ಕಡಬ: ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಗಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಧಿಕೊಂಡಿರುವ ಮೂವರು ವಿದ್ಯಾರ್ಥಿಗಳ ಪೈಕಿ ಕಡಬದ ಸೈಂಟ್ ಜೋಕಿಮ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಪೂರ್ಣಾನಂದ ಎಚ್. ಕೂಡ ಓರ್ವ.
ಪರೀಕ್ಷೆಗಳ ಸಂದರ್ಭ ಸಹಿತ ಯಾವುದೇ ವಿಚಾರಕ್ಕೂ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ಈತ ಮನೆಯಲ್ಲಿ ಬೆಳಗ್ಗೆ ಬೇಗ ಎದ್ದು ಹೈನುಗಾರಿಕೆ ಸೇರಿದಂತೆ ಇತರ ಕೆಲಸ ಕಾರ್ಯಗಳಲ್ಲಿ ತಾಯಿಗೆ ನೆರವಾಗಿ ಬಳಿಕ 1.5 ಕಿ. ಮೀ. ದೂರ ಕಾಲ್ನಡಿಗೆಯಲ್ಲಿ ಹೊಸ್ಮಠಕ್ಕೆ ಬಂದು ಅಲ್ಲಿಂದ 4 ಕಿ. ಮೀ. ದೂರದ ಕಡಬಲ್ಲಿರುವ ಶಾಲೆಗೆ ಸರಕಾರಿ ಬಸ್‌ನಲ್ಲಿ ಬರುತ್ತಿದ್ದ ಈತ ಮನೆಯಲ್ಲಿ ಓದುತ್ತಲೇ ಇರಲಿಲ್ಲ ಎನ್ನುತ್ತಾರೆ ಆತನ ತಾಯಿ ಸವಿತಾ.
ಕಡಬ ಬಳಿಯ ಕುಟ್ರಾಪ್ಪಾಡಿ ಗ್ರಾಮದ ಹೊಸ್ಮಠ ಸಮೀಪದ ಹಳ್ಳಂಗೇರಿ ಎನ್ನುವ ಹಳ್ಳಿಯ ಕೃಷಿ ಕುಟುಂಬದ ಈ ಬಾಲಕನ ತಂದೆ ವಿಷ್ಣುಮೂರ್ತಿ ಎಚ್. ಉಪಾಧ್ಯಾಯ ಪುತ್ತೂರಿನ ವಿವೇಕಾನಂದ ಪಾಲೆಟೆಕ್ನಿಕ್‌ನ ಉಪನ್ಯಾಸಕ, ತಾಯಿ ಸವಿತಾ ಸಿ.ಜಿ. ಗೃಹಿಣಿ. ಅವರ ಇಬ್ಬರು ಪುತ್ರರಲ್ಲಿ ಕಿರಿಯವ ಪೂರ್ಣಾನಂದ. ಸುಳ್ಯದ ಕೆವಿಜಿ ಪಾಲಿಟೆಕ್ನಿಕ್‌ನಲ್ಲಿ ಗ್ರಂಥಪಾಲಕಿಯಾಗಿದ್ದ ಆತನ ತಾಯಿ ಸವಿತಾ ಸಿ.ಜಿ. ಪ್ರಸ್ತುತ ಕೆಲಸ ಬಿಟ್ಟು ಗೃಹಿಣಿಯಾಗಿದ್ದುಕೊಂಡು ಸಂಗೀತ ಹಾಡುಗಾರಿಕೆಯಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಅಣ್ಣ ಶ್ರೀರಾಮ ಎಚ್. ಕೂಡ ಕಡಬದ ಸೈಂಟ್ ಜೋಕಿಮ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ. ಮಂಗಳೂರಿನಲ್ಲಿ ಜಿಟಿಟಿಸಿ ವೃತ್ತಿಕೌಶಲ ತರಬೇತಿ ಮುಗಿಸಿ ಪ್ರಸ್ತುತ ಬೆಂಗಳೂರಿನಲ್ಲಿ ವೃತ್ತಿ ತರಬೇತಿ ಪಡೆಯುತ್ತಿದ್ದಾನೆ.
ಕಲಿಕೆಯೊಂದಿಗೆ ಮೃದಂಗ ಹಾಗೂ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಮುಗಿಸಿರುವ ಪೂರ್ಣಾನಂದ ಇದೀಗ ಸೀನಿಯರ್ ಪರೀಕ್ಷೆ ಎದುರಿಸಲು ಸಜ್ಜಾಗುತ್ತಿದ್ದಾನೆ. ತರಗತಿಯಲ್ಲಿ ಯಾವತ್ತೂ ಪ್ರಥಮ ಸ್ಥಾನವನ್ನು ಇತರರಿಗೆ ಬಿಟ್ಟುಕೊಡದ ಪೂರ್ಣಾನಂದ ಮನೆಪಾಠಕ್ಕೂ ಹೋಗಿಲ್ಲ. ಯಾವುದೇ ಕೋಚಿಂಗ್ ಕ್ಲಾಸ್‌ಗೂ ಸೇರಿಲ್ಲ. ಶಾಲೆಯಲ್ಲಿ ಎಲ್ಲ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ವ್ಯವಸ್ಥೆಗೊಳಿಸುತ್ತಿದ್ದ 1 ಗಂಟೆಯ ವಿಶೇಷ ತರಗತಿ ಬಿಟ್ಟರೆ ಯಾವುದೇ ಹೆಚ್ಚಿನ ಕಲಿಕಾ ತರಬೇತಿಯೂ ಆತನಿಗೆ ಇರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.
620 ಅಂಕ ಸಿಗಬಹುದು ಎನ್ನುವ ನಿರೀಕ್ಷೆ ನನಗಿತ್ತು. ಆದರೆ 625 ಸಿಕ್ಕಿರುವುದು ಅತ್ಯಂತ ಸಂತಸ ತಂದಿದೆ. ನನ್ನ ಶಿಕ್ಷಕರು ಹಾಗೂ ಹೆತ್ತವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ವ್ಯಾಸಂಗ ಮಾಡಬೇಕೆಂದಿದೆ. ಪಿಯುಸಿ ಬಳಿಕ ಏನು ಎನ್ನುಧಿವುದು ಇನ್ನೂ ನಿರ್ಧರಿಸಿಲ್ಲ. ಅಂದಂದಿನ ಪಾಠಗಳನ್ನು ಅಂದಂದೇ ಸರಿಯಾಗಿ ಮನನ ಮಾಡಿಕೊಳ್ಳುತ್ತಿದ್ದೆ. ನಿದ್ದೆಗೆಟ್ಟು ಓದಿಲ್ಲ. ಹೆಚ್ಚಿನ ಒತ್ತಡವನ್ನೂ ತಲೆಗೆ ತೆಗೆದುಕೊಂಡಿಲ್ಲ. ಸಹಜವಾಗಿ ಪರೀಕ್ಷೆ ಎದುರಿಸಿದ್ದೆ.
-ಪೂರ್ಣಾನಂದ ಎಚ್.