ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ “ಎ’ ಗ್ರೇಡ್ ಗಳಿಸಿದೆ. ಆದರೆ ಶೇಕಡಾವಾರು ಫಲಿತಾಂಶದಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ 19ನೇ ಸ್ಥಾನದಲ್ಲಿದೆ.
Advertisement
ದ್ವಿತೀಯ ಪಿಯುಸಿಯಲ್ಲಿ ಸದಾ ಅಗ್ರ ಶ್ರೇಣಿಯಲ್ಲೇ ಇರುವ ಜಿಲ್ಲೆಯು ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಾತ್ರ ಎಡವಿರುವುದೆಲ್ಲಿ ಎಂಬ ಬಗ್ಗೆ ವಿಸ್ತೃತ ಅವಲೋಕನ ನಡೆಸಬೇಕಾಗಿದೆ. ಶೇ. 90ರ ಗಡಿ ದಾಟಿದ ಫಲಿತಾಂಶ ದಾಖಲಿಸಲು ದ.ಕ. ಜಿಲ್ಲೆ ಮಾಡಬೇಕಾದ ಶೈಕ್ಷಣಿಕ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಇದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಕರೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಪರೀಕ್ಷೆಗೆ ಒಂದೆರಡು ತಿಂಗಳು ಇರುವ ಸಂದರ್ಭದಲ್ಲಿ ಕೊನೆಯ ಸಿದ್ಧತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಲಾಗುತ್ತದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭವಾದ ಕಾಲದಲ್ಲಿಯೇ ಪರೀಕ್ಷಾ ಸಿದ್ಧತೆ ಕೂಡ ಮಾಡಿರುತ್ತಾರೆ. ಇದು ಮಕ್ಕಳಿಗೆ ಅನುಕೂಲವಾಗುತ್ತದೆ. ಆದರೆ ನಮ್ಮಲ್ಲಿ ಮೊದಲಿಗೆ ಪಾಠ ಬೋಧನೆಗೆ ಆದ್ಯತೆ ಮಾಡಲಾಗುತ್ತಿದೆ’ ಎನ್ನುತ್ತಾರೆ. 8, 9ರಲ್ಲಿ ನಿಗಾ ಇರಿಸಿ!
ಪೋಷಕರೊಬ್ಬರ ಪ್ರಕಾರ “8 ಹಾಗೂ 9 ನೇ ತರಗತಿಯಲ್ಲಿ ವಿದ್ಯಾರ್ಥಿ ಇರುವಾಗ ಆತನ ಕಲಿಕಾ ಸಾಮರ್ಥ್ಯದ ಬಗ್ಗೆ ಆಯಾ ಶಿಕ್ಷಕರ ಗಮನಕ್ಕೆ ಬಂದಿರುತ್ತದೆ. ಹೀಗಾಗಿ 10ನೇ ತರಗತಿಗೆ ಆ ವಿದ್ಯಾರ್ಥಿಯನ್ನು ಯಾವ ರೀತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ಸಾಮಾನ್ಯ ಜ್ಞಾನ ಬೇಕು. ಅಂಕ ಕಡಿಮೆಯಲ್ಲಿ ಇದ್ದ ವಿದ್ಯಾರ್ಥಿಯನ್ನು ಹೆತ್ತವರ ಸಹಕಾರ ಪಡೆದು ಶಿಕ್ಷಕರು ಹೆಚ್ಚು ಅಂಕ ಗಳಿಕೆಗೆ ಅವಕಾಶ ಮಾಡಿಕೊಡುವ ಸೂತ್ರ ಜಾರಿಗೆ ತರಬಹುದು’ ಎನ್ನುತ್ತಾರೆ.
