ಉಡುಪಿ/ ಮಂಗಳೂರು: ಉಭಯ ಜಿಲ್ಲೆಗಳಲ್ಲಿ ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾಡಳಿತಗಳು ಎಲ್ಲ ಸಿದ್ಧತೆಯ ಜತೆಗೆ ಪರೀಕ್ಷಾ ಕೇಂದ್ರದ ಭದ್ರತೆ ಹಾಗೂ ವಿದ್ಯಾರ್ಥಿಗಳ ಸುರಕ್ಷೆಗೂ ಕ್ರಮ ತೆಗೆದುಕೊಂಡಿವೆ.
ಮೊದಲ ದಿನ ಪ್ರಥಮ ಭಾಷಾ ಪರೀಕ್ಷೆ ನಡೆಯಲಿದ್ದು, ಬೆಳಗ್ಗೆ 10.30ರಿಂದ ಅಪರಾಹ್ನ 1.45ರ ವರೆಗೆ ಪರೀಕ್ಷೆ ನಡೆಯಲಿದೆ. ಎ. 15ರಂದು ಪರೀಕ್ಷೆ ಕೊನೆಗೊಳ್ಳಲಿದೆ.
ಉಡುಪಿ ಜಿಲ್ಲೆಯ 270 ಶಾಲೆಗಳ ಹೊಸ, ಖಾಸಗಿ, ಪುನರಾವರ್ತಿತರು ಸೇರಿದಂತೆ 13,633 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಸರಕಾರಿ ಶಾಲೆಯ 6,579, ಖಾಸಗಿ ಶಾಲೆಯ 4,162 ಹಾಗೂ ಅನುದಾನಿತ ಶಾಲೆಯ 2,892 ವಿದ್ಯಾರ್ಥಿಗಳಿದ್ದಾರೆ. 7,104 ಬಾಲಕರು ಹಾಗೂ 6,259 ಬಾಲಕಿಯರು ಸೇರಿದ್ದಾರೆ. 53 ಸರಕಾರಿ ಹಾಗೂ 2 ಖಾಸಗಿ ಸೇರಿ 55 ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29,572 ಮಂದಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 28,705 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದು, 867 ಮಂದಿ ಖಾಸಗಿ ವಿದ್ಯಾರ್ಥಿಗಳು. 94 ಸರಕಾರಿ ಹಾಗೂ 4 ಖಾಸಗಿ ಸೇರಿದಂತೆ 98 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ಉಭಯ ಜಿಲ್ಲೆಗಳಲ್ಲಿ ಪರೀಕ್ಷೆಗೆ ನಿಯೋಜಿಸಿರುವ ಅಧಿಕಾರಿಗಳು, ಮೇಲ್ವಿಚಾರಕರು ಗುರುವಾರ ಬೆಳಗ್ಗೆಯಿಂದಲೇ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಡೆಸ್ಕ್ ಮತ್ತು ಬೋರ್ಡ್ ಮೇಲೆ ಬರೆದಿಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೇಂದ್ರದ ಒಳಭಾಗದ ಸೂಚನ ಫಲಕ ಗಳಲ್ಲಿಯೂ ನೋಂದಣಿ ಸಂಖ್ಯೆಯ ಮಾಹಿತಿಯನ್ನು ಹಾಕಲಾಗಿದೆ.
ಭದ್ರತೆಯ ದೃಷ್ಟಿಯಿಂದ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಸಿಬಂದಿ ನಿಯೋಜನೆಯನ್ನು ಮಾಡಲಾಗಿದೆ. ಎಲ್ಲ ಕಡೆ ಸಿಸಿ ಕೆಮರಾ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಖಜಾನೆಯಿಂದ ಪ್ರಶ್ನೆಪತ್ರಿಕೆಯನ್ನು ಯಾವ ಮಾರ್ಗ ದಲ್ಲಿ ಕೊಂಡೊಯ್ಯಬೇಕು ಎಂಬುದನ್ನು ಅಧಿಕಾರಿಗಳಿಗೆ ಜಿಲ್ಲಾಡಳಿತ ಹಾಗೂ ಇಲಾಖೆಯಿಂದ ಸೂಚಿಸಲಾಗಿದೆ. ಕೊಠಡಿ ಮೇಲ್ವಿಚಾರಕರು ಸಹಿತವಾಗಿ ವಿಚಕ್ಷಣದ ದಳದ ಸಿಬಂದಿಗೂ ಅಗತ್ಯ ಸೂಚನೆಯನ್ನು ರವಾನೆ ಮಾಡಲಾಗಿದೆ.