ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಜೂ.25ರಿಂದ ಜು.4ರ ವರೆಗೆ ನಡೆಯಲಿದ್ದು, ಹಾಸನ ಜಿಲ್ಲೆಯ ಎಲ್ಲ 89 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. 21,257 ವಿದ್ಯಾರ್ಥಿ ಗಳು ಹಾಗೂ ಹೊರ ಜಿಲ್ಲೆಗಳ 501 ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆ ಬರೆವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
1,600 ಸಿಬ್ಬಂದಿ ನಿಯೋಜನೆ: ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ 18ರಿಂದ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪರೀಕ್ಷಾ ಕಾರ್ಯಕ್ಕೆ 1,600 ಸಿಬ್ಬಂದಿ ಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಾಗ ಥರ್ಮಲ್ ಸ್ಕಾನಿಂಗ್‌ಗೆ ಒಳಪಡುವುದನ್ನು ಕಡ್ಡಾಗೊಳಿಸಲಾಗಿದೆ.
ವಿದ್ಯಾರ್ಥಿಗಳು ತಮ್ಮೊಂದಿಗೆ ಕುಡಿಯುವ ನೀರಿನ ಬಾಟಲ್, ಸ್ಯಾನಿಟೈಸರ್, ಛತ್ರಿ, ಉಪಹಾರದ ಡಬ್ಬಿ, ಪಠ್ಯ ಪುಸ್ತಕದ, ನೋಟ್ ಪುಸ್ತಕವಿರುವ ಬ್ಯಾಗ್ ತರಲಿಕ್ಕೆ ಅವಕಾಶ ನೀಡಲಾಗಿದೆ. ಬ್ಯಾಗ್ ಮೇಲೆ ಪರೀಕ್ಷಾ ರ್ಥಿಯ ಹೆಸರು, ರಿಜಿಸ್ಟರ್ ನಂಬರ್ ಒಳಗೊಂಡ ಲೇಬಲ್ ಹೊಂದಿರುವುದು ಕಡ್ಡಾಯ. ವಿದ್ಯಾರ್ಥಿಗಳು ಬೆಳಗ್ಗೆ 7.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರಬಹುದಾಗಿದ್ದು, 9.45ರ ವರೆಗೂ ಓದಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.
ಆರೋಗ್ಯ ತಪಾಸಣೆ: ಪರೀಕ್ಷಾ ಕೇಂದ್ರದ ದ್ವಾರದಲ್ಲಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರವನ್ನು ತರೆಯ ಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ನೋಡಿಕೊಳ್ಳಲಿದ್ದು, ಇಬ್ಬರು ಸ್ಕೌಟ್ಸ್ – ಗೈಡ್ಸ್ ಸ್ವಯಂ ಸೇವಕರು ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಂದಿಗೆ ಪರೀಕ್ಷಾರ್ಥಿ ಗಳಿಗೆ ನೆರವಾಗುವರು. ಕಂಟೈನ್‌ಮೆಂಟ್ ಝೋನ್‌ನಿಂದ ಬರುವ ಹಾಗೂ ಕೊರೊನಾ ರೋಗ ಲಕ್ಷಣಗಳಿದ್ದ ವಿದ್ಯಾರ್ಥಿಗಳಿಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಎರಡು ಹೆಚ್ಚುವರಿ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ಪರೀಕ್ಷಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ: ಎಲ್ಲ 21,257 ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹೇಗೆ ಬರುತ್ತಾರೆಂಬುದನ್ನು ಖಾತರಿಪಡಿಸಿ ಕೊಳ್ಳಲಾಗಿದೆ. 3,500 ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ, 13,866 ವಿದ್ಯಾರ್ಥಿಗಳು ಪೋಷಕರೊಂದಿಗೆ , 266 ವಿದ್ಯಾರ್ಥಿಗಳು ಸೈಕಲ್‌ನಲ್ಲಿ, 432 ವಿದ್ಯಾರ್ಥಿಗಳು ಖಾಸಗಿ ಶಾಲಾ ವಾಹನಗಳ ಮೂಲಕ, 2952 ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಪರೀಕ್ಷೆಗೆ ಬರಲಿದ್ದು, 241 ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಬರಲಿದ್ದಾರೆ.
ಬಸ್ಸುಗಳ ಮೂಲಕ ಪರೀಕ್ಷೆಗೆ ಬರಲಿರುವ 2952 ವಿದ್ಯಾರ್ಥಿಗಳಿಗೆ 142 ಬಸ್ಸುಗಳ ವ್ಯವಸ್ಥೆ ಹಾಗೂ 342 ನಿಲುಗಡೆ ಗುರ್ತಿಸ ಲಾಗಿದೆ. ಬಸ್ಸುಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ವಿವರ ನೀಡಿದರು. ಡಿಡಿಪಿಐ ಪ್ರಕಾಶ್, ಡಿಎಚ್‌ಒ ಡಾ. ಸತೀಶ್ ಕುಮಾರ್ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.