ಪುತ್ತೂರು: ಹುಟ್ಟಿನಿಂದಲೇ ಬಾಧಿಸಿದ ಸ್ಕೋಲಿಯೋಸಿಸ್ ಎಂಬ ಬೆನ್ನುಹುರಿ ಬೆಳವಣಿಗೆಯಾಗದ ಸಮಸ್ಯೆ, ಅದಕ್ಕೆ ಆರು ಬಾರಿ ಶಸ್ತ್ರಚಿಕಿತ್ಸೆ, ಎಲ್ಲರಂತೆ ಚುರುಕಾಗಿ ಓಡಾಡಲು, ಶಾಲೆಗೆ ಹೋಗಲು ಸಾಧ್ಯವಾಗದ ಸ್ಥಿತಿ…
ಇಂತಹ ಸವಾಲುಗಳನ್ನು ಮೆಟ್ಟಿ ನಿಂತು 624 ಅಂಕ ಪಡೆದ ದಿಟ್ಟೆ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನಲಕ್ಷ್ಮೀ.
ಬಂಗಾರಡ್ಕದ ಕೃಷಿಕ ಮುರಳೀ ಧರ ಭಟ್ ಮತ್ತು ಶೋಭಾ ದಂಪತಿಯ ದ್ವಿತೀಯ ಪುತ್ರಿ ಈಕೆ.
“ವೈದ್ಯರ ಸಲಹೆ ಪಡೆದು ಕೊಯ ಮತ್ತೂರಿನ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿನ ತಜ್ಞ ವೈದ್ಯರ ಮೂಲಕ ಆಕೆ 9ನೇ ತರಗತಿ ತಲುಪುವ ತನಕ ಆರು ಬಾರಿ ಬೆನ್ನುಹುರಿಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗಿಡ್ಡವಾಗಿದ್ದಾಳೆ ಎಂಬುದನ್ನು ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ’ ಎನ್ನುತ್ತಾರೆ ತಾಯಿ ಶೋಭಾ ಮುರಳೀಧರ ಭಟ್.
ಶಾಲೆಯಲ್ಲಿ ಮೇಲಿನ ಅಂತಸ್ತಿನ ತರಗತಿಯಲ್ಲಿಯೇ ಕೂರುತ್ತೇನೆ ಎನ್ನುತ್ತಿದ್ದಳು. ಆಕೆಯ ಮನಸ್ಸಿಗೆ ನೋವಾಗದಂತೆ ಸಹಕರಿಸುತ್ತಿದ್ದೆವು ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್.
ಸ್ವ ಇಚ್ಛೆಯಿಂದ ಓದುತ್ತಿದ್ದಳು. ಆಕೆಯ ಸಾಧನೆ ಅತ್ಯಂತ ಖುಷಿ ತಂದಿದೆ ಎಂಬುದು ತಂದೆ ಮುರಳೀಧರ ಭಟ್ ಅವರ ಮಾತು.
ಅಂದಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಕೋಚಿಂಗ್‌ಗೆ ಹೋಗಿಲ್ಲ. ಉತ್ತಮ ಅಂಕ ಬಂದಿರುವುದು ಖುಷಿಯಾಗಿದೆ. ಸಣ್ಣದಿಂದಲೇ ವೈದ್ಯೆಯಾಗುವ ಕನಸು ಇರುವುದರಿಂದ ಅದಕ್ಕೆ ಸಂಬಂಧಪಟ್ಟ ವಿಷಯದಲ್ಲೇ ಮುಂದುವರೆಯುತ್ತೇನೆ.
-ಸಿಂಚನಲಕ್ಷ್ಮೀ