Related Articles
ದ.ಕ. ಜಿಲ್ಲಾ ಹೈಸ್ಕೂಲ್ ಅಸೋಸಿಯೇಶನ್‌ನ ಪ್ರಮುಖರ ಪ್ರಕಾರ “15 ವರ್ಷಗಳಿಂದ ಎಸೆಸೆಲ್ಸಿ ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಯು ಶೇ. 84ರಿಂದ 89ರ ಆಸುಪಾಸಿನಲ್ಲೇ ಇದೆ. ಆದರೆ ಶೇ. 70 ಫಲಿತಾಂಶ ಪಡೆಯುತ್ತಿದ್ದ ಕೆಲವು ಜಿಲ್ಲೆಗಳು ಒಮ್ಮಿಂದೊಮ್ಮೆಲೆ ಶೇ. 90ರ ಗಡಿದಾಟಲು ಯಾವ ಕಾರಣ ಎಂಬುದು ಕರಾವಳಿಯವರಿಗೆ ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ.
Advertisement
ಸ್ಥಾನವಿಲ್ಲ-ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ಸಿಗಲಿನಿವೃತ್ತ ಡಿಡಿಪಿಐಯೊಬ್ಬರು “ಉದಯವಾಣಿ’ ಜತೆಗೆ ಮಾತನಾಡಿ, “ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಣಾತ್ಮಕಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಈ ಬಾರಿ ಶೇಕಡಾವಾರು ಫಲಿತಾಂಶದಲ್ಲಿಯೂ ದ.ಕ. ಮಹತ್ತರ ಸಾಧನೆ ದಾಖಲಿಸಿದೆ. ವಿಶೇಷವೆಂದರೆ ಜಿಲ್ಲೆಯು ಕಳೆದ ಹಲವು ವರ್ಷಗಳಿಂದ ಶೇ. 85ರ ಆಸುಪಾಸಿನಲ್ಲಿ ಫಲಿತಾಂಶವನ್ನು ದಾಖಲಿಸುತ್ತಿದೆ. ಹೀಗಾಗಿ ಫಲಿತಾಂಶದಲ್ಲಿ ಇಳಿಕೆ ಎಂದು ಹೇಳುವಂತಿಲ್ಲ. 2019ರಿಂದ ಸ್ಥಾನಗಳ ಆಧಾರಿತವಾಗಿ ಜಿಲ್ಲೆಯ ಪರಿಗಣನೆ ಮಾಡುತ್ತಿಲ್ಲ’ ಎನ್ನುತ್ತಾರೆ. ಶೇಕಡಾವಾರು ಏರಿಕೆ
ಎಸೆಸೆಲ್ಸಿ ಫಲಿತಾಂಶದ ಶೇಕಡಾವಾರು ಪ್ರಮಾಣದಲ್ಲಿ ದ.ಕ. ಜಿಲ್ಲೆ ಈ ಬಾರಿ ಗಣನೀಯ ಏರಿಕೆ ಕಂಡಿದೆ. 2014ರಿಂದ ಇಲ್ಲಿಯವರೆಗೆ ನಡೆದ ಎಲ್ಲ ವರ್ಷದ ಫಲಿತಾಂಶಗಳನ್ನು ಪರಿಗಣಿಸಿದಾಗ ಶೇಕಡಾ ಫಲಿತಾಂಶ ಈ ಬಾರಿಯೇ ಅಧಿಕ. 2014-15ರಲ್ಲಿ ಶೇ. 89.35 ಫಲಿತಾಂಶ ಜಿಲ್ಲೆಗೆ ಬಂದಿರುವುದು (ಗ್ರೇಡ್ ಸಮಯ ಹೊರತುಪಡಿಸಿ)ಇಲ್ಲಿಯವರೆಗಿನ ಗರಿಷ್ಠ ಫಲಿತಾಂಶ. ಆದರೆ ಈ ಬಾರಿ ಶೇ. 89.47 ಫಲಿತಾಂಶ ಬರುವ ಮೂಲಕ ಸಾರ್ವತ್ರಿಕ ಏರಿಕೆ ಸಾಧಿಸಲಾಗಿದೆ. ಶೇಕಡಾವಾರು ಫಲಿತಾಂಶವನ್ನು ಪರಿಗಣಿಸಿದಾಗ ಜಿಲ್ಲೆಯ ಎಸೆಸೆಲ್ಸಿ ಫಲಿತಾಂಶದಲ್ಲಿ ಸಮತೋಲನ ಕಾಯ್ದುಕೊಳ್ಳಲಾಗಿದೆ. ಆದರೂ ಮುಂದಿನ ವರ್ಷದ ಫಲಿತಾಂಶದಲ್ಲಿ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಇಲಾಖೆ, ಶಿಕ್ಷಕರ ಜತೆಗೆ ಸಮನ್ವಯ ಸಾಧಿಸಿ ಸೂಕ್ತ ಹೆಜ್ಜೆಗಳನ್ನು ಇಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
– ದಯಾನಂದ ನಾಯಕ್, ಡಿಡಿಪಿಐ, ದ.ಕ.
