Advertisement

ಎಸ್ಸೆಸ್ಸೆಲ್ಸಿ: ಜಿಲ್ಲೆಯ ಉತ್ತಮ ಫಲಿತಾಂಶಕ್ಕೆ ಸಿದ್ಧತೆ ಕೈಗೊಳ್ಳಿ

01:08 PM Nov 21, 2017 | Team Udayavani |

ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ ಕನಿಷ್ಠ 5ನೇ ಸ್ಥಾನ ಪಡೆಯುವ ನಿಟ್ಟಿನಲ್ಲಿ ಶಿಕ್ಷಕರು ಪೂರಕ ತಯಾರಿ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. 

Advertisement

ನಗರದ ಶಿಕ್ಷಕಿಯರ ತರಬೇತಿ ಕೇಂದ್ರದಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಉರ್ದು ಮಾಧ್ಯಮದ ಸ್ಕೋರಿಂಗ್‌ ಪ್ಯಾಕೇಜ್‌ ಪುಸ್ತಕಗಳ ಬಿಡುಗಡೆ ಹಾಗೂ ಉರ್ದು ಪ್ರೌಢಶಾಲಾ ಸಹ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಶಿಕ್ಷಕರು ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆ ನಡೆಸಿ ಉತ್ತಮ ಅಂಕ ಗಳಿಸುವ, ಉತ್ತೀರ್ಣ ಹಾಗೂ ಅನುತ್ತೀರ್ಣರಾಗುವವರ ಗುಂಪು  ಮಾಡಬೇಕು. ಅನುತ್ತೀರ್ಣ ಹೊಂದಿದ ವಿದ್ಯಾರ್ಥಿಗಳ ಸಮಸ್ಯೆ ತಿಳಿದು ಅವರು ಉತ್ತೀರ್ಣರಾಗುವಂತೆ ತಯಾರಿ ಮಾಡಬೇಕು ಎಂದರು. 

ಹಿಂದಿನ ವರ್ಷ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಭಾಷೆ ಪರೀಕ್ಷೆಯಲ್ಲೇ ಅನುತ್ತೀರ್ಣರಾದ ಕಾರಣ ರ್‍ಯಾಂಕಿಂಗ್‌ನಲ್ಲಿ ಕುಸಿತಗೊಂಡಿದೆ. ಇದಕ್ಕೆ ಈ ವಿಷಯದ ಶಿಕ್ಷಕರೇ ನೇರ ಹೊಣೆಗಾರರು. ಶಿಕ್ಷಕರು ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯನ್ನು ಉರ್ದು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ  ಕಲಿಸಬೇಕು.

ಉರ್ದು ವಿದ್ಯಾರ್ಥಿಗಳು ಖುರಾನ್‌ ಓದಿದರೆ ಸಾಲದು. ಎಸ್ಸೆಸ್ಸೆಲ್ಸಿನಂತರ ಉನ್ನತ ಶಿಕ್ಷಣದತ್ತ ಗಮನ ಹರಿಸಬೇಕು ಎಂದರು. ವೈಶುದೀಪ ಪ್ರತಿಷ್ಠಾನದ ಕಾರ್ಯದರ್ಶಿ ಶಿವಲೀಲಾ ಕುಲಕರ್ಣಿ ಮಾತನಾಡಿ, ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ಶಿಕ್ಷಕರಿಂದ ಪುಸ್ತಕ ತಯಾರಿಸಿ ಸಂಸ್ಥೆಯಿಂದ ನೀಡಲಾಗುತ್ತಿದೆ. 

Advertisement

ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಶೇ.10ರ ವರೆಗೆ ಉನ್ನತಿಯಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳ ಮತ್ತು ಪಾಲಕರ ಸಭೆ ನಡೆಸಿ, ಅವರ ಸಲಹೆ-ಸೂಚನೆ ಕಂಡುಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು. ಶ್ರೀಶೈಲ್‌ ಕರೀಕಟ್ಟಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಫೋನ್‌ ಇನ್‌ ಕಾರ್ಯಕ್ರಮ ಪೂರಕವಾಗಿದೆ. 

ನ. 22ರಂದು ಮಧ್ಯಾಹ್ನ 3 ರಿಂದ 5 ಗಂಟೆವರೆಗೆ ಫೋನ್‌ ಇನ್‌ ನಡೆಯಲಿದ್ದು, ಟೋಲ್ ಫ್ರೀ ನಂ.1800-4255540 ಕರೆ ಮಾಡಿ  ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದರು.  ಶಹರ ಬಿಇಒ ಎಸ್‌.ಎಂ. ಹುಡೇದಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರಿ

ಉಪನಿರ್ದೇಶಕ ಎಂ.ಎಲ್ ಹಂಚಾಟೆ, ಪ್ರೇರಣಾ ಸಮಿತಿ ಸದಸ್ಯ ವಿನಾಯಕ ಜೋಶಿ, ಶಶಿಕಲಾ ಬಸವರೆಡ್ಡಿ, ಎ.ಕೆ. ಮುಜಾವರ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೇರಣಾ ಸಮಿತಿ ಸದಸ್ಯರು, ಉರ್ದು ಶಿಕ್ಷಕರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next