Advertisement

ಎಸೆಸೆಲ್ಸಿ ಫ‌ಲಿತಾಂಶ: ಉಡುಪಿ ಪ್ರಥಮ, ದ.ಕ. ದ್ವಿತೀಯ

01:41 AM May 13, 2017 | Karthik A |

ಬೆಂಗಳೂರು: ಎಸೆಸೆಲ್ಸಿ ಫ‌ಲಿತಾಂಶ ಪ್ರಕಟಗೊಂಡಿದ್ದು, ಗ್ರಾಮೀಣ ವಿದ್ಯಾರ್ಥಿಗಳು, ಬಾಲಕಿಯರು ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ದ್ವಿತೀಯ ಪಿಯುಸಿ ಫ‌ಲಿತಾಂಶದಂತೆ ಎಸೆಸೆಲ್ಸಿಯಲ್ಲೂ ಬಹಳಷ್ಟು ಕುಸಿತ ಕಂಡಿದ್ದು, ಕಳೆದ 7 ವರ್ಷದಲ್ಲೇ ಅತ್ಯಂತ ಕಳಪೆ ಫ‌ಲಿತಾಂಶ ಇದಾಗಿದೆ. ಪರೀಕ್ಷೆ ಬರೆದ 8,56,286 ವಿದ್ಯಾರ್ಥಿಗಳಲ್ಲಿ ಶೇ.74.08ರಷ್ಟು ಬಾಲಕಿಯರು, ಶೇ.62.42ರಷ್ಟು ಬಾಲಕರು ತೇರ್ಗಡೆಯಾಗಿದ್ದು, ಒಟ್ಟಾರೆ ಶೇ.67.87ರಷ್ಟು ಫ‌ಲಿತಾಂಶ ಬಂದಿದೆ. ನಗರ ಪ್ರದೇಶದ ಶೇ. 72.18ರಷ್ಟು ಹಾಗೂ ಗ್ರಾಮೀಣ ಪ್ರದೇಶದ ಶೇ.74.12ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ.

Advertisement

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 5,34,339 ವಿದ್ಯಾರ್ಥಿಗಳಲ್ಲಿ ಶೇ.62.47ರಷ್ಟು, ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆದ 2,80,925 ವಿದ್ಯಾರ್ಥಿ ಗಳಲ್ಲಿ ಶೇ.78.94ರಷ್ಟು ವಿದ್ಯಾರ್ಥಿ ಗಳು ತೇರ್ಗಡೆಯಾಗಿದ್ದು, ಇಂಗ್ಲಿಷ್‌ ಮಾಧ್ಯಮ ವಿದ್ಯಾರ್ಥಿಗಳೇ ಇಲ್ಲಿಯೂ ಪಾರಮ್ಯ ಮೆರೆದಿದ್ದಾರೆ. ಬೆಂಗಳೂರಿನ ಸುಮಂತ್‌ ಹೆಗ್ಡೆ, ದಕ್ಷಿಣ ಕನ್ನಡದ ಎಚ್‌. ಪೂರ್ಣಾನಂದ ಹಾಗೂ ಬಾಗಲಕೋಟೆಯ ಪಲ್ಲವಿ ಶಿರಹಟ್ಟಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದಾರೆ. ಮಂಗಳೂರಿನ ಜಯನಿ ಆರ್‌.ನಾಥ್‌, ಹಾನಸದ ವಚನ ರಾಘವೇಂದ್ರ. ಎನ್‌, ಯಲ್ಲಾಪುರದ ಹೇಮಂತ್‌ ಲಕ್ಷ್ಮೀನಾರಾಯಣ್‌ ಶಾಸ್ತ್ರಿ, ಕುಮಟದ ನಂದಿನಿ ಎಂ. ನಾಯ್ಕ, ಈಶ್ವರ್‌ ಸೀತಾರಾಮ ಜೋಶಿ ಮತ್ತು ಕಲಬುರಗಿಯ ಸೋನಾಲಿ ಬೀರಾದರ್‌ ಅವರು 625ಕ್ಕೆ 624 ಅಂಕ ಪಡೆದ ಎರಡನೇ ಸ್ಥಾನದಲ್ಲಿದ್ದಾರೆ.

