ಸರಕಾರಿ ಪ್ರೌಢಶಾಲೆ ನೇಲ್ಯಡ್ಕ, ಖಾಸಗಿ ಶಾಲೆಗಳ ಪೈಕಿ, ಸೈಂಟ್‌ ಮೇರಿಸ್‌ ಪ್ರೌಢಶಾಲೆ ಲಾೖಲ, ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಹೋಲಿ ರೆಡಿಮರ್‌ ಪ್ರೌಢಶಾಲೆ ಬೆಳ್ತಂಗಡಿ, ಸಾವ್ಯ ಪ್ರೌಢಶಾಲೆ ಬೆಂದ್ರಾಳ ತೋಟತ್ತಾಡಿ, ಸೈಂಟ್‌ಪೀಟರ್‌ ಕ್ಲೇವರ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ ಅಳದಂಗಡಿ, ಮರಿಯಾಂಬಿಕಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೆದ್ರಬೆಟ್ಟು, ಸಂತ ತೆರೆಸಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೆಳ್ತಂಗಡಿ ಪೂರ್ಣ ಫಲಿತಾಂಶ ದಾಖಲಿಸಿವೆ.

ಶೇ. 5 ಪ್ರಗತಿ 
ಈ ಬಾರಿ ಹಿಂದಿಗಿಂತ ಶೇ. 5 ಹೆಚ್ಚಿನ ಫಲಿತಾಂಶ ದಾಖಲಾಗಿದೆ. ಜಿಲ್ಲಾ ಹಾಗೂ ರಾಜ್ಯ ಸರಾಸರಿಯಲ್ಲೂ ಹೆಚ್ಚಳವಾಗಿದೆ. ಅನುತ್ತೀರ್ಣರಾದವರ ಸಂಖ್ಯೆಯೂ ಕಡಿಮೆಯಾಗಿದ್ದು, ಉತ್ತಮ ಫಲಿತಾಂಶ ದಾಖಲಾಗಿದೆ. ಕಳೆದ ಬಾರಿ 1 ಶಾಲೆ ಪೂರ್ಣ ಫಲಿತಾಂಶ ದಾಖಲಿಸಿತ್ತು, ಈ ಬಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
– ಗುರುಪ್ರಸಾದ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next