Advertisement

ಕೋವಿಡ್-19 ಭೀತಿ: ಎಪ್ರಿಲ್ 20ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿ ಆದೇಶ

11:05 AM Mar 27, 2020 | keerthan |

ಬೆಂಗಳೂರು: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಹಿತವಾಗಿ ವಿವಿಧ ಶಾಲಾ ಹಂತದ ಪರೀಕ್ಷೆಯನ್ನು ಏಪ್ರಿಲ್ 20ರ ತನಕ ಮುಂದೂಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Advertisement

ಕೋವಿಡ್-19 ವೈರಸ್ ಸೋಂಕು ತಡೆಗಟ್ಟುವಿಕೆಯ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ 10ನೇ ತರಗತಿಯ ಪರೀಕ್ಷೆಗಳನ್ನು ಮಾ.31ರವರೆಗೆ ಮುಂದೂಡಲಾಗಿತ್ತು.  ಆದರೆ ರಾಜ್ಯದಲ್ಲಿ ಕೋವಿಡ್-19 ಭೀತಿ ಹೆಚ್ಚುತ್ತಲೇ ಇರುವುದರಿಂದ ಹಾಗೂ ಏ.14ರವರೆಗೆ ಇಡೀ ದೇಶವೇ ಲಾಕ್ ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಹಿನ್ನೆಲೆಯಲ್ಲಿ ಏ.20ರವರೆಗೆ ಕೆಳಕಂಡ ಪರೀಕ್ಷೆ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

7ರಿಂದ 9ನೇ ತರಗತಿಯ ಪರೀಕ್ಷೆಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆ, ಆರ್ ಟಿಇ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಹಾಗೂ ಶಾಲೆಗಳಲ್ಲಿ 2020-21ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಏಪ್ರಿಲ್ 20ರ ನಂತರ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಈ ವಿಷಯವನ್ನು ವಿದ್ಯಾರ್ಥಿಗಳಿಗೆ ಮತ್ತು ಪಾಲಕ, ಪೋಷಕರಿಗೆ ವಾಟ್ಸಪ್, ಎಸ್ಎಂಎಸ್, ಇ-ಮೇಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ರವಾನಿಸಲು ಶಾಲಾ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಅವರಿಗೆ ನಿರ್ದೇಶನ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next