**
ಉಡುಪಿ: ಕಾರಣ ಪತ್ತೆಗೆ ಶಿಕ್ಷಣ ಇಲಾಖೆ ಉದ್ಯುಕ್ತ ಉಡುಪಿ: ಎಸೆಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 18ನೇ ಸ್ಥಾನಕ್ಕೆ ಇಳಿದಿರುವ ವಿಚಾರ ಬಹುತೇಕರಲ್ಲಿ ಅಚ್ಚರಿ-ಆತಂಕ ಉಂಟು ಮಾಡಿದೆ. ಎಸೆಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿರುವ ಜಿಲ್ಲೆ ಏಕಾಏಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುಸಿಯಲು ಕಾರಣ ಏನು ಎಂಬುದನ್ನು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. 2022ರ ಎಸೆಸೆಲ್ಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಗೆ ಶೇ. 89.46ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ. 89.49ರಷ್ಟು ಫಲಿತಾಂಶ ಬಂದಿದೆ. ಅಂದರೆ ಕೇವಲ 0.03ರಷ್ಟು ಮಾತ್ರ ಏರಿಕೆ ಕಂಡಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇದು ಕಡಿಮೆಯೇ ಆಗಿದೆ. ಮಕ್ಕಳ ಕಲಿಕೆಯಲ್ಲಿ ವ್ಯತ್ಯಾಸವಾಗಿದೆಯೇ ಅಥವಾ ಕಲಿಕಾ ವಿಧಾನ ಸರಿಯಾಗಿರಲಿಲ್ಲವೇ ಅಥವಾ ಬೋಧನಾ ಲೋಪವೋ, ಪ್ರಶ್ನೆಗಳನ್ನು ಮಕ್ಕಳಿಗೆ ಅರ್ಥೈಸಿ ಕೊಳ್ಳಲು ಸಾಧ್ಯವಾಗಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಶೈಕ್ಷಣಿಕ ವಲಯದಲ್ಲಿ ಎದ್ದಿದ್ದು, ಅಧಿಕಾರಿಗಳೇ ಇದಕ್ಕೆಲ್ಲ ಮುಂದೆ ಉತ್ತರ ನೀಡಬೇಕಿದೆ. ರಾಜ್ಯದ ಒಟ್ಟಾರೆ ಫಲಿತಾಂಶದಲ್ಲಿ ಜಿಲ್ಲೆಯು ಎ ಶ್ರೇಣಿಯಲ್ಲಿದ್ದರೂ ಫಲಿತಾಂಶವಾರು 18ನೇ ಸ್ಥಾನದಲ್ಲಿದೆ. ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ, ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಪ್ರಮಾಣ, ಗೈರು ಹಾಜರಾದವರ ಪ್ರಮಾಣ ಮತ್ತು ಪ್ರತೀ ವಿಷಯದಲ್ಲೂ ವಿದ್ಯಾರ್ಥಿಗಳು ತೆಗೆದುಕೊಂಡಿರುವ ಅಂಕದ ಆಧಾರದಲ್ಲಿ ಈ ರೀತಿಯ ಹಂಚಿಕೆ ಮಾಡಲಾಗುತ್ತದೆ. ಶೇ. 75ರಿಂದ ಶೇ. 