ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಹತ್ತನೇ ತರಗತಿ (ಎಸ್ಎಸ್ಎಲ್ ಸಿ) ವಿದ್ಯಾರ್ಥಿಗಳ ಮುಖ್ಯ ಪರೀಕ್ಷೆ ನಡೆಯುತ್ತಿದೆ. ಸುಮಾರು 8.74 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 3,444 ಪರೀಕ್ಷೆ ಕೇಂದ್ರಗಳಲ್ಲಿ ರಾಜ್ಯ ಸರ್ಕಾರ ಸಕಲ ಸಿದ್ದತೆ ನಡೆಸಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಹೈಕೋರ್ಟ್ ಆದೇಶದಂತೆ ಪರೀಕ್ಷಾ ಕೊಠಡಿಗಳಿಗೆ ಹಿಜಾಬ್ ಧರಿಸಬಾರದು ಎಂದು ಸೂಚಿಸಲಾಗಿದೆ. ಶಾಲಾ ಆವರಣದಲ್ಲಿ ಹಿಜಾಬ್ ತೆಗೆದು ಪರೀಕ್ಷಾ ಕೊಠಢಿಗೆ ತೆರಳಬೇಕು ಎಂದು ಸೂಚಿಸಲಾಗಿದೆ.
ಅದರಂತೆ ಇಂದು ರಾಜ್ಯದಲ್ಲಿ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಿದ್ದು, ಹಿಜಾಬ್ ಧರಿಸದೇ ಪರೀಕ್ಷಾ ಕೊಠಢಿಗೆ ತೆರಳಿದ್ದಾರೆ. ವಿದ್ಯಾರ್ಥಿನಿಯರು ಶಾಲೆಯ ಗೇಟ್ ಬಳಿ ಹಿಜಾಬ್, ಬುರ್ಖಾ ತೆಗೆದೆ ಒಳಹೋಗುತ್ತಿದ್ದ ದೃಶ್ಯಗಳು ಕಂಡುಬಂತು.
ಇದನ್ನೂ ಓದಿ:ಉಡುಪಿ: ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ವಿದ್ಯಾರ್ಥಿಗಳಿಗೆ ಶುಭ ಹಾರೈಕೆ
ಹಲವೆಡೆ ಪರೀಕ್ಷಾ ಕೇಂದ್ರಗಳ ಬಳಿ ಆಗಮಿಸಿದ ಮುಸ್ಲಿಂ ಮುಖಂಡರು, ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ಪರೀಕ್ಷೆಗೆ ತೆರಳುವಂತೆ ಮನವೊಲಿಸುವ ದೃಶ್ಯಗಳು ಕಂಡು ಬಂತು. ಅನೇಕ ಶಾಲೆಯಲ್ಲಿ ಧ್ವನಿವರ್ಧಕ ಮೂಲಕ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಯಿತು.