Advertisement

ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ: ಸಿದ್ಧತೆ ಪೂರ್ಣ

01:00 AM Mar 20, 2019 | Harsha Rao |

ಮಂಗಳೂರು/ಉಡುಪಿ: ರಾಜ್ಯದಲ್ಲಿ ಮಾ. 21ರಿಂದ ಎ. 4ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿವೆ. ಪಾರ
ದರ್ಶಕ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸುವ ಸಲುವಾಗಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಉತ್ತರ ಪತ್ರಿಕೆಗಳನ್ನು ಇರಿಸುವ ಭದ‌Åತಾ ಕೊಠಡಿಗಳಲ್ಲಿ ಸಿ.ಸಿ. ಕೆಮರಾ ಅಳವಡಿಸಲಾಗಿದೆ.

Advertisement

ದಕ್ಷಿಣ ಕನ್ನಡದಲ್ಲಿ ಈ ಬಾರಿ 31,192 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಪೈಕಿ 16,645 ಹುಡುಗರು ಮತ್ತು 14,547 ಹುಡುಗಿಯರು. 90 ಸಾಮಾನ್ಯ ಮತ್ತು 5 ಖಾಸಗಿ ಸಹಿತ ಒಟ್ಟು 95 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ
ನಡೆಯಲಿದೆ. ಈ ಪೈಕಿ ಬಂಟ್ವಾಳ ತಾಲೂಕಿನಲ್ಲಿ 17, ಬೆಳ್ತಂಗಡಿಯಲ್ಲಿ 13, ಮಂಗಳೂರು ಉತ್ತರ ಮತ್ತು ದಕ್ಷಿಣ
ವಲಯಗಳಲ್ಲಿ ತಲಾ 21, ಮೂಡುಬಿದಿರೆಯಲ್ಲಿ 5, ಪುತ್ತೂರಿನಲ್ಲಿ 12 ಹಾಗೂ ಸುಳ್ಯದಲ್ಲಿ 6 ಪರೀಕ್ಷಾ ಕೇಂದ್ರಗಳಿವೆ.

ಮಂಗಳೂರಿನಲ್ಲಿ ಗರಿಷ್ಠ ವಿದ್ಯಾರ್ಥಿಗಳು ಬೆಳ್ತಂಗಡಿ ತಾಲೂಕಿನಲ್ಲಿ 3,491, ಬಂಟ್ವಾಳದಲ್ಲಿ 5,625, ಸುಳ್ಯದಲ್ಲಿ 2,030, ಪುತ್ತೂರಿನಲ್ಲಿ 5,750 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಪುತ್ತೂರು ತಾಲೂಕಿನಲ್ಲಿಯೇ ಅತಿಹೆಚ್ಚು ಮಂದಿ ಪರೀಕ್ಷೆ ಬರೆಯಲಿದ್ದಾರೆ. ಮಂಗಳೂರು ತಾಲೂಕು ಗರಿಷ್ಠ ಎಸೆಸೆಲ್ಸಿ ಪರೀಕ್ಷಾರ್ಥಿಗಳನ್ನು ಹೊಂದಿದೆ. ಮಂಗಳೂರು ಉತ್ತರದಲ್ಲಿ 3,384 ಮಂದಿ ಹುಡುಗರು ಮತ್ತು 2,737 ಮಂದಿ ಹುಡುಗಿಯರು ಸೇರಿ 6,121ಮಂದಿ; ಮಂಗಳೂರು ದಕ್ಷಿಣದಲ್ಲಿ 2,839 ಮಂದಿ ಹುಡುಗರು ಮತ್ತು 2,878 ಮಂದಿ ಹುಡುಗಿಯರು ಸೇರಿ 5,717 ಮಂದಿ ಪರೀಕ್ಷೆ ಬರೆಯಲಿದ್ದಾರೆ. 

ಉಡುಪಿಯಲ್ಲಿ ಬಾಲಕರೇ ಅಧಿಕ
ಉಡುಪಿ ಜಿಲ್ಲೆಯಲ್ಲಿ 14,214 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 7,371 ಹುಡುಗರು, 6,843 ಹುಡುಗಿಯರು. ರೆಗ್ಯುಲರ್‌ ವಿದ್ಯಾರ್ಥಿಗಳಲ್ಲಿ 6,588 ಹುಡುಗರು, 6,515 ಹುಡುಗಿಯರು, ಒಟ್ಟು 13,103 ವಿದ್ಯಾರ್ಥಿಗಳಿದ್ದಾರೆ. ಖಾಸಗಿ ಯವರಲ್ಲಿ 294 ಹುಡುಗರು, 110 ಹುಡುಗಿಯರು ಸೇರಿ ಒಟ್ಟು 404 ವಿದ್ಯಾರ್ಥಿಗಳಿದ್ದಾರೆ. ರೆಗ್ಯುಲರ್‌ ಪುನರಾವರ್ತಿತರಲ್ಲಿ 403 ಹುಡುಗರು, 180 ಹುಡುಗಿಯರು ಒಟ್ಟು 583 ಮಂದಿ ಇದ್ದಾರೆ. ಖಾಸಗಿ ಪುನರಾವರ್ತಿತರಲ್ಲಿ 88 ಹುಡುಗರು, 38 ಹುಡುಗಿಯರು ಸೇರಿ ಒಟ್ಟು 126 ಮಂದಿ ಇದ್ದಾರೆ.

