ದೇವನಹಳ್ಳಿ: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೂರನೇ ಸ್ಥಾನದಲ್ಲಿದೆ. 2018ರಲ್ಲಿ ಜಿಲ್ಲೆಯು 14ನೇ ಸ್ಥಾನದಲ್ಲಿತ್ತು. ಪ್ರಸ್ತುತ ವರ್ಷದ ಫಲಿತಾಂಶ ಹೆಚ್ಚಳವಾಗಿರುವುದು ನಮ್ಮೆಲ್ಲರಿಗೂ ಬಹಳ ಸಂತೋಷದ ವಿಷಯವಾಗಿದ್ದರೂ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗಿದೆ. ಶೇ.88.34 ಫಲಿತಾಂಶ ಪಡೆದಿದೆ ಎಂಬ ತೃಪ್ತಿ ನಮಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಕಾರಿ ಆರ್.ಲತಾ ತಿಳಿಸಿದರು.
ಅನುದಾನ ಬಳಕೆ: ಫಲಿತಾಂಶ ಸುಧಾರಣಾ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಒಂದು ಸಮಿತಿಯನ್ನು ರಚಿಸಲಾಯಿತು. ಅದರಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಪಂ ಅಧಿಕಾರಿಗಳನ್ನು ಒಳಗೊಂಡ ಈ ಎರಡು ವಿವಿಧ ಅಧಿಕಾರಿಗಳ ಸಹಯೋಗದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿತ್ತು. ಈ ಸಮಿತಿಗೆ ಶೈಕ್ಷಣಿಕವಾಗಿ ಸಲಹೆ ಮಾರ್ಗದರ್ಶನ ನೀಡಲು ನಿವೃತ್ತ ಪ್ರಾಧ್ಯಾಪಕ ಡಾ.ಆರ್.ನಾಗರಾಜಯ್ಯ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಈ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ತಮ್ಮ ಸಿಎಸ್‌ಆರ್ ಅನುದಾನದಿಂದ ನೀಡಲು ಒಪ್ಪಿಕೊಂಡಿತ್ತು. ಅದರಂತೆ ಅನುದಾನವನ್ನು ಸಹ ನೀಡಿದೆ ಎಂದು ಹೇಳಿದರು.
ಸುಧಾರಣಾ ಸಮಿತಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣ ಸಮಿತಿ ಎಂಬ ಶೀರ್ಷಿಕೆಯಡಿಯಲ್ಲಿ ಚಿಂತನೆ ಪ್ರಾರಂಭವಾಯಿತು. ಪ್ರಾರಂಭದಲ್ಲಿ ಯೋಜನೆಯ ಮಾನದಂಡವಾಗಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯವಾರ್ಷಿಕ ಪರೀಕ್ಷೆಯಲ್ಲಿ ಶೇ.40ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರ್ತಿಸಲಾಯಿತು. ಈ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 1936 ವಿದ್ಯಾರ್ಥಿಗಳ ಸಾಧನೆ ಮಟ್ಟವು ಗಣಿತ, ವಿಜ್ಞಾನ, ಆಂಗ್ಲ ಭಾಷೆ ಮತ್ತು ವಿಜ್ಞಾನದಲ್ಲಿ ಕಡಿಮೆ ಇದ್ದರಿಂದ ಕಡಿಮೆ ಸಾಧನೆ ಮಾಡಿದ ಮಕ್ಕಳನ್ನು ಒಕ್ಕೂಡಿಸಿ ವಿಶೇಷ ಪರಿಗಣಿತ ಗುಂಪು (ವಿಪಿಜಿ) ರೂಪಿಸಲಾಯಿತು. ಈ ಮಕ್ಕಳಿಗೆ ನಾಲ್ಕು ವಿಷಯಗಳ ಬೋಧನೆಗೆ ವಾರದಲ್ಲಿ ಒಂದು ದಿನ ವಿಶೇಷ ತರಗತಿಗಳನ್ನು ನಡೆಸಲು ಅಂದಾಜಿಸಲಾಯಿತು.
ಸಮಗ್ರ ವ್ಯವಸ್ಥೆ: ಈ ತರಗತಿಗಳನ್ನು ವ್ಯವಸ್ಥಿತವಾಗಿ ನಡೆಸಲು ಸ್ಥಳ ಮತ್ತು ಸಂಪನ್ಮೂಲಗಳ ಲಭ್ಯತೆಗೆ ಅನುಸಾರವಾಗಿ 33 ಕೇಂದ್ರಗಳನ್ನು ಗುರ್ತಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ವಿದ್ಯಾರ್ಥಿಗಳನ್ನು 30 ಕೇಂದ್ರಗಳಿಗೆ ಹಂಚಿಕೆ ಮಾಡಿ ತರಗತಿಗಳಿಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಮತ್ತು ಮದ್ಯಾಹ್ನದ ಊಟದ ವ್ಯವಸ್ಥೆ, ಲೇಖನ ಸಾಮಗ್ರಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಹ್ಯಾಪಿ ಹೋಮ್ ಸ್ಕೂಲ್ ಪದ್ಧತಿ ಅನುಷ್ಠಾನಗೊಳಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸಲಾಯಿತು. ವಿಪಿಜಿ ಅನುಷ್ಠಾನದಿಂದ ಶೇ. 40ರಷ್ಟು ಮಕ್ಕಳು ಉತ್ತಮ ಸಾಧನೆಯತ್ತ ದಾಪುಗಾಲು ಹಾಕಿದ್ದಾರೆ. ಹೋಮ್ ಸ್ಕೂಲ್ ಪ್ರಾರಂಭಿಸಿದ್ದರಿಂದ ಶೇ.60ರಷ್ಟು ಮಕ್ಕಳು ಹೆಚ್ಚು ಪಗ್ರತಿ ಸಾಧಿಸಲು ಸಹಕಾರಿಯಾಯಿತು. ಈ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮದಿಂದ ನಮ್ಮ ಜಿಲ್ಲೆಯ 14ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಬರಲು ಕಾರಣವಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೂ ಸಹ ಈ ಎಲ್ಲಾ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ.
Advertisement
ತಾಲೂಕಿನ ಚಪ್ಪರದಕಲ್ಲು ಸರ್ಕಲ್ನಲ್ಲಿರುವ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಪರೀಕ್ಷೆಗೂ ಮುನ್ನ ನಿಕಟ ಪೂರ್ವ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡ, ಜಿಲ್ಲಾ ಪ್ರಗತಿ ಪರಿಶೀಲನ ಸಭೆಯಲ್ಲಿ ಈ ವರ್ಷ ಫಲಿತಾಂಶ ಸುಧಾರಣೆಗೆ ಕರೆಕೊಟ್ಟು ಸೂಕ್ತ ಸಲಹೆಗಳನ್ನು ನೀಡಿದ್ದರು ಎಂದರು.
Related Articles
Advertisement
ಹ್ಯಾಪಿ ಹೋಮ್ ಸ್ಕೂಲ್ನ ಪ್ರಯೋಗ ಪ್ರಾರಂಭವಾದ ಶಾಲೆಯಾದ ಜಿಜೆಸಿ ವಿಶ್ವನಾಥಪುರದಲ್ಲಿ ಒಟ್ಟು 13 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು ಹ್ಯಾಪಿ ಹೋಂ ಸ್ಕೂಲ್ನ ಯಶೋಗಾಥೆ ಎಂದೇ ಹೇಳಬಹುದು ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ.ಆರ್.ನಾಗರಾಜಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೃಷ್ಣಮೂರ್ತಿ, ಜಿಪಂ ಮುಖ್ಯಾಲೆಕ್ಕಾಕಾರಿ ಶೋಭಾ, ಯೋಜನಾಕಾರಿ ವಿನುತಾ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿಯ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹನುಮಂತಪ್ಪ, ಮತ್ತಿತರರು ಇದ್ದರು. ಪತ್ರಿಕಾಗೋಷ್ಠಿಗೂ ಮುನ್ನ ರಂಗಭೂಮಿ ಹಾಸ್ಯ ಕಲಾವಿದ ಮಾಸ್ಟರ್ ಹೀರಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದರು.
ಮಕ್ಕಳ ಫಲಿತಾಂಶ
ದೇವನಹಳ್ಳಿ ಪರೀಕ್ಷೆಗೆ ಕುಳಿತವರು 445 ಉತ್ತೀರ್ಣರಾದವರು 349, ಶೇ.78.43, ದೊಡ್ಡಬಳ್ಳಾಪುರ 608, 343, ಶೇ.56.41, ಹೊಸಕೋಟೆ 490, 352, ಶೇ. 71.83, ನೆಲಮಂಗಲ 441, 336 ಶೇ.76.19, ಒಟ್ಟು 1984 ಮಕ್ಕಳ ಪೈಕಿ 1380 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ.70ರಷ್ಟು ಫಲಿತಾಂಶ ಪಡೆದಿದ್ದಾರೆ. ಜಿಲ್ಲೆಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ನವ್ಯ 625ಕ್ಕೆ 619, ನಾಗೇಂದ್ರ ಕುಮಾರ್ 619 ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಶೇಕಡಾ ಫಲಿತಾಂಶ
•ಶೇ.93.30 ದೇವನಹಳ್ಳಿ
•ಶೇ. 92.15 ನೆಲಮಂಗಲ
•ಶೇ. 92.15 ನೆಲಮಂಗಲ
•ಶೇ. 89.16 ಹೊಸಕೋಟೆ
•ಶೇ. 79.69 ದೊಡ್ಡಬಳ್ಳಾಪುರ
•ಶೇ. 79.69 ದೊಡ್ಡಬಳ್ಳಾಪುರ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಎಸ್‌ಆರ್ ಅನುದಾನದಿಂದ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಉತ್ತೇಜನವನ್ನು ನೀಡಲಾಗುತ್ತಿದೆ. ಸಿಇಒ ಅವರು ಸಿಎಸ್‌ಆರ್ ಅನುದಾನ ನೀಡುವಂತೆ ಕೇಳಿದ್ದರು ಅದರಂತೆ ನೀಡಿದ್ದೇವೆ. ಇಂತಹ ಉತ್ತಮ ಫಲಿತಾಂಶ ಬಂದಿರುವುದಕ್ಕೆ ಸಂತಸವಾಗಿದೆ.
●ಹೇಮಂತ್ ಮಾರೇಗೌಡ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ವ್ಯವಸ್ಥಾಪಕ
●ಹೇಮಂತ್ ಮಾರೇಗೌಡ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯ ವ್ಯವಸ್ಥಾಪಕ