100ರಷ್ಟು ಫಲಿತಾಂಶ ಹೊಂದಿರುವ ಜಿಲ್ಲೆಗಳನ್ನು ಎ ದರ್ಜೆಗೆ ಸೇರಿಸಲಾಗಿದೆ. ಅದರಲ್ಲಿ ಉಡುಪಿಯೂ ಇದೆ. ಶೇ. 60ರಿಂದ ಶೇ. 75ರಷ್ಟು ಫಲಿತಾಂಶ ಪಡೆದಿರುವ ಜಿಲ್ಲೆಗಳನ್ನು ಬಿ ದರ್ಜೆಗೆ ಸೇರಿಸಲಾಗಿದೆ. ಕಳೆದ ವರ್ಷವೂ ಉಡುಪಿ ಎ ದರ್ಜೆಯಲ್ಲೇ ಇತ್ತು. ಈ ಬಾರಿಯೂ ಅದೇ ದರ್ಜೆಯನ್ನು ಕಾಯ್ದುಕೊಂಡಿದೆ. ವಿದ್ಯಾರ್ಥಿಗಳ ಸಾಧನೆ ಕುಗ್ಗಿಲ್ಲ
ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆಯಲ್ಲಿ ಯಾವುದೇ ರೀತಿಯಲ್ಲೂ ಇಳಿಮುಖವಾಗಿಲ್ಲ. ಶ್ರೇಣಿ ಆಧಾರಿತವಾಗಿ ಜಿಲ್ಲೆಯ ಸ್ಥಾನ ಹಂಚಿಕೆ ಮಾಡಿರುವುದರಿಂದ 18ನೇ ಸ್ಥಾನಕ್ಕೆ ಇಳಿದಿದೆ. ಕಳೆದ ಬಾರಿಗಿಂತ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿತ್ರದುರ್ಗ, ಹಾಸನ, ಚಿಕ್ಕಬಳ್ಳಪುರ ಮೊದಲಾದ ಜಿಲ್ಲೆಗಳು ಶೇ. 96 ಕ್ಕಿಂತ ಅಧಿಕ ಫಲಿತಾಂಶ ಪಡೆದಿರುವುದರಿಂದ ಉಡುಪಿ ಜಿಲ್ಲೆಯು ಯಾವ ವಿಭಾಗದಲ್ಲಿ ಕಡಿಮೆ ಸಾಧನೆ ಮಾಡಿದೆ ಎಂಬುದನ್ನು ಪರಿಶೀಲಿಸಲೇ ಬೇಕಾಗುತ್ತದೆ. ಇದು ತತ್‌ಕ್ಷಣ ಸಾಧ್ಯವಿಲ್ಲ. ಫಲಿತಾಂಶದ ಪೂರ್ಣ ವಿವರ ಬಂದ ಅನಂತರದಲ್ಲೇ ವಲಯವಾರು, ಶಾಲಾ ವಾರು ಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಜಾಲತಾಣದಲ್ಲಿ ಚರ್ಚೆ
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಎಸೆಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಗುತ್ತಿದೆ. ಅಲ್ಲದೆ ಇದರಲ್ಲಿ ರಾಜಕೀಯ ಅಡಗಿದೆ. ಉದ್ದೇಶ ಪೂರ್ವಕವಾಗಿ ಕೆಲವೊಂದು ಜಿಲ್ಲೆಗೆ ಉತ್ತಮ ಫಲಿತಾಂಶ ನೀಡಲಾಗಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಎಸೆಸೆಲ್ಸಿ ಫಲಿತಾಂಶ ದಿನವಿಡೀ ಚರ್ಚೆಗೆ ಗ್ರಾಸವಾಗಿತ್ತು. ಫಲಿತಾಂಶದಲ್ಲಿ ಸ್ವಲ್ಪ ಏರಿಕೆ ಕಂಡಿದ್ದು, ಎ ಶ್ರೇಣಿಯಲ್ಲಿಯೇ ಇದ್ದೇವೆ. ಸ್ಥಾನದಲ್ಲಿ ಇಳಿಕೆಯಾಗಿರಲು ಕಾರಣ ಏನು ಎಂಬುದನ್ನು ವಿಸ್ತೃತವಾಗಿ ಪರಿಶೀಲಿಸಿದ ಅನಂತರವೇ ತಿಳಿದುಬರಬೇಕಿದೆ.
– ಗಣಪತಿ, ಡಿಡಿಪಿಐ ಉಡುಪಿ