51 ಪರೀಕ್ಷಾ ಕೇಂದ್ರ
ಜಿಲ್ಲೆಯಲ್ಲಿ 49 ಸಾಮಾನ್ಯ ಮತ್ತು 2 ಖಾಸಗಿ ಸೇರಿ ಒಟ್ಟು 51 ಪರೀಕ್ಷಾ ಕೇಂದ್ರಗಳಿವೆ. ಬೈಂದೂರು ವಲಯದ  8 ಕೇಂದ್ರಗಳಲ್ಲಿ ಒಟ್ಟು 2,092 ವಿದ್ಯಾರ್ಥಿಗಳು, ಕುಂದಾಪುರ ವಲಯದ 8 ಕೇಂದ್ರಗಳಲ್ಲಿ 2,528 ವಿದ್ಯಾರ್ಥಿಗಳು, ಬ್ರಹ್ಮಾವರ ವಲಯದ 11 ಕೇಂದ್ರಗ ಳಲ್ಲಿ 2,927 ವಿದ್ಯಾರ್ಥಿಗಳು, ಉಡುಪಿ ವಲಯದ 15 ಕೇಂದ್ರಗಳಲ್ಲಿ 3,749
ವಿದ್ಯಾರ್ಥಿಗಳು, ಕಾರ್ಕಳ ವಲಯದ 9 ಕೇಂದ್ರಗಳಲ್ಲಿ 2,918 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

Advertisement

438 ಪರೀಕ್ಷಾ ಕೇಂದ್ರಗಳ ಕೊಠಡಿ ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಉತ್ತರ ಪತ್ರಿಕೆಗಳನ್ನು ಇರಿಸಲು ಭದ್ರತಾ ಕೊಠಡಿಯ ವ್ಯವಸ್ಥೆಯನ್ನು ಉಡುಪಿ ಕ್ರಿಶ್ಚಿಯನ್‌ ಪ್ರೌಢಶಾಲೆಯಲ್ಲಿ ಮಾಡಲಾಗಿದೆ.

ಮುನ್ನೆಚ್ಚರಿಕೆ ಕ್ರಮ
ಪರೀಕ್ಷಾ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದೆ.
ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್‌ ಅಂಗಡಿಗಳನ್ನು ಪರೀಕ್ಷೆ ಪ್ರಾರಂಭಕ್ಕೆ ಒಂದು ಗಂಟೆ ಮುಂಚಿತವಾಗಿ ಹಾಗೂ ಅವಧಿಯಲ್ಲಿ ಮುಚ್ಚಿಸಲು ನಿರ್ದೇಶಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.

ಪರೀಕ್ಷಾ ಟಿಪ್ಸ್‌
– ಪರೀಕ್ಷೆ ಬಗ್ಗೆ ಆತಂಕ ಬೇಡ. ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ
– ಮುಂಜಾನೆ ಸಮಯದಲ್ಲಿ ಓದಿ; ರಾತ್ರಿ ನಿದ್ದೆಗೆಡಬೇಡಿ
– ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯನ್ನು ಅಧ್ಯಯನಿಸಿ
– ಗ್ರೂಪ್‌ ಸ್ಟಡಿ ಮಾಡುವುದರಿಂದ ಅಂಕ ಗಳಿಕೆಗೆ ಪೂರಕ
– ಪರೀಕ್ಷಾ ಸಮಯದಲ್ಲಿ ಆರೋಗ್ಯದ ಕಡೆಗೂ ಗಮನವಿರಲಿ; ಆಹಾರಕ್ರಮ ಸರಿಯಾಗಿರಲಿ
– ಪ್ರಶ್ನೆ ಪತ್ರಿಕೆಗಳಲ್ಲಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ
– ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕದಿರಿ

ಎಂಡೋ ಸಂತ್ರಸ್ತರಿಗೆ ವಿಶೇಷ ಅವಕಾಶ
ಖಾಸಗಿಯಾಗಿ ಎಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಇಬ್ಬರು ಎಂಡೋ ಸಂತ್ರಸ್ತ ವಿದ್ಯಾರ್ಥಿಗಳು ತಮ್ಮ ಸನಿಹದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಇಚ್ಛಿಸಿದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವಿಶೇಷ ಪ್ರಕರಣದಡಿಯಲ್ಲಿ ಅನುಮತಿ ನೀಡಲಾಗಿದೆ ಎಂದು ಡಿಡಿಪಿಐ ವೈ. ಶಿವರಾಮಯ್ಯ ತಿಳಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷೆಗಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. 
-ವೈ. ಶಿವರಾಮಯ್ಯ, ಶೇಷಶಯನ ಕಾರಿಂಜ, ಡಿಡಿಪಿಐ, ದ.ಕ., ಉಡುಪಿ. 

“ಪರೀಕ್ಷೆ ಸುಸೂತ್ರವಾಗಿ ನಡೆಯಲು ಬೇಕಾದ ಸಿದ್ಧತಾ ಕ್ರಮಗಳು ಈಗಾಗಲೇ ನಡೆದಿವೆ. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ.
– ಶಮಂತ್‌, ವೆಂಕಟೇಶ ನಾಯಕ್‌, ಡಿಡಿಪಿಐ ಕಚೇರಿ ನೋಡಲ್‌ ಅಧಿಕಾರಿಗಳು, ದ.ಕ., ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next