625ಕ್ಕೆ 623 ಅಂಕ ಪಡೆದ 11 ವಿದ್ಯಾರ್ಥಿಗಳಿದ್ದಾರೆ. 623ಕ್ಕಿಂತ ಅಧಿಕ ಅಂಕ ಪಡೆದ 20 ವಿದ್ಯಾರ್ಥಿಗಳಲ್ಲಿ 18 ಮಂದಿ ಇಂಗ್ಲಿಷ್‌ ಮಾಧ್ಯಮ ಹಾಗೂ ಇಬ್ಬರು ಕನ್ನಡ ಮಾಧ್ಯಮದವರಾಗಿದ್ದಾರೆ. ಅವರಿಬ್ಬರೂ 625ಕ್ಕೆ 625 ಪಡೆದಿದ್ದಾರೆ. ಗಮನಾರ್ಹ ಅಂಶ ಎಂದರೆ, ಉನ್ನತ ಶ್ರೇಣಿಯಲ್ಲಿ ಪಾಸಾ ದವರಲ್ಲಿ ಬಾಲಕರೇ ಹೆಚ್ಚಿದ್ದಾರೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಸಲ 10ಕ್ಕೆ ಇಳಿದಿದೆ. ಫ‌ಲಿತಾಂಶ ಘೋಷಿಸಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್, ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕೋಡಿ ಕ್ರಮವಾಗಿ ಮೊದಲ 3 ಸ್ಥಾನ ಪಡೆದಿದ್ದು, ಎಸೆಸೆಲ್ಸಿಯಲ್ಲೂ ಬೀದರ್‌ ಕೊನೆಯ ಸ್ಥಾನಕ್ಕೆ ಜಾರಿದೆ. 2017ರಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದ 8,56,286 ವಿದ್ಯಾರ್ಥಿಗಳಲ್ಲಿ  5,81,134 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 2,75,152 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.


ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ

ಪಿಯುಸಿ ಹಾಗೂ ಎಸೆಸೆಲ್ಸಿಯಲ್ಲಿ ಬೀದರ್‌ ಕೊನೆಯ ಸ್ಥಾನ ಪಡೆದಿದೆ. ಬೀದರ್‌ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿ ಸಹಿತ ಕಳಪೆ ಸಾಧನೆಯ ಜಿಲ್ಲೆಗಳ  ಶೈಕ್ಷಣಿಕ ಅಭಿವೃದ್ಧಿಗೆ ವಿಷಯವಾರು, ಭಾಷಾವಾರು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್ ತಿಳಿಸಿದ್ದಾರೆ. ಫ‌ಲಿತಾಂಶ ಪ್ರಕಟಿಸಿದ ಅನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ರಾಷ್ಟ್ರೀಯ ನೀತಿಯಿಂದ ಗ್ರೇಸ್‌ ಮಾರ್ಕ್‌ ನೀಡಿಲ್ಲ ಹಾಗೂ ಸ್ಕೀಮ್‌ ಆಫ್ ಇವ್ಯಾಲ್ಯೂವೇಷನ್‌ ತಂದಿದ್ದರಿಂದ ವಿದ್ಯಾರ್ಥಿಗಳ ಶ್ರಮದ ನೈಜ ಫ‌ಲಿತಾಂಶ ಬಂದಿದೆ ಎಂದರು.
ಪ್ರಾಥಮಿಕ ಶಾಲೆಯಲ್ಲಿ 14,729 ಶಿಕ್ಷಕರ ಹುದ್ದೆ ಖಾಲಿಯಿದ್ದು, ಸದ್ಯ ಎಲ್ಲ ಹುದ್ದೆಗೂ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. 10 ಸಾವಿರ ಶಿಕ್ಷಕರ ನೇಮಕಾತಿಗೆ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ತಿದ್ದುಪಡಿ ತಂದು ತತ್‌ಕ್ಷಣದಿಂದಲೇ ಕಾರ್ಯಪ್ರವೃತ್ತರಾಗಲಿದ್ದೇವೆ, ಹಾಗೆಯೇ 1689 ಪ್ರೌಢಶಾಲಾ  ಶಿಕ್ಷಕರ ನೇಮ ಕಾತಿಗೂ ಶೀಘ್ರವೇ ಚಾಲನೆ ಸಿಗಲಿದೆ. ಶಿಕ್ಷಣ ಗುಣಮಟ್ಟ ಸುಧಾರಣೆಗೆ ಬೇಕಾದ ಯೋಜನೆ ರೂಪಿಸಿ, ಅನುಷ್ಠಾನ ಮಾಡಲಿದ್ದೇವೆ ಎಂದರು. 2012ರ ಆರ್‌ಎಂಎಸ್‌ಎ ಅನುದಾನದಲ್ಲಿ 72 ಆದರ್ಶ ಶಾಲೆಗಳನ್ನು ರಾಜ್ಯದಲ್ಲಿ ತೆರೆದಿದ್ದೇವೆ ಎಂದರು.


ಪೂರಕ ಪರೀಕ್ಷೆ

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂನ್‌ 15ರಿಂದ 22ರ ತನಕ ಪೂರಕ ಪರೀಕ್ಷೆ ನಡೆಯಲಿದ್ದು, ಮೇ 22 ಅರ್ಜಿ ಸಲ್ಲಿಕೆಗೆ ಕಡೇ ದಿನ. ಹಾಗೆಯೇ ಉತ್ತರ ಪತ್ರಿಕೆಯ ಛಾಯಾಪ್ರತಿ, ಮರು ಎಣಿಕೆ, ಮರು ಮೌಲ್ಯಮಾಪನಕ್ಕೂ ಅವಕಾಶ ಇದ್ದು, ಮೇ 22ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತನ್ವೀರ್‌ ಸೇಠ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next